ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷ್ಯಚಿತ್ರ ʼಇಂಡಿಯಾ: ದ ಮೋದಿ ಕ್ವೆಶ್ಚನ್ʼಗೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಾಗೂ ಪತ್ರಕರ್ತ ಎನ್ ರಾಮ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ [ಎನ್ ರಾಮ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸಾಕ್ಷ್ಯಚಿತ್ರ ಹಾಗೂ ಆ ಕುರಿತಂತೆ ಮಹುವಾ ಹಾಗೂ ಪ್ರಶಾಂತ್ ಅವರು ಮಾಡಿದ್ದ ಟ್ವೀಟ್‌ಗಳಿಗೆ ಸಂವಿಧಾನದ 19(1)(ಎ) ಅಡಿ ರಕ್ಷಣೆ ಇದೆ. ಸಾಕ್ಷ್ಯಚಿತ್ರದಲ್ಲಿರುವ ಅಂಶಗಳು ಸಂವಿಧಾನದ 19(2) ಅಥವಾ ಬಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ ಸೆಕ್ಷನ್ 69ಎ ಅಡಿ ವಿಧಿಸಲಾದ ನಿರ್ಬಂಧಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಅರ್ಜಿ ಪ್ರತಿಪಾದಿಸಿದೆ.
ಮನವಿಯ ಪ್ರಮುಖ ಅಂಶಗಳು
ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ಸರ್ಕಾರ ಅಥವಾ ಅದರ ನೀತಿ ಕುರಿತಾದ ಟೀಕೆಗಳನ್ನು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕೂಡ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಉಲ್ಲಂಘಿಸಲು ಬಳಸುವಂತಿಲ್ಲ.
ಪತ್ರಿಕೆಗಳು ಸೇರಿದಂತೆ ಎಲ್ಲಾ ನಾಗರಿಕರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಮಾಹಿತಿಯನ್ನು ಪಡೆಯುವ ಮತ್ತು ಪ್ರಸಾರ ಮಾಡುವ ಹಕ್ಕನ್ನು ಹೊಂದಿದ್ದು, ಸಾಕ್ಷ್ಯಚಿತ್ರದ ವಸ್ತುವಿಷಯವನ್ನು ವೀಕ್ಷಿಸುವ, ಜಾಗೃತಿ ಮೂಡಿಸುವಂತಹ, ಅಭಿಪ್ರಾಯ ರೂಪಿಸುವ, ವಿಮರ್ಶೆ ಮಾಡುವ, ವರದಿ ಮಾಡುವ ಹಾಗೂ ಕಾನೂನುಬದ್ಧವಾಗಿ ಪ್ರಸಾರ ಮಾಡುವ ಮೂಲಭೂತ ಹಕ್ಕನ್ನು ಹೊಂದಿರುತ್ತಾರೆ.
ಮಾಹಿತಿ ತಂತ್ರಜ್ಞಾನ ಕಾಯಿದೆಯ ನಿಯಮ 16ರ ಅಡಿ ತುರ್ತು ಅಧಿಕಾರ ಚಲಾಯಿಸಲು ಅಗತ್ಯ ಕಾರಣವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ತಿಳಿಸಿಲ್ಲ.
ಹೀಗಾಗಿ ಸಾಕ್ಷ್ಯಚಿತ್ರದ ಕುರಿತು ಪ್ರತಿಕ್ರಿಯಿಸುವಾಗ ಸರ್ಕಾರ ಅಗತ್ಯತೆ ಮತ್ತು ಪ್ರಮಾಣಾನುಗುಣತೆಗೆ ಬದಲಾಗಿ ತನ್ನ ಅನುಕೂಲತೆಯನ್ನು ಆಯ್ಕೆ ಮಾಡಿಕೊಂಡಿದೆ.
ಪಾರದರ್ಶಕವಲ್ಲದ ಆದೇಶ ಮತ್ತು ಪ್ರಕ್ರಿಯೆ ಮೂಲಕ ಕಾರ್ಯಾಂಗ ಅರ್ಜಿದಾರರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಿರುವುದು ಸ್ಪಷ್ಟವಾಗಿ ನಿರಂಕುಶವಾದ ಕ್ರಮ. ಏಕೆಂದರೆ ಇದು ಸಂವಿಧಾನದ 226 ಮತ್ತು 32ನೇ ವಿಧಿಯಡಿ ಒದಗಿಸಲಾದ ʼಆಡಳಿತವನ್ನು ನ್ಯಾಯಾಂಗ ಪರಾಮರ್ಶೆಗೊಳಪಡಿಸಲು ಕೋರುವ ಅರ್ಜಿದಾರರ ಹಕ್ಕನ್ನುʼ ನಿರಾಕರಿಸುತ್ತದೆ.
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ಎ (1)ರ ಪ್ರಕಾರ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಆದೇಶ ಬರವಣಿಗೆಯಲ್ಲಿರಬೇಕು ಮತ್ತು ಕಾರಣಗಳನ್ನು ದಾಖಲಿಸಿರಬೇಕು. ಪ್ರಸ್ತುತ ಪ್ರಕರಣದಲ್ಲಿ ಹಾಗೆ ಮಾಡದೆ ನಿರಂಕುಶವಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ.
ಆದ್ದರಿಂದ, ಸಾಕ್ಷ್ಯಚಿತ್ರದಲ್ಲಿರುವ ಮಾಹಿತಿಯನ್ನು ಸ್ವೀಕರಿಸುವ ಮತ್ತು ಪ್ರಸಾರ ಮಾಡುವ ಅರ್ಜಿದಾರರ ಹಕ್ಕನ್ನು ನಿರ್ಬಂಧಿಸದಂತೆ ಕೇಂದ್ರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಬೇಕು.
ಅಲ್ಲದೆ ಸಾಕ್ಷ್ಯಚಿತ್ರವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸೆನ್ಸಾರ್ ಮಾಡುವ ಎಲ್ಲಾ ಆದೇಶಗಳನ್ನು ರದ್ದುಗೊಳಿಸಬೇಕು.
ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ನಿನ್ನೆ ಅರ್ಜಿದಾರರು ಕೋರಿದಾಗ ಫೆಬ್ರವರಿ 6 ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸಮ್ಮತಿ ಸೂಚಿಸಿದರು.
ಇದೇ ವೇಳೆ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವುದು ಮನಸೋ ಇಚ್ಛೆಯಿಂದ ಕೂಡಿದ್ದು ಅಸಾಂವಿಧಾನಿಕವಾಗಿದೆ ಎಂದು ಆರೋಪಿಸಿ ಮತ್ತೊಬ್ಬ ವಕೀಲ ಎಂ ಎಲ್ ಶರ್ಮಾ ಅವರು ಕೂಡ ಇದೇ ಬಗೆಯ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯೂ ಫೆ. 6ರಂದೇ ನಡೆಯಲಿದೆ.