ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗಳ ನೇಮಕಾತಿ ವಿಳಂಬ ಸಂಬಂಧ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸರ್ಕಾರ ಹಾಗೂ ಬಿಬಿಎಂಪಿಗೆ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
2023ರ ಅಕ್ಟೋಬರ್ 9ರಂದು ವಿಚಾರಣೆ ನಡೆಸಿದಾಗ, ಅಕ್ರಮ ಕಟ್ಟಡಗಳನ್ನು ಗುರುತಿಸಿ ಹಾಗೂ ತೆರವು ಕಾರ್ಯಾಚರಣೆ ಕೈಗೊಳ್ಳಲು ಎಂಜಿನಿಯರ್ ಸೇರಿದಂತೆ ಇತರೆ ಸಿಬ್ಬಂದಿ ಅಗತ್ಯವಾಗಿದೆ. 100 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಬಿಬಿಎಂಪಿ ಪತ್ರ ಬರೆದಿತ್ತು ಎಂಬ ವಿಚಾರವನ್ನು ಪೀಠ ಗಮನಿಸಿತ್ತು. ಅದರ ಆಧಾರದ ಮೇಲೆ ಎಂಜಿನಿಯರಿಂಗ್ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಬಿಬಿಬಿಎಂಪಿ ಹಾಗೂ ಕೆಪಿಎಸ್‌ಸಿಗೆ ನ್ಯಾಯಾಲಯ ನಿರ್ದೇಶಿಸಿತ್ತು.
ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಪ್ರಮೋದ್ ಎನ್. ಕಟಾವಿ ಅವರು ಕಾಲಮಿತಿಯೊಳಗೆ ಎಂಜಿನಿಯರ್ ಹುದ್ದೆ ಭರ್ತಿ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಬಿಬಿಎಂಪಿ ನೇಮಕಾತಿ ಮಾಡಿದೆಯೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ತಿಳಿಸಿದರು.
ಬಿಬಿಎಂಪಿ ಪರ ವಕೀಲರು, 92 ಸಿವಿಲ್ ಎಂಜಿನಿಯರ್ ಹುದ್ದೆ ಭರ್ತಿ ಮಾಡಲು ಕೆಪಿಎಸ್‌ಸಿಗೆ ಬಿಬಿಎಂಪಿ ಕೋರಿದೆ. ಕೆಪಿಎಸ್‌ಸಿಯು ನೇಮಕಕ್ಕೆ ಅರ್ಜಿ ಆಹ್ವಾನಿಸಿ 2024ರ ಮಾರ್ಚ್ 13ರಂದು ಅಧಿಸೂಚನೆ ಸಹ ಹೊರಡಿಸಿದೆ. ಅಧಿಸೂಚನೆಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಲಾಗುವುದು ಎಂದರು.
ಅದಕ್ಕೆ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಎಂಜಿನಿಯರ್ ಹುದ್ದೆಗಳ ನೇಮಕಾತಿ ಸೂಚಿಸಿ 2023ರ ಅಕ್ಟೋಬರ್ 9ರಂದು ಹೈಕೋರ್ಟ್ ಗಂಭೀರ ಆದೇಶ ಮಾಡಿದೆ. ಆದರೆ, ಬಿಬಿಎಂಪಿ ಬಳಿ ಈಗ ಅಧಿಸೂಚನೆ ಇಲ್ಲ ಎಂದು ಹೇಳುತ್ತಿದ್ದೀರಿ. ನೋಟಿಫಿಕೇಷನ್ ಸೇರಿದಂತೆ ಎಲ್ಲಾ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಲ್ಲಿಸದೆ ಹೋದರೆ ಪೀಠವು ಆದೇಶದ ಮೇಲೆ ಆದೇಶ ಹೊರಡಿಸುತ್ತಾ ಹೋಗುತ್ತಿರುತ್ತದೆ. ಅದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಾ ಹೋಗುತ್ತದೆ ಎಂದು ಕಟುವಾಗಿ ನುಡಿದರು.
ಬಿಬಿಎಂಪಿ ಪರ ವಕೀಲರು, ಹೈಕೋರ್ಟ್ ಆದೇಶ ಹೊರಡಿಸಿದ ಕೂಡಲೇ ಕೆಪಿಎಸ್‌ಸಿಗೆ ಪಾಲಿಕೆ ಮಾಹಿತಿ ನೀಡಿದೆ. ಕೆಪಿಎಸ್‌ಸಿ ಅಹ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಕೆಪಿಎಸ್‌ಸಿಯೇ ನೇಮಕ ಪ್ರಕ್ರಿಯೆ ನಡೆಸಬೇಕಿದೆ. ಈ ಅರ್ಜಿಯಲ್ಲಿ ಅದು ಪ್ರತಿವಾದಿಯಾಗಿಲ್ಲ. ನಮಗಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಅದನ್ನು ಪರಿಗಣಿಸಿದ ಹೈಕೋರ್ಟ್, ಅರ್ಜಿಯಲ್ಲಿ ಕೆಪಿಎಸ್‌ಸಿ ಅನ್ನು ಪ್ರತಿವಾದಿ ಮಾಡಿ, ನೋಟಿಸ್ ಜಾರಿಗೊಳಿಸಿತು. ಅಲ್ಲದೇ, ಹಿಂದಿನ ಆದೇಶ ಪಾಲಿಸುವ ನಿಟ್ಟಿನಲ್ಲಿ ಬಿಬಿಎಂಪಿ ಸಿವಿಲ್ ಎಂಜಿನಿಯರ್ ನೇಮಕಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಕೆಪಿಎಸ್‌ಸಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.