ಬಿಬಿಎಂಪಿ ಕಾಮಗಾರಿಯಲ್ಲಿ ಅವ್ಯವಹಾರ: ಎಂಜಿನಿಯರ್‌ಗಳು, ಗುತ್ತಿಗೆದಾರರ ವಿರುದ್ಧ ಹೊಸದಾಗಿ ವಿಚಾರಣಾ ಪ್ರಕ್ರಿಯೆಗೆ ಆದೇಶ

ಟಿವಿಸಿಸಿ ವರದಿ ಇಲ್ಲದ ಸಂದರ್ಭದಲ್ಲಿ ಸೆಕೆಂಡರಿ ಸಾಕ್ಷ್ಯ ಒದಗಿಸಲು ಅವಕಾಶ ನೀಡಬೇಕಿತ್ತು. ಸಾಕ್ಷಿಗಳನ್ನು ಪರೀಕ್ಷೆಗೆ ಒಳಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶ ಕಲ್ಪಿಸಿಲ್ಲ. ಇದು ದೋಷಪೂರಿತ ಕ್ರಮ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.
Justice H P Sandesh and Karnataka HC
Justice H P Sandesh and Karnataka HC
Published on

ಬಿಬಿಎಂಪಿಯಲ್ಲಿ 2005 ಮತ್ತು 2012ರ ಅವಧಿಯಲ್ಲಿ ನಡೆದಿದ್ದ ಗುತ್ತಿಗೆ ಕಾಮಗಾರಿ ಅವ್ಯವಹಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿವೃತ್ತ ಮುಖ್ಯ ಎಂಜಿನಿಯರ್ ಬಿ ಟಿ ರಮೇಶ್‌ ಸೇರಿದಂತೆ ಹಲವು ಹಾಲಿ ಹಾಗೂ ನಿವೃತ್ತ ಎಂಜಿನಿಯರ್‌ ಮತ್ತು ಗುತ್ತಿಗೆದಾರರ ಮೇಲಿನ ಆರೋಪಗಳನ್ನು ಕೈಬಿಟ್ಟು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಗೊಳಿಸಿ, ಮಹತ್ವದ ವಿಸ್ತೃತ ಆದೇಶ ಪ್ರಕಟಿಸಿದೆ.

2023ರ ನವೆಂಬರ್‌ 8ರಂದು ಬೆಂಗಳೂರಿನ 77ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಇಡೀ ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿರುವ ಪೀಠವು ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಆಧಾರದ ಮೇಲೆ ಹೊಸದಾಗಿ ಪ್ರಕರಣ ಪರಿಗಣಿಸಬೇಕು. “ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ನೀಡಿರುವ ಪೂರ್ವಾನುಮತಿ ಆಧರಿಸಿ ಸಂಜ್ಞೇಯ ಪಡೆದ ಹಂತದಿಂದ ವಿಚಾರಣಾ ಪ್ರಕ್ರಿಯೆ ಮುಂದುವರಿಸಬೇಕು” ಎಂದು ಸತ್ರ ನ್ಯಾಯಾಲಯಕ್ಕೆ ಪೀಠ ನಿರ್ದೇಶಿಸಿದೆ.

“ಯಾವ ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿಲ್ಲವೋ, ಅಂತಹವರ ವಿರುದ್ಧ ವಿಚಾರಣೆ ನಡೆಸುವಂತಿಲ್ಲ. ತಾಂತ್ರಿಕ ವಿಚಕ್ಷಣಾ ಸಮಿತಿಯ (ಟಿವಿಸಿಸಿ) ವರದಿ ಇಲ್ಲ. ಇದರಿಂದ ಸೆಕೆಂಡರಿ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ಒದಗಿಸಿದ ಸಂದರ್ಭದಲ್ಲಿ ಅದನ್ನು ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ಗೆ ಪ್ರಕರಣ ಕುರಿತು ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಲ್ಲಿಸಲು ಅನುಮತಿ ನೀಡಬೇಕು. ಆ ನಂತರ ಮೆರಿಟ್‌ ಆಧಾರದಲ್ಲಿ ಕಾನೂನು ಪ್ರಕಾರ ಪ್ರಕರಣವನ್ನು ವಿಲೇವಾರಿ ಮಾಡಬೇಕು” ಎಂದು ಸತ್ರ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಬಿಎಂಟಿಎಫ್‌ ತಾಂತ್ರಿಕ ವಿಚಕ್ಷಣಾ ಸಮಿತಿ (ಟಿವಿಸಿಸಿ) ವರದಿ ಇಲ್ಲ ಎಂದು ಪ್ರಾಸಿಕ್ಯೂಷನ್‌ಗೆ ಸರ್ಕಾರ ಅನುಮತಿ ನೀಡಿಲ್ಲ ಮತ್ತು ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ತಿಳಿಸಿ ಸತ್ರ ನ್ಯಾಯಾಲಯವು ಆರೋಪಗಳನ್ನು ಕೈ ಬಿಟ್ಟಿದೆ. ಆದರೆ, ಟಿವಿಸಿಸಿ ವರದಿ ಇಲ್ಲದ ಸಂದರ್ಭದಲ್ಲಿ ಸೆಕೆಂಡರಿ ಸಾಕ್ಷ್ಯಗಳನ್ನು ಒದಗಿಸಲು ಅವಕಾಶ ನೀಡಬೇಕಿತ್ತು. ಆದರೆ, ಆ ಸಾಕ್ಷ್ಯವನ್ನು ಒದಗಿಸಲು ಸರ್ಕಾರಕ್ಕೆ ಸೂಕ್ತ ಕಾಲಾವಕಾಶ ನೀಡದೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಆರೋಪಗಳನ್ನು ಕೈ ಬಿಡಲಾಗಿದೆ. ಇನ್ನೂ ಸಾಕ್ಷಿಗಳನ್ನು ಪರೀಕ್ಷೆಗೆ ಒಳಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶ ಕಲ್ಪಿಸಿಲ್ಲ. ಇದು ದೋಷಪೂರಿತ ಕ್ರಮವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಹಾಲಿ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರತಿ ಪ್ರಕರಣಕ್ಕೂ ಸಂಬಂಧಿಸಿದಂತೆ ಸಿಐಡಿ ಆರೋಪಪಟ್ಟಿ ಸಲ್ಲಿಸಿದೆ. ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ ನೀಡಿ, ನಂತರ ಅವ್ಯವಹಾರ ನಡೆಸಿ ಹಣವನ್ನು ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಗಳಿವೆ. ಇಂತಹ ಸಂದರ್ಭದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲು ಸಾಧ್ಯವಿಲ್ಲ. ತನಿಖಾಧಿಕಾರಿ ಸಂಗ್ರಹಿಸಿದ ದಾಖಲೆಗಳನ್ನು ನ್ಯಾಯಾಲಯವು ಪರಿಗಣಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಬಿಬಿಎಂಪಿಯಲ್ಲಿ 2005ರಿಂದ 2011-12ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಸಂಬಂಧ ನಕಲಿ ಬಿಲ್‌ ಸೃಷ್ಟಿಸಿ ಬಹುಕೋಟಿ ಹಣ ಪಡೆದ ಪ್ರಕರಣ ಬಯಲಾಗಿತ್ತು. ಈ ಪ್ರಕರಣದಲ್ಲಿ ಬಿಬಿಎಂಪಿಯ ಹಾಲಿ ಹಾಗೂ ನಿವೃತ್ತ ಎಂಜಿನಿಯರ್‌ಗಳು, ಗುತ್ತಿಗೆದಾರರು ಭಾಗಿಯಾಗಿರುವುದು ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿ ಒಟ್ಟು 115 ಪ್ರಕರಣಗಳ ಸಂಬಂಧ ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರ್ ಬಿ ಟಿ ರಮೇಶ್‌ ಸೇರಿದಂತೆ ಹಲವು ಎಂಜಿನಿಯರ್‌, ಸಹಾಯಕ ಮತ್ತು ಕಾರ್ಯಕಾರಿ ಎಂಜಿನಿಯರ್‌ ಹಾಗೂ ಗುತ್ತಿಗೆದಾರರ ವಿರುದ್ಧ ಸಿಐಡಿ ಆರೋಪ ಪಟ್ಟಿ ಸಲ್ಲಿಸಿತ್ತು.

ಆದರೆ, ಆರೋಪಿಗಳ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳೂ ವಿಫಲವಾಗಿದ್ದಾರೆ ಎಂದು ತೀರ್ಮಾನಿಸಿದ್ದ ಸತ್ರ ನ್ಯಾಯಾಲಯವು ಎಲ್ಲಾ ಆರೋಪಿಗಳ ವಿರುದ್ಧದ ಆರೋಪ ಕೈ ಬಿಟ್ಟು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ, ಎಚ್‌ಸಿಜಿಪಿ ಕೆ ಪಿ ಯಶೋದಾ; ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲ ಕಿರಣ್‌ ಜವಳಿ, ವಿ ಬಿ ವಿಜಯಕುಮಾರ್‌, ಕೆ ಚಂದ್ರಶೇಖರ್‌, ಪರಮೇಶ್ವರ್‌ ಹೆಗ್ಡೆ, ಎಸ್‌ ರಾಜಶೇಖರ್‌, ಪದ್ಮ ಪ್ರಸಾದ್‌ ಬಿ ನಾಶಿ ಮತ್ತಿತರರು ವಾದಿಸಿದ್ದರು.

Attachment
PDF
State of Karnataka Vs B G Prakash Kumar and others
Preview
Kannada Bar & Bench
kannada.barandbench.com