ಸುಪ್ರೀಂ ಅಂಗಳಕ್ಕೆ ಬಿಬಿಎಂಪಿ ಚುನಾವಣೆ: ಡಿಸೆಂಬರ್‌ 6ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಚುನಾವಣೆ ನಡೆಸಲು ಕಾಲಾವಕಾಶ ಕೋರಿರುವ ಸರ್ಕಾರದ ಅರ್ಜಿ ಕುರಿತು ಆಯೋಗವು ಸುಪ್ರೀಂಗೆ ಮೆಮೊ ಸಲ್ಲಿಸಿದೆ. ಅರ್ಜಿಯು ಇಂದು ವಿಚಾರಣೆಗೆ ಬರಬೇಕಿತ್ತು. ಆದರೆ, ವಿಚಾರಣೆಗೆ ನಿಗದಿಯಾಗಿಲ್ಲ ಎಂದು ತಿಳಿಸಿದ ಆಯೋಗ.
BBMP and Karnataka HC
BBMP and Karnataka HC
Published on

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಸಲು ಮತ್ತೆ ಮೂರು ತಿಂಗಳ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಹೈಕೋರ್ಟ್ ಮುಂದೂಡಿದೆ. ಚುನಾವಣೆ ನಡೆಸಲು ಕಾಲಾವಕಾಶ ಕೋರಿರುವ ಸರ್ಕಾರದ ಅರ್ಜಿ ಕುರಿತು ರಾಜ್ಯ ಚುನಾವಣಾ ಆಯೋಗವು ಸುಪ್ರಿಂ ಕೋರ್ಟ್‌ಗೆ ಮೆಮೊ ಸಲ್ಲಿಸಿದ್ದು ಡಿಸೆಂಬರ್‌ 5ರ ಒಳಗೆ ವಿಚಾರಣೆಗೆ ಬರುವ ಸಾಧ್ಯತೆ ಇರುವುದರಿಂದ ಹೈಕೋರ್ಟ್‌ ಪ್ರಕರಣವನ್ನು ಮುಂದೂಡಿದೆ.

ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆಪ್ಟೆಂಬರ್‌ 30ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶ ಪಾಲನೆಗೆ ಮೂರು ತಿಂಗಳ ಕಾಲ ಅವಧಿ ವಿಸ್ತರಿಸುವಂತೆ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಸಲ್ಲಿಸಿದ್ದ ಅಫಿಡವಿಟ್‌ನ್ನು ಬುಧವಾರ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು “ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ಎಸ್ಸಿ, ಎಸ್ಟಿ ವರ್ಗ, ಹಿಂದುಳಿದ ವರ್ಗ ಎ ಹಾಗೂ ಬಿಗೆ ಮೀಸಲಾತಿ ನಿಗದಿ ಮತ್ತು ರಾಜಕೀಯ ಮೀಸಲಾತಿಗೆ ಅರ್ಹರಿರುವ ಹಿಂದುಳಿದ ವರ್ಗಗಳ ವಿವರವಾದ ಪಟ್ಟಿಯನ್ನು ಸಲ್ಲಿಕೆ ವಿಚಾರದಲ್ಲಿ ನ್ಯಾಯಮೂರ್ತಿ ಕೆ ಭಕ್ತವತ್ಸಲ ಅವರ ನೇತೃತ್ವದ ಆಯೋಗಕ್ಕೆ ವರದಿ ಕೋರಲಾಗಿದೆ. ಆದಷ್ಟು ಬೇಗ ಪ್ರತಿಕ್ರಿಯಿಸುವುದಾಗಿ ಆಯೋಗ ಸಹ ಹೇಳಿದೆ. ಹೊಸದಾಗಿ ಮೀಸಲಾತಿ ನಿಗದಿಸಲು ಆಯೋಗದ ನಿಲುವು ಮುಖ್ಯವಾಗಿದೆ. ಆದ ಕಾರಣ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಸರ್ಕಾರದ ಈ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿ ಆಕ್ಷೇಪಣೆ ಸಲ್ಲಿಸಿರುವ ಚುನಾವಣಾ ಆಯೋಗ, 2022ರ ಡಿಸೆಂಬರ್‌ 31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಈಗಾಗಲೇ ಹೈಕೋರ್ಟ್ ಆದೇಶಿಸಿದೆ. ಇದಾದ ನಂತರ ಸಮಯ ವಿಸ್ತರಣೆ ಕೋರಿ ಸರ್ಕಾರ ಸಲ್ಲಿಸಿರುವ ಈ ಅರ್ಜಿ ವಿಚಾರಣಾ ಯೋಗ್ಯವಾಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದೆ.

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಚುನಾವಣೆ ನಡೆಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿದೆ. ಚುನಾವಣೆ ನಡೆಸಲು ಕಾಲಾವಕಾಶ ಕೋರಿರುವ ಸರ್ಕಾರದ ಅರ್ಜಿ ಕುರಿತು ಆಯೋಗವು ಸುಪ್ರಿಂ ಕೋರ್ಟ್‌ಗೆ ಮೆಮೊ ಸಲ್ಲಿಸಿದೆ. ಅರ್ಜಿ ಬುಧವಾರ (ನವೆಂಬರ್‌ 30) ವಿಚಾರಣೆಗೆ ಬರಬೇಕಿತ್ತು. ಆದರೆ, ವಿಚಾರಣೆಗೆ ನಿಗದಿಯಾಗಿಲ್ಲ. ಬಹುಶಃ ಡಿಸೆಂಬರ್‌ 5ರೊಳಗೆ ವಿಚಾರಣೆ ನಿಗದಿಯಾಗುವ ಸಾಧ್ಯತೆಯಿದೆ ಎಂದು ಪೀಠದ ಗಮನಕ್ಕೆ ತಂದರು.

ಅದನ್ನು ಪರಿಗಣಿಸಿದ ನ್ಯಾಯಾಲಯವು ಸುಪ್ರಿಂ ಕೋರ್ಟ್ ವಿಚಾರಣೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಿದೆ.

Also Read
ಬಿಬಿಎಂಪಿ ಚುನಾವಣೆ: ಮೀಸಲಾತಿ ನಿಗದಿಪಡಿಸಲು ಮೂರು ತಿಂಗಳ ಕಾಲಾವಕಾಶ ಕೋರಿ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಸರ್ಕಾರ

ಆಯೋಗದ ಆಕ್ಷೇಪಣೆ ಏನು?: ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರ ಸೆಪ್ಟೆಂಬರ್ ವೇಳೆಗೆ ಮುಕ್ತಾಯಗೊಂಡಿರುವುದರಿಂದ ಚುನಾವಣೆ ನಡೆಸಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, 2022ರ ನವೆಂಬರ್‌ 30ರೊಳಗೆ ಹೊಸದಾಗಿ ಮೀಸಲು ಪಟ್ಟಿ ಪ್ರಕಟಿಸಲು ಸರ್ಕಾರಕ್ಕೆ ಸೆಪ್ಟೆಂಬರ್‌ 30ರಂದು ಸೂಚಿಸಿತ್ತು. ಆದರೆ, ಸರ್ಕಾರ ಚುನಾವಣೆ ನಡೆಸಲು ಸಮಯ ವಿಸ್ತರಿಸಲು ಕೋರಿ ಸಕಾರಣವಿಲ್ಲದೆ ಅರ್ಜಿ ಸಲ್ಲಿಸಿದೆ. ಅದು ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ. ಇದರ ಹಿಂದೆ ಚುನಾವಣೆ ವಿಳಂಬ ಮಾಡುವ ಉದ್ದೇಶವಿದೆ. 2023ರ ಮೇ ನಂತರ ಚುನಾವಣೆ ನಡೆಸುವ ಉದ್ದೇಶ ಸರ್ಕಾರದ್ದಾಗಿದೆ. ಪ್ರಮುಖವಾಗಿ 2023ರ ಮೇ ತಿಂಗಳ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೊಮ್ಮೆ ವೇಳಾಪಟ್ಟಿ ಪ್ರಕಟಗೊಂಡರೆ, ಪಾಲಿಕೆ ಚುನಾವಣೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಲಿದೆ. ಆಗ ಸಂವಿಧಾನ 243ನೇ ವಿಧಿ ಉಲ್ಲಂಘನೆಯಾಗಲಿದೆ ಎಂದು 2022ರ ನವೆಂಬರ್‌ 24ರಂದು ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಆಯೋಗ ತಿಳಿಸಿದೆ.

Kannada Bar & Bench
kannada.barandbench.com