ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಿಬಿಎಂಪಿ ನೌಕರ: ತಿಂಗಳಲ್ಲಿ ಮರಣ ದೃಢೀಕರಣ ಪತ್ರ ವಿತರಿಸಲು ಹೈಕೋರ್ಟ್‌ ಆದೇಶ

ಅರ್ಜಿದಾರರ ಪತಿಯು ಬಿಬಿಎಂಪಿಯ ಕೆಲಸ ಮಾಡುವ ವೇಳೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಖುದ್ದು ಪಾಲಿಕೆಯ ಅಧಿಕಾರಿಗಳೇ ಹುಡುಕಾಟ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಿಬಿಎಂಪಿ ಮೃತನ ಪತ್ನಿಗೆ ₹10 ಲಕ್ಷ ಪರಿಹಾರ ಪಾವತಿಸಿದೆ.
Karnataka HC and Justice Suraj Govindaraj
Karnataka HC and Justice Suraj Govindaraj

ಆರು ವರ್ಷಗಳ ಹಿಂದೆ ರಾಜಕಾಲುವೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಿಬಿಎಂಪಿ ನೌಕರರೊಬ್ಬರ ಮರಣ ದೃಢೀಕರಣ ಪತ್ರ ವಿತರಿಸಲು ಆತನ ಪತ್ನಿಗೆ ಸತಾಯಿಸುತ್ತಿದ್ದ ಬಿಬಿಎಂಪಿಗೆ ಚಾಟಿ ಬೀಸಿರುವ ಕರ್ನಾಟಕ ಹೈಕೋರ್ಟ್, ಒಂದು ತಿಂಗಳಲ್ಲಿ ಮರಣ ದೃಢೀಕರಣ ಪತ್ರ ನೀಡುವಂತೆ ನಿರ್ದೇಶಿಸಿ ಆದೇಶಿಸಿದೆ

ಪತಿಯ ಮರಣ ದೃಢೀಕರಣ ಪತ್ರ ವಿತರಿಸಲು ಬಿಬಿಎಂಪಿ ನಿರಾಕರಿಸುತ್ತಿದೆ ಎಂದು ಆಕ್ಷೇಪಿಸಿ ಎಸ್ ಪಿ ಸರಸ್ವತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣದಲಿ ಮೃತ ಬಿಬಿಎಂಪಿ ನೌಕರ ಶಾಂತಕುಮಾರ್ ಅವರ ಸಾವನ್ನು ವೈದ್ಯರಿಂದ ದೃಢೀರಿಸಿದ ಫಾರಂ ನಂ 4ಎ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿದ್ದ ಬಿಬಿಎಂಪಿ ನಡೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರ ಪತಿಯು ಬಿಬಿಎಂಪಿಯ ಕೆಲಸ ಮಾಡುವ ವೇಳೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಖುದ್ದು ಪಾಲಿಕೆಯ ಅಧಿಕಾರಿಗಳೇ ಹುಡುಕಾಟ ನಡೆಸಿದ್ದರೂ ಮೃತದೇಹ ಪತ್ತೆಯಾಗಲಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಬಿಬಿಎಂಪಿ ಮೃತನ ಪತ್ನಿಗೆ ₹10 ಲಕ್ಷ ಪರಿಹಾರ ಪಾವತಿಸಿದೆ. ಹೀಗಿದ್ದರೂ ವೈದ್ಯರು ಸಾವು ಸಂಭವಿಸಿದೆ ಎಂಬುದಾಗಿ ದೃಢೀಕರಿಸಿ ಕರ್ನಾಟಕ ಮರಣ ಮತ್ತು ಜನನ ನೋಂದಣಿ ಅಧಿನಿಯಮ ನಿಯಮ 10(3)ರ ಅಡಿಯಲ್ಲಿ ಫಾರಂ ನಂ. 4ಎ ಪ್ರಮಾಣ ಪತ್ರ ನೀಡಬೇಕು ಎನ್ನುವುದು ಸಂಪೂರ್ಣವಾಗಿ ಅಸಮರ್ಥನೀಯ. ಬಿಬಿಎಂಪಿಯ ನಡೆ ತೃಪ್ತಿದಾಯಕವಾಗಿಲ್ಲ ಹಾಗೂ ಅರ್ಜಿದಾರರಿಗೆ ಅನ್ಯಾಯ ಉಂಟು ಮಾಡಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅರ್ಜಿದಾರರ ಪತಿ 2017ರಲ್ಲಿ ಸಾವನ್ನಪ್ಪಿದ್ದಾರೆ. ಅವರ ಮರಣ ಧೃಡೀಕರಣ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಆರು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಮರಣ ವರದಿಯನ್ನು ವೈದ್ಯಕೀಯ ದೃಢೀಕರಣ ಮಾಡಬೇಕಿಲ್ಲ. ನಿಯಮಗಳನ್ನು ಪಾಲಿಸಬೇಕು ಎನ್ನುವ ಮೂಲಕ ಬಿಬಿಎಂಪಿ ನಿಷ್ಠರವಾಗಿ ನಡೆದುಕೊಳ್ಳಬಾರದು. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ 30 ದಿನಗಳಲ್ಲಿ ಅರ್ಜಿದಾರರಿಗೆ ಪತಿಯ ಮರಣ ದೃಢೀಕರಣ ಪತ್ರ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.

ಎಸ್ ಶಾಂತಕುಮಾರ (35) ಅವರು ಬಿಬಿಎಂಪಿಯಲ್ಲಿ ಎಕ್ಸ್‌ಕವೇಟರ್ ಅಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2017ರ ಮೇ 20ರಂದು ನಗರದಲ್ಲಿ ಭಾರೀ ಮಳೆ ಸುರಿದಿತ್ತು. ಅಂದು ರಾತ್ರಿ 9 ಗಂಟೆ ವೇಳೆ ಜೆ ಸಿ ನಗರದ 60 ಅಡಿ ರಸ್ತೆಯಲ್ಲಿ ಹಿಟಾಚಿ ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದರು. ಮಳೆ ಜೋರಾಗಿ ಬಂದ ಕಾರಣ ಅವರು ನೀರಿನಲ್ಲಿ ಕೊಚ್ಚಿ ಹೋಗಿ, ಎಲ್ಲಿಯೂ ಆತನ ದೇಹ ಪತ್ತೆಯಾಗಲಿಲ್ಲ. ಇದರಿಂದ ಶಾಂತಕುಮಾರ್ ಸಾವನ್ನಪ್ಪಿದ್ದಾರೆ ಎಂದು ಹೇಳಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರ ಆದೇಶದ ಮೇರೆಗೆ ಅರ್ಜಿದಾರರಿಗೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗಿತ್ತು. ಬಳಿಕ ಸರಸ್ವತಿ ತಮ್ಮ ಪತಿಯ ಮರಣ ದೃಢೀಕರಣ ಪತ್ರ ನೀಡುವಂತೆ ಕೋರಿದ್ದು, ಅದನ್ನು ಬಿಬಿಎಂಪಿ ವಿತರಿಸದ ಕಾರಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಅವರು, ಕರ್ನಾಟಕ ಮರಣ ಮತ್ತು ಜನ ನೋಂದಣಿ ಅಧಿನಿಯಮ ನಿಯಮ 7ರ ಪ್ರಕಾರ ಮರಣ ಪ್ರಮಾಣಪತ್ರ ವಿತರಿಸಲು ಕೆಲವೊಂದು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಸಾವನ್ನಪಿದರೆ ಸೆಕ್ಷನ್ 10(3)ರ ಪ್ರಕಾರ ಫಾರಂ ನಂ.4 ನೀಡಬೇಕಾಗುತ್ತದೆ. ಇತರೆ ಪ್ರದೇಶದಲ್ಲಿ ಸಾವು ಸಂಭವಿಸಿದ್ದರೆ ಫಾರಂ ನಂ.4ಎ ರೂಪದಲ್ಲಿ ವೈದ್ಯರಿಂದ ಮರಣ ವರದಿ ದೃಢೀಕರಣ ಮಾಡಿಕೊಂಡು ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಅದರ ಆಧಾರದ ಮೇಲೆ ಮರಣ ಪತ್ರ ಕೋರಿದರೆ ಪರಿಗಣಿಸಲು ಸಾಧ್ಯವಿದೆ. ಅರ್ಜಿದಾರರು ಅಂತಹ ಪ್ರಮಾಣ ಪತ್ರವನ್ನು ಒದಗಿಸದ ಕಾರಣ ದೃಢೀಕರಣ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಶಾಂತಕುಮಾರ್ ಮೃತದೇಹ ಪತ್ತೆಯಾಗಿಲ್ಲ. ಒಂದೊಮ್ಮೆ ಅವರು ಹಿಂದಿರುಗಿ ಬಂದರೆ ಮರಣ ಪ್ರಮಾಣ ಪತ್ರ ಸುಳ್ಳಾಗಲಿದೆ ಎಂದು ಸಮರ್ಥಿಸಿಕೊಂಡಿದ್ದರು. ಈ ವಾದವನ್ನು ಹೈಕೋರ್ಟ್‌ ಪುರಸ್ಕರಿಸಲಿಲ್ಲ.

Attachment
PDF
Saraswathi S P Vs BBMP.pdf
Preview

Related Stories

No stories found.
Kannada Bar & Bench
kannada.barandbench.com