ಬೆಂಗಳೂರು ನಗರದ ಮುನ್ನೇನಕೊಳಲಿನ ಸರ್ವೇ 35(1ಬಿ)ಯಲ್ಲಿರುವ ಮನೆಯನ್ನು ನೋಟಿಸ್ ನೀಡದೆ ತೆರವು ಮಾಡುವುದಕ್ಕೆ ಮುಂದಾಗಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಮುನ್ನೇನಕೊಳಲಿನ ವೀರಪ್ಪರೆಡ್ಡಿ ಬಡಾವಣೆಯಲ್ಲಿರುವ ಮನೆಯ ಮಾಲೀಕ ಎನ್ ಅನಿಲ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
“ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡದೇ ಬಿಬಿಎಂಪಿಯು ತೆರವು ಮಾಡಲು ಬಿಬಿಎಂಪಿ ಮಾರ್ಕ್ ಮಾಡಿದೆ. ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ವಿರುದ್ಧದ ಆಕ್ಷೇಪಿತ ಒತ್ತುವರಿ ತೆರವು ಮಾಡದಂತೆ ಬಿಬಿಎಂಪಿಯನ್ನು ನಿರ್ಬಂಧಿಸಲಾಗಿದೆ” ಎಂದು ಪೀಠವು ಆದೇಶ ಮಾಡಿದೆ.
ಅಲ್ಲದೇ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್, ಮಹದೇವಪುರ ವಲಯದ ಬೃಹತ್ ನೀರುಗಾಲುವೆ ಉಪವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಅವರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶಶಿಕಿರಣ ಎಸ್ ಶೆಟ್ಟಿ ಅವರು “ಅರ್ಜಿದಾರರು ಕಳೆದ 50 ವರ್ಷದ ಹಿಂದೆ ನಿವೇಶನ ಖರೀದಿ ಮಾಡಿ, ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಈವರೆಗೂ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಆರೋಪವಿರಲಿಲ್ಲ. ಮೂರು ತಿಂಗಳ ಹಿಂದೆ ಸರ್ವೇ ನಡೆಸಿದ್ದ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸರ್ವೇ 35(1ಬಿ)ರಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಇದು ಖಾಸಗಿ ಸ್ವತ್ತು ಎಂಬುದಾಗಿ ತಿಳಿಸಿದ್ದರು. ಆದರೆ, ಸೆಪ್ಟೆಂಬರ್ 13ರಂದು ಸರ್ವೇ ನಡೆಸಿರುವ ಅಧಿಕಾರಿಗಳು ನಿವೇಶನದಲ್ಲಿ ಮನೆ ನಿರ್ಮಾಣವಾಗಿರುವ ಜಾಗದಲ್ಲಿ ಶೇ 60 ರಷ್ಟು ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಗುರುತಿಸಿದ್ದಾರೆ. ಈ ಸಂಬಂಧ ಪ್ರಶ್ನಿಸಿದರೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ” ಎಂದು ಪೀಠದ ಗಮನಸೆಳೆದರು.