ದ್ವಿಭಾಷಾ ಶಿಕ್ಷಣ, ಕಡ್ಡಾಯ ವಿಷಯವಾಗಿ ಮಧ್ಯಸ್ಥಿಕೆ, ವಿದೇಶಿ ಎಲ್ಎಲ್ಎಂ: ಕಾನೂನು ಶಿಕ್ಷಣ ಸುಧಾರಣೆಗೆ ಬಿಸಿಐ ಕ್ರಮ

ಈ ಹಿಂದೆ ಕಾನೂನು ಶಿಕ್ಷಣದ ಬಗ್ಗೆ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಸುಧಾರಣೆ ಸೂಚಿಸಲಾಗಿದೆ ಎಂದು ಬಿಸಿಐ ಸುತ್ತೋಲೆ ಹೇಳಿದೆ.
Bar Council Of India
Bar Council Of India

ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಈ ವಾರ ಸುತ್ತೋಲೆಯೊಂದನ್ನು ಹೊರಡಿಸಿದ್ದು ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಕಾನೂನು ಶಿಕ್ಷಣ ಕೇಂದ್ರಗಳಿಗೆ ಸೂಚಿಸಿದೆ.

ಕಳೆದ ಕೆಲ ವರ್ಷಗಳಿಂದ ಕಾನೂನು ಶಿಕ್ಷಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ವಿವಿಧ ಹೇಳಿಕೆಗಳನ್ನು ಮೇ 20ರಂದು ಬಿಸಿಐ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಹೊಸ ಬೋಧನಾ ವಿಷಯಗಳ ಪರಿಚಯ, ಕಡ್ಡಾಯ ಬೋಧನಾ ವಿಷಯವಾಗಿ ಮಧ್ಯಸ್ಥಿಕೆ, ಕಾನೂನು ಶಾಲೆಗಳಲ್ಲಿ ವಿನಿಮಯ ಕಾರ್ಯಕ್ರಮ ವೃದ್ಧಿ, ಕಾನೂನು ಶಿಕ್ಷಣದಲ್ಲಿ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕಾಗಿ ಸುಧಾರಣಾ ಕ್ರಮಗಳನ್ನು ರೂಪಿಸಲಾಗಿದೆ.

ಈ ಸುಧಾರಣೆಗಳ ಅಗತ್ಯವನ್ನು ಮತ್ತಷ್ಟು ಸಮರ್ಥಿಸಿಕೊಂಡಿರುವ ಸುತ್ತೋಲೆ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020) ದೇಶದಲ್ಲಿ ಕಾನೂನು ಶಿಕ್ಷಣ ಸುಧಾರಣೆಗೆ ವಿಶಾಲವಾದ ಮಾರ್ಗಸೂಚಿಗಳನ್ನಷ್ಟೇ  ನೀಡಿದೆ ಎಂದಿದೆ. ಇದಲ್ಲದೆ, ಎನ್‌ಇಪಿ ಮೂಲಕ ರೂಪಿಸಲಾದ ಭಾರತದ ಉನ್ನತ ಶಿಕ್ಷಣ ಆಯೋಗ ವೈದ್ಯಕೀಯ ಮತ್ತು ಕಾನೂನು ಶಿಕ್ಷಣ ಹೊರತುಪಡಿಸಿದ ಎಲ್ಲಾ ರೀತಿಯ ಉನ್ನತ ಶಿಕ್ಷಣವನ್ನು ಮೇಲ್ವಿಚಾರಣೆ ಮಾಡುತ್ತದೆ. ಕಾನೂನು ಶಿಕ್ಷಣವನ್ನು ಬಿಸಿಐ ನಿಯಂತ್ರಿಸುವುದರಿಂದಾಗಿ ತಾನು ಭಾರತದಲ್ಲಿ ಕಾನೂನು ಶಿಕ್ಷಣದ ಗುಣಮಟ್ಟ ಮತ್ತು ಪರಿಣಾಮವನ್ನು ಹೆಚ್ಚಿಸಲು ಮಾರ್ಗಸೂಚಿಗಳನ್ನು ನೀಡಿರುವುದಾಗಿ ಅದು ತಿಳಿಸಿದೆ.

ಬೋಧನಾ ವಿಷಯವಾಗಿ ಬ್ಲಾಕ್‌ಚೈನ್‌ ತಂತ್ರಜ್ಞಾನ, ಇ- ಡಿಸ್ಕವರಿ, ಸೈಬರ್‌ ಭದ್ರತೆ, ರೊಬಾಟಿಕ್ಸ್‌, ಕೃತಕ ಬುದ್ಧಿಮತ್ತೆ ಹಾಗೂ ಬಯೋ ಎಥಿಕ್ಸ್‌, ಕಂಪ್ಯೂಟರ್‌ ಶಿಕ್ಷಣ ಇತ್ಯಾದಿ ವಿಷಯಗಳ ಸೇರ್ಪಡೆ;, ವಿದ್ಯಾರ್ಥಿಗಳಲ್ಲಿ ಕಾನೂನಿನ ಸೂಕ್ಷ್ಮ ತಿಳುವಳಿಕೆಗಾಗಿ ಪಠ್ಯಕ್ರಮದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳ ಪರಿಚಯ; ನ್ಯಾಯ ಹೆಚ್ಚು ದೊರೆಯುವಂತೆ ಮಾಡಲು ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಗಳನ್ನು ಒಳಗೊಂಡು ದ್ವಿಭಾಷಾ ಶಿಕ್ಷಣ ನೀಡುವುದು, ಕಡ್ಡಾಯ ನಿರ್ದಿಷ್ಟ ಬೋಧನಾ ವಿಷಯವಾಗಿ ಮಧ್ಯಸ್ಥಿಕೆ, ಕಾನೂನು ಪದವಿಯೊಂದಿಗೆ ಎಂಎ ಪದವಿ ಪಡೆದಿದ್ದರೆ ಅದನ್ನು ಎಲ್‌ಎಲ್‌ಎಂ ಎಂದು ಪರಿಗಣಿಸದೇ ಇರುವುದು ಈ ಸುಧಾರಣೆಗಳಲ್ಲಿ ಪ್ರಮುಖವಾದವು.

ಅಲ್ಲದೆ ಶೀಘ್ರವೇ ಜಾರಿಗೆ ಬರಲಿರುವ ಮೂರು ಹೊಸ ಕ್ರಿಮಿನಲ್‌ ಕಾನೂನುಗಳನ್ನು ಪಠ್ಯಕ್ರಮವಾಗಿ ಸೇರ್ಪಡೆ ಮಾಡುವುದು; ಅನುಮೋದಿತ ಸ್ಥಾನಗಳ ಬಲಕ್ಕೆ ತಕ್ಕಂತೆ ಎಲ್ಲಾ ಮೀಸಲಾತಿ ಇಲ್ಲವೇ ಕೋಟಾ ಜಾರಿಗೆ ಬರಬೇಕೆ ವಿನಾ ಅದನ್ನು ಮೀರುವಂತಿಲ್ಲ ಇತ್ಯಾದಿ ಅಂಶಗಳನ್ನೂ ಅದು ವಿವರಿಸಿದೆ.

ಈ ಸುಧಾರಣೆಗಳು ತಕ್ಷಣವೇ ಜಾರಿಗೆ ಬರಬೇಕು. ಮತ್ತು ಜಾರಿಗೆ ತಾರದೆ ತಪ್ಪೆಸಗುವ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುತ್ತೋಲೆ ಎಚ್ಚರಿಕೆ ನೀಡಿದೆ.

ದೇಶಾದ್ಯಂತ ಕಳಪೆ ಗುಣಮಟ್ಟದ ಕಾನೂನು ಕಾಲೇಜುಗಳ  ನಾಯಿಕೊಡೆಗಳಂತೆ ತಲೆ ಎತ್ತುವುದನ್ನು ತಡೆಯಲು ಬಿಸಿಐ ಇತ್ತೀಚೆಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

Kannada Bar & Bench
kannada.barandbench.com