[ಸಿಎಲ್ಎಟಿ] ಇಂಗ್ಲಿಷ್ ಪ್ರಾವೀಣ್ಯತೆ ಇರದ ಕಾರಣಕ್ಕೆ ಯಾರೂ ಪ್ರವೇಶಾತಿಯಿಂದ ವಂಚಿತರಾಗಬಾರದು: ಬಿಸಿಐ

ಕಾನೂನು ಶಿಕ್ಷಣದ ಗುಣಮಟ್ಟ ನಿಯಂತ್ರಿಸುವ ಕಾರ್ಯ ಮಾಡುವ ಬಿಸಿಐ ತಾನು 2011ರಿಂದ ಅಖಿಲ ಭಾರತ ವಕೀಲರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುತ್ತಿರುವುದಾಗಿ ತಿಳಿಸಿದೆ.
Bar Council of India
Bar Council of India

ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಾತಿ ಪಡೆಯುವುದಕ್ಕಾಗಿ ರೂಪಿಸಲಾದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯನ್ನು (ಸಿಎಲ್‌ಎಟಿ) ನಡೆಸಲು ತಾನು ಸಿದ್ಧ ಎಂದು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಹೇಳಿದೆ [ಸುಧಾಂಶು ಪಾಠಕ್ ಮತ್ತು ಕಾರ್ಯದರ್ಶಿ ಮೂಲಕ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಇಲ್ಲವೆನ್ನುವ ಕಾರಣಕ್ಕೆ ಯಾವುದೇ ಅರ್ಹ ಅಭ್ಯರ್ಥಿ ಸಿಎಲ್‌ಎಟಿ ಬರೆಯುವುದರಿಂದ ವಂಚಿತರಾಗಬಾರದು ಎಂದು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಪರಿಷತ್‌ ಪ್ರತಿಪಾದಿಸಿದೆ.

Also Read
ಡಿಸೆಂಬರ್‌ 3ಕ್ಕೆ ಸಿಎಲ್‌ಎಟಿ 2024 ಪರೀಕ್ಷೆ

ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಇದೇ ಬಗೆಯ ಪರೀಕ್ಷೆಗಳನ್ನು (ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆ) ನಡೆಸಿದ ಅನುಭವ ತನಗೆ ಇದೆ ಎಂದು ಅದು ವಿವರಿಸಿದೆ.

ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಸಿಎಲ್‌ಎಟಿ ನಡೆಸಬೇಕು ಎಂದು ಒತ್ತಾಯಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸುಧಾಂಶು ಪಾಠಕ್ ಎಂಬ ಕಾನೂನು ವಿದ್ಯಾರ್ಥಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಬೆಂಬಲಿಸಿ ನೀಡಲಾದ ವಿವರವಾದ ಅಫಿಡವಿಟ್‌ನಲ್ಲಿ ಬಿಸಿಐ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಬಿಸಿಐ ಅಲ್ಲದೆ ಕೇಂದ್ರ ಸರ್ಕಾರವೂ ಸಹ ಈ ಮನವಿಗೆ ಬೆಂಬಲ ನೀಡಿದೆ.

ಮತ್ತೊಂದೆಡೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಕ್ತ ಸಾಲಿನ ಪರೀಕ್ಷೆ  ನಡೆಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಕಾನೂನು ವಿವಿಗಳು ಹೇಳಿವೆಯಾದರೂ ಭವಿಷ್ಯದಲ್ಲಿ ಅಂತಹ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಸೌಲಭ್ಯ ಕಲ್ಪಿಸಲು ಮಾರ್ಗಗಳನ್ನು ಕಂಡುಕೊಳ್ಳುವುದಾಗಿ ತಿಳಿಸಿವೆ. ಅಕ್ಟೋಬರ್ 6ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com