ಅಣಕು ನ್ಯಾಯಾಲಯಗಳು, ಸಮ್ಮೇಳನಗಳು ಹಾಗೂ ಇತರೆ ಕಾನೂನು ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ ವೇಳೆ ಖಾಸಗಿ ಕಾನೂನು ವಿಶ್ವವಿದ್ಯಾಲಯಗಳು ʼಇಂಡಿಯಾ', ʼಇಂಡಿಯನ್ʼ, ʼನ್ಯಾಷನಲ್ʼ, ʼಭಾರತ್ʼ, ʼಭಾರತೀಯ' ಹಾಗೂ ʼರಾಷ್ಟ್ರೀಯ' ಎಂಬ ಪದಗಳನ್ನು ಬಳಸದಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಆದೇಶ ಹೊರಡಿಸಿದೆ.
ಅಗತ್ಯ ಅನುಮೋದನೆಯಿಲ್ಲದೆ ಅಂತಹ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಅಥವಾ ಅಖಿಲ ಭಾರತ ಕಾರ್ಯಕ್ರಮಗಳೆಂದು ಉಲ್ಲೇಖಿಸುವುದು ತಪ್ಪುದಾರಿಗೆಳೆಯುವುದಲ್ಲದೆ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆಯ ಉಲ್ಲಂಘನೆಯಾಗುತ್ತದೆ ಎಂದು ಅಕ್ಟೋಬರ್ 15ರಂದು ಹೊರಡಿಸಿದ ಸುತ್ತೋಲೆಯಲ್ಲಿ ಅದು ಹೇಳಿದೆ.
ಈ ರೀತಿಯ ಪದ ಬಳಕೆ ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ದೃಷ್ಟಿಕೋನ ನೀಡುತ್ತದೆ. ಬಿಸಿಐ ರೀತಿಯ ಶಾಸನಬದ್ಧ ಸಂಸ್ಥೆಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ಅಥವಾ ರಾಷ್ಟ್ರೀಯ ವ್ಯಾಪ್ತಿ ಹೊಂದಿರುವ ಕಾನೂನು ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು ಮಾತ್ರ ಅಂತಹ ಕಾರ್ಯಕ್ರಮ ಆಯೋಜಿಸುವ ಕಾನೂನಾತ್ಮಕ ಸ್ಥಾನಮಾನ ಪಡೆದಿವೆ ಎಂದು ಅದು ತಿಳಿಸಿದೆ.
ಈಚಿನ ವರ್ಷಗಳಲ್ಲಿ ಅನೇಕ ಸಂಸ್ಥೆಗಳು ಕಾರ್ಯಕ್ರಮಗಳು ಅಣಕು ನ್ಯಾಯಾಲಯಗಳನ್ನು ಆಯೋಜಿಸುವಾಗ ಇಂತಹ ಪದಗಳನ್ನು ಬಳಸುತ್ತಿದ್ದು ಅಂತಹ ಪದ ಬಳಕೆ ಮಾಡುವುದಕ್ಕೆ ಅವುಗಳಿಗೆ ಶಾಸನಬದ್ಧ ಅಧಿಕಾರ ಅಥವಾ ಸರ್ಕಾರದ ಅನುಮೋದನೆ ಇರುವುದಿಲ್ಲ ಎಂದಿರುವ ಅದು ಈ ಬಗೆಯ ಪದ ಬಳಕೆ ಮಾಡುವುದರಿಂದ ರಾಷ್ಟ್ರೀಯ ಪ್ರಾಮುಖ್ಯ ಕಾರ್ಯಕ್ರಮ ಅಥವಾ ಸರ್ಕಾರದ ನೆರವಿನಿಂದ ನಡೆಯುತ್ತಿರುವ ಕಾರ್ಯಕ್ರಮ ಎಂದು ಜನರನ್ನು ತಪ್ಪು ದಾರಿಗೆಳೆದಂತಾಗುತ್ತದೆ ಎಂದು ಪ್ರತಿಪಾದಿಸಿದೆ.
ಅಲ್ಲದೆ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಎಂದು ಬಿಂಬಿಸಿ ಪ್ರಾಯೋಜಕತ್ವ ಪಡೆದುಕೊಳ್ಳುವುದಕ್ಕಾಗಿ ಇಂತಹ ಪದಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.
ಆದರೆ, ಅಂತಹ ಸ್ವರೂಪದ ಕಾರ್ಯಕ್ರಮಗಳನ್ನೇ ಆಯೋಜಿಸುವುದಾದರೆ ಪಾರದರ್ಶಕತೆ ಮತ್ತು ನಿಯಮ ಪಾಲನೆ ಸಲುವಾಗಿ ಮುಂಚಿತವಾಗಿ ಸರ್ಕಾರಕ್ಕೆ ಅಧಿಕೃತ ಮಾಹಿತಿ ನೀಡಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (ಎನ್‌ಎಲ್‌ಯುಗಳು) ಅಂತಹ ಪದಗಳನ್ನು ಬಳಸಬಹುದು ಎಂದು ಬಿಸಿಐ ಹೇಳಿದೆ.
ಖಾಸಗಿಯವರು ನಿಯಮ ಉಲ್ಲಂಘಿಸಿ ಇಂತಹ ಪದ ಬಳಕೆ ಮಾಡಿದರೆ ಅನರ್ಹತೆ ಎದುರಿಸಬೇಕಾಗುತ್ತದೆ ಮತ್ತು ತಾನು ಅವುಗಳಿಗೆ ಒದಗಿಸಿರುವ ಸವಲತ್ತುಗಳನ್ನು ಹಿಂಪಡೆಯಬೇಕಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ.