ಭಾರತದ ಕಾನೂನು ಪದವಿಯೊಂದಿಗೆ ಬ್ರಿಟನ್ ಎಲ್ಎಲ್‌ಬಿ ಸಮೀಕರಣ: ಬಿಸಿಐಗೆ ತಾನು ನಿರ್ದೇಶಿಸಲಾಗದು ಎಂದ ದೆಹಲಿ ಹೈಕೋರ್ಟ್

ಶೈಕ್ಷಣಿಕ ಸಮಾನತೆ ಎಂಬುದು ಶೈಕ್ಷಣಿಕ ಸಂಸ್ಥೆಗಳು ನಿರ್ಧರಿಸುವ ವಿಷಯವಾಗಿದೆ ಎಂದ ನ್ಯಾಯಾಲಯ.
Delhi High Court
Delhi High Court

ಬ್ರಿಟನ್‌ನ ಹರ್ಟ್‌ಫೋರ್ಡ್‌ಶೈರ್ ವಿಶ್ವವಿದ್ಯಾನಿಲಯದಲ್ಲಿ ಪಡೆದ ಮೂರು ವರ್ಷಗಳ ಎಲ್‌ಎಲ್‌ಬಿ (ಆನರ್ಸ್) ಕೋರ್ಸನ್ನು ಭಾರತದ ಎಲ್‌ಎಲ್‌ಬಿಗೆ ಸಮನಾಗಿ ಪರಿಗಣಿಸಬಹುದು ಎಂದು ಪ್ರಮಾಣೀಕರಿಸುವಂತೆ ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಗೆ ನಿರ್ದೇಶನ ನೀಡಲು ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ವಾಸು ಸಚ್ದೇವ ಮತ್ತು ಭಾರತೀಯ ವಕೀಲರ ಪರಿಷತ್ತು ಇನ್ನಿತರರ ನಡುವಣ ಪ್ರಕರಣ].

ಶೈಕ್ಷಣಿಕ ಸಮಾನತೆ ಎಂಬುದು ಶಿಕ್ಷಣ ಸಂಸ್ಥೆಗಳು ನಿರ್ಧರಿಸುವ ವಿಷಯವಾಗಿದೆ ಎಂದು ನ್ಯಾಯಮೂರ್ತಿ ಸಿ ಹರಿಶಂಕರ್ ಹೇಳಿದರು.

"ಈ ನ್ಯಾಯಾಲಯ ಅಂತಹ ಯಾವುದೇ ಸಮಾನತೆಯ ಪ್ರಮಾಣಪತ್ರ ಒದಗಿಸಲು ಬಿಸಿಐಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಾನತೆಯು ಶೈಕ್ಷಣಿಕ ಸಂಸ್ಥೆಗಳು ನಿರ್ಧರಿಸುವ ವಿಷಯವಾಗಿದ್ದು ನ್ಯಾಯಾಲಯಗಳು ಅಧ್ಯಯನದ ಕೋರ್ಸ್‌ಗಳನ್ನು ಅಥವಾ ಅಂತಹ ಕೋರ್ಸ್‌ಗಳನ್ನು ನಡೆಸುವ ಸಂಸ್ಥೆಗಳನ್ನು ಇತರರಿಗೆ ಸಮಾನವಾಗಿ ಘೋಷಿಸಲು ಸಾಧ್ಯವಿಲ್ಲ, ”ಎಂದು ಪೀಠ ಸ್ಪಷ್ಟಪಡಿಸಿತು.

ಆದರೆ, ಎರಡು ಕೋರ್ಸ್‌ಗಳಲ್ಲಿನ ಸಮಾನತೆಯನ್ನು ಕೋರಿ ಅರ್ಜಿದಾರ ವಾಸು ಸಚ್‌ದೇವ ಅವರು ಮಾಡಿರುವ ಮನವಿ ತರ್ಕಬದ್ಧ ಮತ್ತು ಸಕಾರಣಯುಕ್ತ ಆದೇಶ ರವಾನಿಸಲು ನ್ಯಾಯಾಲಯ ಬಿಸಿಐಗೆ ನಿರ್ದೇಶನ ನೀಡಿತು.

ಭಾರತದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದ ಸಚ್‌ದೇವ್‌ ಬ್ರಿಟನ್‌ನಲ್ಲಿ ಎಲ್‌ಎಲ್‌ಬಿ ಅಧ್ಯಯನ ಮಾಡಿ ಭಾರತಕ್ಕೆ ಹಿಂತಿರುಗಿದ್ದರು. ಭಾರತದಲ್ಲಿ ವಕೀಲರಾಗಿ ಅರ್ಹತೆ ಪಡೆಯಲು ಗೋವಾದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಅಂಡ್ ರಿಸರ್ಚ್ ನಡೆಸುವ ಎರಡು ವರ್ಷಗಳ ಬ್ರಿಜ್‌ ಕೋರ್ಸ್ ಪೂರ್ಣಗೊಳಿಸಿರಬೇಕು ಎಂದು ಬಿಸಿಐ ಅವರಿಗೆ ಸೂಚಿಸಿತ್ತು.

ಆದರೆ ಎರಡು ವರ್ಷಗಳ ಕೋರ್ಸ್‌ ಅಧ್ಯಯನ ಮಾಡಲಾಗದು ಎಂದು ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಎರಡು ವರ್ಷಗಳ ಬ್ರಿಜ್‌ ಕೋರ್ಸ್ ಮಾಡಲು ಸಚ್‌ದೇವ ಬಯಸದಿದ್ದರೆ, ಅವರು ಐದು ವರ್ಷಗಳ ಕಾನೂನು ಕೋರ್ಸ್ ಪೂರ್ಣಗೊಳಿಸಬೇಕಾಗುತ್ತದೆ ಎಂದು ಬಿಸಿಐ ನ್ಯಾಯಾಲಯಕ್ಕೆ ತಿಳಿಸಿತ್ತು.

Kannada Bar & Bench
kannada.barandbench.com