ಹೊಸ ಅಪರಾಧಿಕ ಕಾನೂನುಗಳ ವಿರುದ್ಧ ಮುಷ್ಕರ ನಡೆಸದಂತೆ ವಕೀಲರ ಸಂಘಗಳಿಗೆ ಬಿಸಿಐ ಮನವಿ

ಹೊಸ ಕಾನೂನುಗಳ ಬಗ್ಗೆ ವಕೀಲರು ವ್ಯಕ್ತಪಡಿಸಿದ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಕಾನೂನುಗಳಿಗೆ ಅಗತ್ಯ ತಿದ್ದುಪಡಿಗಳನ್ನು ಶಿಫಾರಸ್ಸು ಮಾಡಲು ಸಮಿತಿ ರಚಿಸುವುದಾಗಿ ಬಿಸಿಐ ಭರವಸೆ ನೀಡಿದೆ.
Bar Council Of India
Bar Council Of India

ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಇದೇ ಜುಲೈ 1ರಿಂದ ಜಾರಿಗೊಳಿಸಲಾಗುತ್ತಿರುವ ಮೂರು ಹೊಸ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸದಂತೆ ದೇಶದ ವಕೀಲ ಸಂಘಗಳಿಗೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮನವಿ ಮಾಡಿದೆ.

ಹೊಸ ಕಾನೂನುಗಳಿಗೆ ಅಗತ್ಯ ತಿದ್ದುಪಡಿಗಳನ್ನು ಶಿಫಾರಸ್ಸು ಮಾಡುವುದಕ್ಕಾಗಿ ಹಿರಿಯ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ನಿಷ್ಪಕ್ಷಪಾತ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರನ್ನು ಒಳಗೊಂಡ ಸಮಿತಿ ರಚಿಸುವುದಾಗಿ ನಿನ್ನೆ (ಬುಧವಾರ) ಬರೆದಿರುವ ಪತ್ರದಲ್ಲಿ, ಬಿಸಿಐ ಭರವಸೆ ನೀಡಿದೆ.

ಹೊಸ ಕಾನೂನುಗಳನ್ನು ಅಮಾನತಿನಲ್ಲಿಡದೆ ಇದ್ದರೆ, ಇಲ್ಲವೇ ಅವುಗಳನ್ನು ಸಂಸತ್ತಿನ ಸಮಗ್ರ ಪರಿಶೀಲನೆಗೆ ಒಳಪಡಿಸದೆ ಹೋದರೆ ಅಥವಾ ಅವುಗಳ ಬಗ್ಗೆ ರಾಷ್ಟ್ರವ್ಯಾಪಿ ಸಮಗ್ರ ಚರ್ಚೆ ನಡೆಸದೆ ಇದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ದೇಶದ ವಿವಿಧ ವಕೀಲರ ಸಂಘಗಳು ಹೇಳಿವೆ.

New Criminal Laws
New Criminal Laws

ನೂತನ ಕಾನೂನುಗಳು ಜಾರಿಗೆ ಬರುತ್ತಿರುವ ಜುಲೈ 1ರಂದು ಕಪ್ಪು ದಿನ ಆಚರಿಸಲು ಪಶ್ಚಿಮ ಬಂಗಾಳ ವಕೀಲರ ಪರಿಷತ್ತು ಕೂಡ ನಿನ್ನೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಜನವಿರೋಧಿ, ಪ್ರಜಾಸತ್ತಾತ್ಮಕವಲ್ಲದ ಹಾಗೂ ಜನಸಾಮಾನ್ಯರಿಗೆ ಭಾರೀ ತೊಂದರೆ ಉಂಟು ಮಾಡುವ ಕಾನೂನುಗಳನ್ನು ಹಿಂಪಡೆಯುವಂತೆ ಅದು ಒತ್ತಾಯಿಸಿತ್ತು.

ಪ್ರತಿಭಟನೆ ಹಿನ್ನೆಲೆಯಲ್ಲಿ ಪತ್ರ  ಬರೆದಿರುವ ಬಿಸಿಐ ಈ ವಿಚಾರವನ್ನು ತಾನು ಗಂಭೀರವಾಗಿ ಪರಿಗಣಿಸಿದ್ದು ಕಳವಳಪಡುವ ಅಗತ್ಯವಿಲ್ಲ ಎಂದಿದೆ. ಮುಂದುವರೆದು, ಹೊಸ ಕಾನೂನುಗಳ ವಿರುದ್ಧ ದಿಢೀರ್‌ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಸಹಿ ಹಾಕಿರುವ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಜುಲೈ 1ರಂದು ಜಾರಿಗೆ ಬರಲಿವೆ. ವಸಾಹತುಶಾಹಿ ಕಾಲದ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಇವುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಆದರೆ ಇವುಗಳನ್ನು ಸಂಸತ್‌ ಅಂಗೀಕರಿಸಿದ ರೀತಿ, ಅಸ್ತಿತ್ವದಲ್ಲಿರುವ ಕ್ರಿಮಿನಲ್ ಪ್ರಕರಣಗಳ ಮೇಲೆ ಅವು ಬೀರುವ ಪರಿಣಾಮ, ಕಾನೂನು ಜಾರಿಗೆ ಸಂಬಂಧಿಸಿದ ಪ್ರಾಯೋಗಿಕ ಸವಾಲು ಅಲ್ಲದೆ ಅವುಗಳ ಹೆಸರಿನ ಬಗ್ಗೆ ವಿವಾದ ಎದ್ದಿತ್ತು.  

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನ್ಯಾಯಿಕ ವರ್ಗದ ಕಳವಳಗಳನ್ನು ತಿಳಿಸಲು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಪ್ರಾರಂಭಿಸುವುದಾಗಿ ಬಿಸಿಐ ಇದೀಗ ಭರವಸೆ ನೀಡಿದೆ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ವಕೀಲರೂ ಆಗಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಕೋರುವುದಾಗಿ ಅದು ಹೇಳಿದೆ. ಅಲ್ಲದೆ ಕಾನೂನುಗಳಲ್ಲಿರುವ ಸೂಕ್ತವಲ್ಲದ ನಿಬಂಧನೆಗಳ ಬಗ್ಗೆ ನಿರ್ದಿಷ್ಟವಾಗಿ ತನಗೆ ತಿಳಿಸುವಂತೆಯೂ ಎಲ್ಲಾ ವಕೀಲರ ಸಂಘಗಳಿಗೆ ಮನವಿ ಮಾಡಿದೆ.

Kannada Bar & Bench
kannada.barandbench.com