ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ (ಬಿಡಿಎ) ವಿರುದ್ಧ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ನಗರದ ಸರ್.ಎಂ ವಿಶ್ವೇಶ್ವರಯ್ಯ 7ನೇ ಹಂತದ ಬಡಾವಣೆ ರಚನೆಗಾಗಿ 2003ರಲ್ಲಿ ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡಿದ್ದ 15 ಗುಂಟೆ ಜಮೀನಿಗೆ ಪರಿಹಾರವಾಗಿ 1.80 ಕೋಟಿ ರೂಪಾಯಿ ಬೆಲೆಯ (ಪ್ರಸ್ತುತ ಮಾರ್ಗಸೂಚಿ ದರ) ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಾಗಿ ಭರವಸೆ ನೀಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಗಿಡದಕೊನೇನಹಳ್ಳಿಯಲ್ಲಿ ತನಗೆ ಸೇರಿದ 15 ಗುಟೆ ಜಮೀನನ್ನು 2003ರಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಬಿಡಿಎ ಕ್ರಮ ಪ್ರಶ್ನಿಸಿ ಮುದ್ದಯ್ಯನಪಾಳ್ಯದ ನಿವಾಸಿ ಮುದ್ದೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆಯ ವೇಳೆ ಬಿಡಿಎ ಆಯುಕ್ತ ಎನ್ ಜಯರಾಮ್ ಅವರು ಪ್ರಮಾಣ ಪತ್ರ ಸಲ್ಲಿಸಿ, ಅರ್ಜಿದಾರರಿಗೆ ನಿವೇಶನದ ಭರವಸೆ ನೀಡಿದ್ದಾರೆ.
ಫೆಬ್ರವರಿ 13ರಂದು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಅರ್ಜಿದಾರರ 15 ಗುಂಟೆ ಜಮೀನನ್ನು 2003ರಲ್ಲಿ ಸ್ವಾಧೀನಪಡಿಸಿಕೊಂಡಿರುವುದಾಗಿ ಬಿಡಿಎ ಪರ ವಕೀಲರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. 21 ವರ್ಷಗಳಾದರೂ ಪರಿಹಾರ ನೀಡಿಲ್ಲ ಎಂದರೆ ಹೇಗೆ. ಈ ವಿಚಾರವಾಗಿ ಅರ್ಜಿದಾರರನ್ನು ಸುಮಾರು ಕಾಲು ಶತಮಾನದಷ್ಟು ಸಮಯ ಬಿಡಿಎ ಕಚೇರಿಗೆ ಅಲೆಯುವಂತೆ ಮಾಡಲಾಗಿದೆ. ಸುಗ್ರೀವಾಜ್ಞೆ ಮೂಲಕ ಬಿಡಿಎ ಅನ್ನು ಮುಚ್ಚಲು ಆದೇಶಿಸುವುದು ಉತ್ತಮ ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿತ್ತು. ಅಲ್ಲದೇ, ಅರ್ಜಿದಾರರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿತ್ತು.
ಅದರಂತೆ ಅರ್ಜಿ ಗುರುವಾರ ವಿಚಾರಣೆಗೆ ಬಂದಾಗ ಬಿಡಿಎ ಆಯುಕ್ತರ ಪರ ವಕೀಲ ಬಿ ವಚನ್ ಅವರು ಅರ್ಜಿದಾರರಿಗೆ ಪರಿಹಾರವಾಗಿ ನೀಡುವ ನಿವೇಶನ ಮತ್ತು ಅದರ ಮಾರ್ಗಸೂಚಿ ದರ ಕುರಿತ ಮಾಹಿತಿಯನ್ನು ವಿವರಿಸಿ ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ಈ ಪ್ರಮಾಣ ಪತ್ರ ದಾಖಲಿಸಿಕೊಂಡ ಪೀಠವು ವಿಚಾರಣೆ ಮುಂದೂಡಿತು.
ಪ್ರಮಾಣ ಪತ್ರದಲ್ಲಿ ಏನಿದೆ?: ಗಿಡದಕೊನೇನಹಳ್ಳಿ ಗ್ರಾಮ ಸರ್ವೇ ನಂಬರ್ 50ರಲ್ಲಿ ಅರ್ಜದಾರರಿಗೆ ಸೇರಿದ 15 ಗುಂಟೆ ಜಮೀನನ್ನು 2003ರಲ್ಲಿ ವಶಪಡಿಸಿಕೊಳ್ಳಲಾಗಿದೆ. ಸರ್ಕಾರವು 2018ರಲ್ಲಿ ಹೊರಡಿಸಿದ ಆದೇಶದನ್ವಯ 2003ರಲ್ಲಿ ಅರ್ಜಿದಾರರು 12,81,898 ರೂಪಾಯಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಸದ್ಯದ ಮಾರ್ಗಸೂಚಿ ಬೆಲೆಯ ಅನುಸಾರ ಅರ್ಜಿದಾರರು ಅಭಿವೃದ್ಧಿಪಡಿಸಿದ 4,492 ಚದರ ಅಡಿ ನಿವೇಶನವನ್ನು ಪಡೆಯಲ ಅರ್ಹರಾಗಿದ್ದಾರೆ. ಆದರೆ, ಅವರಿಗೆ ಹೆಚ್ಚುವರಿಯಾಗಿ 158 ಚದರ ಅಡಿ ಜಾಗ ಮಂಜೂರು ಮಾಡಲಾಗುತ್ತಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ, ಸರ್. ಎಂ ವಿಶೇಶ್ವರಯ್ಯ ಬಡಾವಣೆಯ 7ನೇ ಬ್ಲಾಕಿನ ನಿವೇಶನ ಸಂಖ್ಯೆ-909/1ರಲ್ಲಿನ 1,03,69,500 ರೂಪಾಯಿ ಬೆಲೆಯ 2,325 ಚದರ ಅಡಿ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ 1ನೇ ಬ್ಲಾಕಿನ ನಿವೇಶನ ಸಂಖ್ಯೆ-1814ರಲ್ಲಿನ 80,77,050 ರೂಪಾಯಿ ಬೆಲೆಯ 2,325 ಚದರ ಅಡಿ ನಿವೇಶನ ಮಂಜೂರು ಮಾಡಲಾಗುವುದು. ಇದರ ಜೊತೆಗೆ ಹೆಚ್ಚುವರಿಯಾಗಿ ಮಂಜೂರು ಮಾಡುವ 158 ಚದರ ಅಡಿಗೆ ಅರ್ಜಿದಾರರೇ 5,48,892 ರೂಪಾಯಿ ಬಾಕಿ ಮೊತ್ತವನ್ನು ಬಿಡಿಎಗೆ ಪಾವತಿಸಬೇಕು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.