ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ ಅವರಂತೆ ಧೈರ್ಯದಿಂದ ಜೀವನ ನಡೆಸಿ ಎಂದು ಸಲಹೆ ನೀಡುವ ಮೂಲಕ ಕೇರಳ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಯುವತಿ ಮತ್ತು ಪೀಠದ ನಡುವೆ ಕುತೂಹಲಕಾರಿ ಮಾತುಗಳ ವಿನಿಮಯ ನಡೆಯಿತು.
ತನ್ನ ಪತ್ನಿ ಹಾಗೂ 11 ತಿಂಗಳ ಮಗುವನ್ನು ತಮ್ಮ ಪತ್ನಿಯ ಪೋಷಕರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾ. ಅಲೆಕ್ಸಾಂಡರ್ ಥಾಮಸ್ ಮತ್ತು ಸೋಫಿ ಥಾಮಸ್ ಅವರನ್ನೊಳಗೊಂಡ ಪೀಠ ಈ ವಿಚಾರ ತಿಳಿಸಿತು.
ಹಿಜಾಬ್ ಧರಿಸಿದ್ದ 21 ವರ್ಷ ವಯಸ್ಸಿನ ಪತ್ನಿ ವೀಡಿಯೊ ಕಾನ್ಫರೆನ್ಸ್ ಮೂಲಕ ಪೀಠದೊಂದಿಗೆ ಮಾತನಾಡುತ್ತಾ ತಾನು ತನ್ನ ಮಗುವಿನೊಂದಿಗೆ ತೆರಳಿ ಪತಿಯ ಜೊತೆ ವಾಸಿಸಲು ದೃಢ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಈ ಹಂತದಲ್ಲಿ ನ್ಯಾ. ಅಲೆಕ್ಸಾಂಡರ್ ಅವರು ನ್ಯಾ. ಸೋಫಿ ಥಾಮಸ್ ಅವರನ್ನು ಉದ್ದೇಶಿಸಿ "ನೊಬೆಲ್ ಪ್ರಶಸ್ತಿ ಪಡೆದ ಯುವತಿ ಯಾರು? ಆಕೆಯ ಹಾಗೆ (ಯುವತಿ) ಕಾಣುತ್ತಾರೆ" ಎಂದರು. ನಂತರ ಯುವತಿಯತ್ತ ತಿರುಗಿದ ನ್ಯಾ. ಅಲೆಕ್ಸಾಂಡರ್ ಅವರು “ಮಲಾಲಾಳಂತೆ ಧೈರ್ಯವಾಗಿರಿ. ಧೈರ್ಯದಿಂದ ಜೀವನ ನಡೆಸಿ. ಪೋಷಕರ ಇಚ್ಛೆಯಂತೆ ಸದಾ ನಡೆದುಕೊಳ್ಳಬೇಕಿಲ್ಲ” ಎಂದರು.
ಅರ್ಜಿದಾರ ಪತಿ ಮತ್ತು ಪತ್ನಿ ಇಬ್ಬರೂ ಒಟ್ಟಿಗೆ ವಾಸಿಸಲು ಬಯಸುವುದಾಗಿ ತಿಳಿಸಿದ ಬಳಿಕ ಆಪ್ತಸಮಾಲೋಚನೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದ ಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು.
ಆದರೂ, ವಿಚಾರಣೆ ಮುಗಿಯುವ ಮುನ್ನ, ನ್ಯಾ. ಅಲೆಕ್ಸಾಂಡರ್ ಅವರು ಯುವತಿಗೆ ವಿದ್ಯಾಭ್ಯಾಸ ಮಂದುವರಿಸುವಂತೆ ಸಲಹೆ ನೀಡಿದರು. ಅದಕ್ಕೆ ದನಿಗೂಡಿಸಿದ ಆಕೆ “ನಾನು ಓದಲು ಬಯಸುತ್ತೇನೆ. ಎಂಬಿಬಿಎಸ್ ಪದವಿ ಪಡೆಯುವ ಇಚ್ಛೆ ಇದೆ. ಜಾರ್ಜಿಯಾದಲ್ಲಿ ಅಧ್ಯಯನ ಮಾಡಲು ತೆರಳುತ್ತೇನೆ. ನನ್ನ ಪ್ರವೇಶಾತಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ” ಎಂದು ಉತ್ತರಿಸಿದರು.