“ಕಾರ್ಮಿಕರು ಬಂಡೇಳುವ ಮೊದಲೇ ಕೈಗಾರಿಕಾ ನ್ಯಾಯಾಧಿಕರಣದ ಬೆಂಗಳೂರು ಪೀಠದ ಮುಖ್ಯಸ್ಥರ ಹುದ್ದೆ ಭರ್ತಿಗೆ ಕ್ರಮ ಜರುಗಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ಚಾಟಿ ಬೀಸಿದೆ.
ಕೈಗಾರಿಕಾ ಕಾನೂನು ಅಭ್ಯಾಸಕಾರರ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರದ ಪರ ವಕೀಲ ಎ ವಿ ನಿಶಾಂತ್, “ನೇಮಕಾತಿ ವಿಳಂಬ ವಿಚಾರದಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳದೇ ಹೋದರೆ ನ್ಯಾಯಾಲಯದಲ್ಲಿ ₹10 ಲಕ್ಷ ಠೇವಣಿ ಇಡಬೇಕಾಗುತ್ತದೆ ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ 2023ರ ಅಕ್ಟೋಬರ್ 25ರಂದು ಎಚ್ಚರಿಸಿತ್ತು. ಈ ಕುರಿತ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಮುಖ್ಯಸ್ಥರ ನೇಮಕಾತಿಗೆ 2024ರ ಜೂನ್ 30ರವರೆಗೆ ಕಾಲಾವಕಾಶ ನೀಡಿದೆ” ಎಂದು ವಿವರಿಸಿ, ಸಂಬಂಧಿಸಿದ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ದೀಕ್ಷಿತ್ ಅವರು, “ಮುಖ್ಯಸ್ಥರ ನೇಮಕಾತಿ ವಿಳಂಬ ಸರಿಯಲ್ಲ. ಇದರಿಂದ ಕಾರ್ಮಿಕ ವರ್ಗ ಅನಗತ್ಯ ತೊಂದರೆ ಎದುರಿಸಬೇಕಾಗುತ್ತದೆ. ಈ ಕಾರ್ಮಿಕರೆಲ್ಲಾ ಇನ್ನೆಷ್ಟು ದಿನ ಕಾಯಬೇಕು? ಕಾಯುವುದಕ್ಕೂ ಒಂದು ಮಿತಿ ಇರುತ್ತದೆ ಅಲ್ಲವೇ? ಕಾರ್ಮಿಕರು ಒಗ್ಗಟ್ಟಾಗಿ ಬೀದಿಗೆ ಬಂದು ಬಂಡೇಳುವ ಮುನ್ನ ಪೀಠದ ಮುಖ್ಯಸ್ಥರನ್ನು ನೇಮಕ ಮಾಡಿ” ಎಂದು ಕೇಂದ್ರ ಸರ್ಕಾರಕ್ಕೆ ಮೌಖಿಕ ನಿರ್ದೇಶನ ನೀಡಿದರು.
ಅಂತೆಯೇ, “ಮುಖ್ಯಸ್ಥರ ಹುದ್ದೆ ನೇಮಕಾತಿಗೆ ಸುಪ್ರೀಂ ಕೋರ್ಟ್ 2024ರ ಜೂನ್ 30ರವರೆಗೆ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯ ಕಂಡುಬರುತ್ತಿಲ್ಲ” ಎಂಬ ಅಭಿಪ್ರಾಯದೊಂದಿಗೆ ಪೀಠ ಅರ್ಜಿ ವಿಲೇವಾರಿ ಮಾಡಿತು.
“ನ್ಯಾಯಾಧಿಕರಣದ ಮುಖ್ಯಸ್ಥರ ಹುದ್ದೆ ಕಳೆದ ಮೂರು ವರ್ಷಗಳಿಂದ ಖಾಲಿ ಬಿದ್ದಿದೆ. ಅದನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಆದರೂ ಈತನಕ ನೇಮಕ ಮಾಡಿಲ್ಲ” ಎಂದು ಆಕ್ಷೇಪಿಸಿ, ಈ ಅರ್ಜಿ ಸಲ್ಲಿಸಲಾಗಿತ್ತು.