ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಆರೋಪಿ ಸರ್ಕಾರಿ ನೌಕರನೆಂಬ ಅಂಶ ಪರಿಗಣಿಸಿ ಜಾಮೀನು ಮಂಜೂರು ಮಾಡಲಾಗದು ಎಂದಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ (ಎಇಇ) ಜಾಮೀನು ನಿರಾಕರಿಸಿದೆ.
ಬೇರೊಬ್ಬರೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಹಾಗೂ ಆಕೆಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಎಇಇ ಎಚ್ ಎನ್ ಶ್ರೀನಿವಾಸ ಮೂರ್ತಿ ಸಲ್ಲಿಸಿದ್ದ ಜಾಮೀನು ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ಇತ್ತೀಚೆಗೆ ವಜಾಗೊಳಿಸಿದೆ.
ಆರೋಪಿ ಪರ ವಕೀಲ ಕೆಂಪರಾಜು ಅವರು “ಅರ್ಜಿದಾರ ಕೆಪಿಟಿಸಿಎಲ್‌ನಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಉದ್ಯೋಗಿಯಾಗಿರುವ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಘಟನೆ ನಡೆದಿದೆ ಎನ್ನಲಾದ ದಿನದಿಂದ ಒಂದೂವರೆ ತಿಂಗಳು ತಡವಾಗಿ ದೂರು ದಾಖಲಿಸಲಾಗಿದೆ. ಅರ್ಜಿದಾರನ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತುಪಡಿಸುವ ಅಂಶಗಳಿಲ್ಲ. ಆರೋಪಿಯು 2021ರ ನವೆಂಬರ್ 14ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂತ್ರಸ್ತೆಯು 23 ವರ್ಷ, 10 ತಿಂಗಳು ವಯಸ್ಸಿನವರಾಗಿದ್ದು, ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಬೆಳೆಸಲಾಗಿದೆ ಎನ್ನಲಾಗುವುದಿಲ್ಲ. ಅರ್ಜಿದಾರ 25 ವರ್ಷದವರಾಗಿದ್ದು, ನ್ಯಾಯಾಂಗ ಬಂಧನದಲ್ಲಿಯೇ ಮುಂದುವರಿದರೆ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು” ಎಂದು ಮನವಿ ಮಾಡಿದ್ದರು.
ಇದನ್ನು ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲ ಕೃಷ್ಣ ಕುಮಾರ್ ಅವರು “ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ಹೇಳಿಕೆ ನೀಡಿರುವ ಸಂತ್ರಸ್ತೆಯು ಆರೋಪಿ ತನ್ನ ಜತೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿರುವುದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ. ಲೈಂಗಿಕ ಕ್ರಿಯೆ ನಡೆದಿರುವುದು ವೈದ್ಯಕಿಯ ವರದಿಯಲ್ಲೂ ಸಾಬೀತಾಗಿದೆ. ಆರೋಪಿ ಸಂತ್ರಸ್ತೆಯನ್ನು ಹೋಂ ಸ್ಟೇಗೆ ಕರೆದುಕೊಂಡು ಹೋಗಿರುವುದನ್ನು ಅಲ್ಲಿನ ಇಬ್ಬರು ಕೆಲಸಗಾರರು ದೃಢೀಕರಿಸಿದ್ದಾರೆ. ಈ ಎಲ್ಲ ವಿಚಾರಗಳು ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪುಷ್ಟೀಕರಿಸುತ್ತಿವೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕು” ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಪ್ರಾಣ ಬೆದರಿಕೆ ಒಡ್ಡಿರುವುದಾಗಿ ಆರೋಪಿಯ ವಿರುದ್ಧ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಲೈಂಗಿಕ ಕ್ರಿಯೆ ನಡೆದಿರುವುದುನ್ನು ವೈದ್ಯರೂ ದೃಢಪಡಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಅರ್ಜಿದಾರ ಸರ್ಕಾರಿ ನೌಕರ ಎಂಬ ಅಂಶ ಪರಿಗಣಿಸಿ, ಜಾಮೀನು ಮಂಜೂರು ಮಾಡಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಆರೋಪಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವತಿಯನ್ನು 2021ರ ಸೆಪ್ಟೆಂಬರ್ 14ರಂದು ಊಟ ಮಾಡುವ ನೆಪದಲ್ಲಿ ಹೋಂ ಸ್ಟೇಗೆ ಕರೆದುಕೊಂಡು ಹೋದ ಆರೋಪಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರು. ಅದಾದ ಬಳಿಕ, ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆರೋಪಿಯು ವಿಷಯನ್ನು ಯಾರಿಗೂ ತಿಳಿಸಬಾರದು. ಒಂದೊಮ್ಮೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂಬ ಆರೋಪ ಅರ್ಜಿದಾರರ ಮೇಲಿದೆ. ಈ ಸಂಬಂಧ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ.