ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಸಾವಿರಾರು ಮೆಟ್ರಿಕ್ ಟನ್ ಅದಿರು ಸಾಗಣೆ, ಒಳಸಂಚು, ವಂಚನೆ ಕಳ್ಳತನ ಮಾಡಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿರುವ ಆರು ಕ್ರಿಮಿನಲ್ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿ ಏಳು ಮಂದಿಗೆ ಗರಿಷ್ಠ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಒಟ್ಟಾರೆ ₹44.65 ಕೋಟಿ ದಂಡ ವಿಧಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಮೊದಲ ಆರೋಪಿಯಾಗಿರುವ ಅರಣ್ಯಾಧಿಕಾರಿ ಮಹೇಶ್ ಜೆ.ಬಿಳಿಯೆ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರೂ ಆದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕರಾದ ಕೆ.ವಿ.ನಾಗರಾಜ್ ಮತ್ತು ಕೆ ವಿ ಗೋವಿಂದರಾಜ್, ಆಶಾಪುರ ಮೈನಿಂಗ್ ಕಂಪನಿ ಮಾಲೀಕ ಚೇತನ್ ಷಾ ಮತ್ತು ಲಾಲ್ ಮಹಲ್ ಕಂಪನಿ ಮಾಲೀಕ ಪ್ರೇಮ್ ಚಂದ್ ಗರ್ಗ್‌ಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಎಲ್ಲಾ ಆರು ಪ್ರಕರಣಗಳಲ್ಲಿಯೂ ದೋಷಿಗಳಿಗೆ ಕಳ್ಳತನಕ್ಕೆ 3 ವರ್ಷ, ಒಳಸಂಚಿಗೆ 5 ವರ್ಷ ಹಾಗೂ ವಂಚನೆ ಅಪರಾಧಕ್ಕೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಎಲ್ಲಾ ಶಿಕ್ಷೆಯೂ ಏಕಕಾಲಕ್ಕೆ ಜಾರಿಯಾಗಲಿರುವುದರಿಂದ ಗರಿಷ್ಠ 7 ವರ್ಷ ಶಿಕ್ಷೆ ಗಣನೆಗೆ ಬರಲಿದೆ.
ಮೊದಲ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್ ಅವರನ್ನು ಐಪಿಸಿ ಸೆಕ್ಷನ್‌ಗಳಾದ 120-ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), 379 (ಕಳವು) ಅಡಿ ದೋಷಿಗಳು ಎಂದು ತೀರ್ಮಾನಿಸಿದ್ದ ನ್ಯಾಯಾಲಯವು ₹6 ಕೋಟಿ ರೂಪಾಯಿ ದಂಡ ವಿಧಿಸಿದೆ.
ಎರಡನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಆಶಾಪುರ ಮಿನೆಚೆಮ್ ಲಿಮಿಟೆಡ್ ಮತ್ತು ಅದರ ಮಾಲೀಕ ಚೇತನ್ ಶಾ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್‌ಗೆ ₹9.60 ಕೋಟಿ ದಂಡ ವಿಧಿಸಿದೆ.
ಮೂರನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್‌ಗೆ ₹9.36 ಕೋಟಿ ದಂಡ ವಿಧಿಸಲಾಗಿದೆ.
ನಾಲ್ಕನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಪ್ರೈ. ಲಿ ಮತ್ತು ಅದರ ಮಾಲೀಕರಾದ ಕೆ ವಿ ನಾಗರಾಜ್ ಹಾಗೂ ಕೆ ವಿ ಎನ್ ಗೋವಿಂದರಾಜ್ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್‌ಗೆ ₹9.54 ಕೋಟಿ ದಂಡ ವಿಧಿಸಲಾಗಿದೆ.
ಐದನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಮಾಲೀಕ ಕೆ ಮಹೇಶ್ ಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ್, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್‌ಗೆ ₹9.25 ಕೋಟಿ ಕೋಟಿ ದಂಡ ವಿಧಿಸಲಾಗಿದೆ.
ಆರನೇ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಲಾಲ್ ಮಹಲ್ ಲಿಮಿಟೆಡ್ ಮತ್ತು ಅದರ ಮಾಲೀಕ ಪ್ರೇಮ್ ಚಂದ್ ಗರ್ಗ್ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್ ₹90 ಲಕ್ಷ ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿದೆ.