[ಬೇಲೆಕೇರಿ ಅದಿರು ಕಳವು] ದಂಡದ ಮೊತ್ತದ ಕಾಲುಭಾಗ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ಸೈಲ್‌ ಜೈಲು ಶಿಕ್ಷೆ ಅಮಾನತು

ವಿಚಾರಣೆಯ ಒಂದು ಹಂತದಲ್ಲಿ ಯಾವ ಶಿಕ್ಷೆಗೆ ಯಾವ ದೋಷಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸದ ವಿಚಾರಣಾಧೀನ ನ್ಯಾಯಾಲಯದ ಬಗ್ಗೆ ಹೈಕೋರ್ಟ್‌ ಮೌಖಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
Congress MLA Satish Sail & Karnataka HC
Congress MLA Satish Sail & Karnataka HC
Published on

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ದಂಡದ ಮೊತ್ತದ ಪೈಕಿ ಶೇ. 25ರಷ್ಟನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಆರು ವಾರಗಳಲ್ಲಿ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌, ಉದ್ಯಮಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆ ವಿ ಎನ್‌ ಗೋವಿಂದರಾಜ್‌, ಚೇತನ್‌ ಶಾ, ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಪಾಲುದಾರ ಕೆ ಮಹೇಶ್‌ ಕುಮಾರ್‌ ಅಲಿಯಾಸ್‌ ಖಾರದಪುಡಿ ಮಹೇಶ್‌ ಮತ್ತು ಮೆಸರ್ಸ್‌ ಲಾಲ್‌ ಮಹಲ್‌ ಲಿಮಿಟೆಡ್‌ ಮತ್ತು ಅದರ ಮಾಲೀಕ ಪ್ರೇಮ್‌ ಚಂದ್‌ ಗಾರ್ಗ್‌ ಅವರಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಅಮಾನತುಗೊಳಿಸಿದೆ.

ಕಾರವಾರ ಶಾಸಕ ಸತೀಶ್‌ ಸೈಲ್‌ ಮತ್ತಿತರರು ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ತಮ್ಮನ್ನು ಬಿಡುಗಡೆಗೊಳಿಸುವಂತೆ ದೋಷಿಗಳು ಕೋರಿದ್ದರು.

ಆಶಾಪುರ ಮೈನ್‌ಕೆಮ್‌, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌, ಸ್ವಸ್ತಿಕ್‌ ಸ್ಟೀಲ್ಸ್‌ (ಹೊಸಪೇಟೆ) ಪ್ರೈವೇಟ್‌ ಲಿಮಿಟೆಡ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ವಿಧಿಸಿರುವ ದಂಡದ ಮೊತ್ತ ಮತ್ತು ಉದ್ಯಮಿಗಳಾದ ಸತೀಶ್‌ ಸೈಲ್‌, ಸ್ವಸ್ತಿಕ್‌ ನಾಗರಾಜ್‌, ಕೆ ವಿ ಎನ್‌ ಗೋವಿಂದರಾಜ್‌, ಚೇತನ್‌ ಶಾ, ಕೆ ಮಹೇಶ್‌ ಕುಮಾರ್‌ ಅಲಿಯಾಸ್‌ ಖಾರದಪುಡಿ ಮಹೇಶ್‌ ಮತ್ತು ಪ್ರೇಮ್‌ ಚಂದ್‌ ಗರ್ಗ್‌ ಅವರಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ವಿಧಿಸಿರುವ ದಂಡದ ಮೊತ್ತದ ಪೈಕಿ ಶೇ. 25ರಷ್ಟು ಹಣವನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಆರು ವಾರಗಳಲ್ಲಿ ಠೇವಣಿ ಇಡಬೇಕು. ಈ ಷರತ್ತಿಗೆ ಒಳಪಟ್ಟು ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.

ವಿಚಾರಣೆಯ ಒಂದು ಹಂತದಲ್ಲಿ ಯಾವ ಶಿಕ್ಷೆಗೆ ಯಾವ ದೋಷಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸದ ವಿಚಾರಣಾಧೀನ ನ್ಯಾಯಾಲಯದ ಬಗ್ಗೆ ಹೈಕೋರ್ಟ್‌ ಮೌಖಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಸಿ ವಿ ನಾಗೇಶ್‌, ಹಷ್ಮತ್‌ ಪಾಷಾ, ರವಿ ಬಿ. ನಾಯಕ್‌, ಕಿರಣ್‌ ಜವಳಿ ಅವರು “ದಂಡದ ಮೊತ್ತಕ್ಕೆ ಸಂಬಂಧಿಸಿದಂತೆ ವಾದ ಮಾಡಬೇಕಿದೆ. ಈಗ ದಂಡದ ಮೊತ್ತ ಠೇವಣಿ ಇಡಲು ಆದೇಶಿಸಬಾರದು. ಅಂತಿಮ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಅದನ್ನು ಪರಿಗಣಿಸಬಹುದು” ಎಂದು ವಾದಿಸಿದ್ದರು.

ಇದಕ್ಕೆ ಸಿಬಿಐ ಪರವಾಗಿ ಪಿ ಪ್ರಸನ್ನಕುಮಾರ್‌ ಅವರು “ಶಿಕ್ಷೆ ಅಮಾನತಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಅರ್ಜಿದಾರರು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿರುವುದರಿಂದ ನ್ಯಾಯಾಲಯವು ಸರಿಯಾದ ಪ್ರಮಾಣದಲ್ಲಿ ದಂಡ ವಿಧಿಸಿದೆ. ಅದನ್ನು ಪಾವತಿಸಲು ಆದೇಶಿಸಬೇಕು. ಇದರಲ್ಲಿ ವಿನಾಯಿತಿ ನೀಡಬಾರದು” ಎಂದರು ಕೋರಿದರು.

ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಮತ್ತು ದಂಡ

ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣದಲ್ಲಿ ಮಹೇಶ್‌ ಜೆ. ಬಿಳಿಯೆ, ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌, ಅದರ ಪಾಲುದಾರ ಕೆ ಮಹೇಶ್‌ ಕುಮಾರ್‌ ಅಲಿಯಾಸ್‌ ಖಾರದಪುಡಿ ಮಹೇಶ್‌, ಮೆಸರ್ಸ್‌ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌ ದೋಷಿಗಳು ಎಂದಿದ್ದ ವಿಶೇಷ ನ್ಯಾಯಾಲಯವು ಐಪಿಸಿ ಸೆಕ್ಷನ್‌ 120-ಬಿ ಅಡಿ ಕ್ರಿಮಿನಲ್‌ ಪಿತೂರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 420 ಅಡಿ ಕಳವು ಅಪರಾಧಕ್ಕೆ ಏಳು ವರ್ಷ ಜೈಲು ಮತ್ತು ₹9,25,00,000 ದಂಡ ವಿಧಿಸಿದೆ ಮತ್ತು ಐಪಿಸಿ ಸೆಕ್ಷನ್‌ 379 ಜೊತೆಗೆ 120-ಬಿ ಅಡಿ ಪಿತೂರಿ ನಡೆಸಿ ಕಳವು ಮಾಡಿದ್ದಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಿದೆ.

Also Read
[ಬೇಲೆಕೇರಿ ಅದಿರು ಕಳವು] ಶಾಸಕ ಸತೀಶ್‌ ಸೈಲ್‌, ಮೂವರು ಉದ್ಯಮಿಗಳಿಂದ ಶಿಕ್ಷೆ ರದ್ದತಿಗೆ ಮನವಿ: ಸಿಬಿಐಗೆ ನೋಟಿಸ್‌

ಆಶಾಪುರ ಮೈನ್‌ಕೆಮ್ ಲಿಮಿಟೆಡ್‌, ಅದರ ವ್ಯವಸ್ಥಾಪಕ ನಿರ್ದೇಶಕ ಚೇತನ್‌ ಶಾ ಅವರನ್ನು ದೋಷಿಗಳು ತೀರ್ಮಾನಿಸಿದ್ದ ನ್ಯಾಯಾಲಯವು ಎಲ್ಲಾ ದೋಷಿಗಳಿಗೆ ₹9.06 ಕೋಟಿ ದಂಡ ಪಾವತಿಸಲು ಆದೇಶಿಸಿದೆ.

ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈ ಲಿಮಿಟೆಡ್‌ ಮತ್ತು ಸತೀಶ್‌ ಸೈಲ್‌ಗೆ ಒಟ್ಟು ಆರು ಪ್ರಕರಣಗಳಲ್ಲಿ ಕ್ರಮವಾಗಿ ₹90 ಲಕ್ಷ, ₹6 ಕೋಟಿ, ₹9.52 ಕೋಟಿ, ₹9.36 ಕೋಟಿ, ₹9.06 ಕೋಟಿ, ₹9.25 ಕೋಟಿ ದಂಡ ವಿಧಿಸಿದೆ. ತಮ್ಮ ವಿರುದ್ಧದ ಆರು ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಸೈಲ್‌ ಮತ್ತು ಇತರೆ ಅಪರಾಧಿಗಳು ಒಟ್ಟಾಗಿ ಪಾವತಿಸಬೇಕು.

ಮೆಸರ್ಸ್‌ ಸ್ವಸ್ತಿಕ್‌ ಸ್ಟೀಲ್‌ (ಹೊಸಪೇಟೆ) ಪ್ರೈ ಲಿ ಮತ್ತು ಅದರ ನಿರ್ದೇಶಕ ಕೆ ವಿ ನಾಗರಾಜ ಅಲಿಯಾಸ್‌ ಸ್ವಸ್ತಿಕ್‌ ನಾಗರಾಜ್‌ ಮತ್ತು ಕೆ ವಿ ಎನ್‌ ಗೋವಿಂದರಾಜ್‌ಗೆ ₹9.52 ಕೋಟಿ ದಂಡ ವಿಧಿಸಿದೆ. ಇಲ್ಲಿ ಸೈಲ್‌ಗೂ ದಂಡದ ಮೊತ್ತ ಹಂಚಿಕೆಯಾಗಲಿದೆ.

ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಸಹ ಶಿಕ್ಷೆ ಮತ್ತು ದಂಡ ಬದಿಗೆ ಸರಿಸುವಂತೆ ಕೋರಿದೆ. ಎಲ್ಲಾ ಪ್ರಕರಣಗಳಲ್ಲಿ ಕ್ರಮವಾಗಿ ಐಪಿಸಿ ಸೆಕ್ಷನ್‌ 120 ಬಿ ಮತ್ತು ಸೆಕ್ಷನ್‌ 379 ಅಡಿ ಅಪರಾಧಕ್ಕೆ ಮೂರು ಮತ್ತು ಐದು ವರ್ಷ ಶಿಕ್ಷೆ ಹಾಗೂ ₹20 ಸಾವಿರ ದಂಡ, ಐಪಿಸಿ ಸೆಕ್ಷನ್‌ 420 ಅಡಿ ಅಪರಾಧಕ್ಕೆ ಏಳು ವರ್ಷ ಶಿಕ್ಷೆ ಮತ್ತು ಭಿನ್ನ ರೂಪದಲ್ಲಿ ದಂಡ ವಿಧಿಸಲಾಗಿದೆ.

Kannada Bar & Bench
kannada.barandbench.com