ಬೆಳ್ತಂಗಡಿ ಬಾಲಕನ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

ಉಜಿರೆ ಗ್ರಾಮದ ರಥಬೀದಿಯಲ್ಲಿ ಅಭಿನವ್ ಎಂಬ ಬಾಲಕನನ್ನು 2020ರ ಡಿಸೆಂಬರ್‌ನಲ್ಲಿ ಅಪಹರಿಸಲಾಗಿತ್ತು. ಕೋಲಾರದ ನಾಲ್ವರು ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ ವ್ಯವಹಾರದ ಸಂಬಂಧ ಈ ಅಪಹರಣ ಮಾಡಿದ್ದರು ಎಂದು ವ್ಯಾಪಕವಾಗಿ ವರದಿಯಾಗಿತ್ತು.
ಬೆಳ್ತಂಗಡಿ ಬಾಲಕನ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು
Bail

ಭಾರೀ ಚರ್ಚೆ, ಕುತೂಹಲಕ್ಕೆ ಕಾರಣವಾಗಿದ್ದ ಬೆಳ್ತಂಗಡಿಯ ಬಾಲಕನ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಈ ಮೊದಲು ತನಿಖಾ ಹಂತದಲ್ಲಿ ಪ್ರಕರಣದ ಆರೋಪಿಗಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ತದನಂತರ ಆರೋಪಿಗಳು ಜಾಮೀನು ಕೋರಿ ಮರು ಅರ್ಜಿ ಸಲ್ಲಿಸಿದ್ದರು. ಈ ಹಿಂದಿನ ಬಾರಿ ಪ್ರಕರಣ ತನಿಖಾ ಹಂತದಲ್ಲಿದ್ದು, ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನೆಂದು ಖಚಿತವಾಗಿರಲಿಲ್ಲ. ಆದರೆ, ಈಗ ಪ್ರಕರಣದ ತನಿಖೆಯು ಮುಕ್ತಾಯವಾಗಿದ್ದು, ಆರೋಪಿಗಳು ಕೃತ್ಯವೆಸಗಿದವರಿಗೆ ಆಶ್ರಯ ನೀಡಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲಾಗಿದೆ ಎಂದು ನ್ಯಾಯಾಲಯ ಅದೇಶದಲ್ಲಿ ತಿಳಿಸಿದೆ.

ಬದಲಾಗಿರುವ ಪರಿಸ್ಥಿತಿಯಲ್ಲಿ ಜಾಮೀನು ಅರ್ಜಿಯನ್ನು ಪುರಸ್ಕರಿಸಿರುವುದಾಗಿ ನ್ಯಾಯಾಲಯವು ತಿಳಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ ಪೈ ಅವರು 50 ಸಾವಿರ ರೂಪಾಯಿ ವೈಯಕ್ತಿಕ ಭದ್ರತೆ ನೀಡುವಂತೆ ಷರತ್ತು ವಿಧಿಸಿ ಆರೋಪಿಗಳಿಗೆ ಜಾಮೀನು ನೀಡಿದ್ದಾರೆ. ಆರೋಪಿಗಳು ಸೂಕ್ತ ದಾಖಲೆಗಳನ್ನು ನೀಡಬೇಕು, ಪ್ರಕರಣ ಮುಕ್ತಾಯವಾಗುವವರೆಗೆ ವಸತಿ ಸ್ಥಳಾಂತರ ಮಾಡಬಾರದು, ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಪ್ಪದೆ ನ್ಯಾಯಾಲಯಕ್ಕೆ ಹಾಜರಾಗಬೇಕು ಹಾಗೂ ಸಾಕ್ಷ್ಯ ಬೆದರಿಕೆಯ ಕೃತ್ಯಕ್ಕೆ ಕೈಹಾಕಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿದೆ.

Also Read
ಟೂಲ್‌ಕಿಟ್‌ ಪ್ರಕರಣ: ಮೂರು ವಾರಗಳಿಗೆ ನಿಕಿತಾ ಜೇಕಬ್‌ಗೆ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌

2020ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯ ಉಜಿರೆ ಗ್ರಾಮದ ರಥಬೀದಿಯಲ್ಲಿ ಅಭಿನವ್ ಎಂಬ ಬಾಲಕನನ್ನು ಅಪಹರಿಸಲಾಗಿತ್ತು. ಕೋಲಾರದ ನಾಲ್ವರು ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ ವ್ಯವಹಾರದಲ್ಲಿ ಉಂಟಾದ ವಿರಸದಿಂದಾಗಿ ಈ ಅಪಹರಣ ಮಾಡಿದ್ದರು ಎನ್ನಲಾಗಿತ್ತು. ಘಟನೆಯ ಬೆನ್ನಿಗೇ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿದ್ದ ಬೆಳ್ತಂಗಡಿಯ ಪೊಲೀಸರು ಅಪಹೃತ ಬಾಲಕನನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದರು. ಅಪಹರಣದ ಹಿಂದೆ ಬಿಟ್‌ ಕಾಯಿನ್‌ ಕುರಿತಾದ ವ್ಯಾವಹಾರಿಕ ವಿರಸವಿದೆ ಎನ್ನುವುದು ವ್ಯಾಪಕವಾಗಿ ವರದಿಯಾದ ಹಿನ್ನೆಲೆಯಲ್ಲಿ ಪ್ರಕರಣ ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ಪ್ರಸ್ತುತ ಆರೋಪಿಗಳಾದ ಮಂಜುನಾಥ್‌ ಕೆ ಎನ್‌ ಮತ್ತು ಮಹೇಶ್‌ ಕುಮಾರ್‌ ಕೆ ಎಸ್‌ ಎಂಬ ಇಬ್ಬರಿಗೆ ಜಾಮೀನು ದೊರೆತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳ ಪರ ವಕೀಲ ಸುಕೇಶ್ ಕುಮಾರ್ ಶೆಟ್ಟಿ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com