ಮಹಿಳೆ ಅವಿವಾಹಿತಳೆಂಬ ಕಾರಣಕ್ಕೆ ವೈದ್ಯಕೀಯ ಗರ್ಭಪಾತ ಕಾಯಿದೆಯ ಉಪಯುಕ್ತ ನಿಬಂಧನೆಗಳನ್ನು ಆಕೆಗೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಆ ಮೂಲಕ ಅದು ಸಮ್ಮತಿಯ ಲೈಂಗಿಕತೆಯಿಂದ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರಿಗೆ 24 ವಾರ ಮೀರಿದ ಗರ್ಭ ಅಂತ್ಯಗೊಳಿಸಲು ಅವಕಾಶ ನೀಡಿದೆ.
ವೈದ್ಯಕೀಯ ಗರ್ಭಪಾತ ಕಾಯಿದೆ (ಎಂಟಿಪಿ ಕಾಯಿದೆ) ಮತ್ತು ಸಮ್ಮತಿ ಲೈಂಗಿಕ ಸಂಬಂಧಗಳ ಗರ್ಭಧಾರಣೆ ಅಂತ್ಯಗೊಳಿಸುವ ಎಂಟಿಪಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಸಮ್ಮತಿಯ ಲೈಂಗಿಕತೆಯಿಂದ ಗರ್ಭಿಣಿಯರಾದ ಅವಿವಾಹಿತೆಯರು 20 ವಾರ ಮೀರಿದ ಗರ್ಭ ಅಂತ್ಯಗೊಳಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಜುಲೈ 15ರಂದು ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ರದ್ದುಗೊಳಿಸಿತು.
ವೈದ್ಯಕೀಯ ಗರ್ಭಪಾತ ನಿಯಮಾವಳಿ 2003ರ ಯಾವುದೇ ಷರತ್ತುಗಳನ್ನು ಅರ್ಜಿ ಸ್ಪಷ್ಟವಾಗಿ ಒಳಗೊಂಡಿಲ್ಲ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಗಳಿಗೆ ಸೆಕ್ಷನ್ 3(2)(ಬಿ) ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿತ್ತು.
ಆದರೆ ಕಾನೂನಿಗೆ ವಿಶಾಲ ವ್ಯಾಖ್ಯಾನ ನೀಡಬೇಕಿದ್ದು ಸಂಸತ್ತಿನ ಉದ್ದೇಶವನ್ನು ಪರಿಶೀಲಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ನಿಟ್ಟಿನಲ್ಲಿ, 2021ರ ತಿದ್ದುಪಡಿ ಕಾಯಿದೆಯು ಎಂಟಿಪಿ ಕಾಯಿದೆಯ ಸೆಕ್ಷನ್ 3(2)(ಎ)ಗೆ ವಿವರಣೆಯನ್ನು ಸೇರಿಸಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ಅದು 'ಗಂಡ' ಬದಲಿಗೆ 'ಮಹಿಳೆ ಅಥವಾ ಅವಳ ಸಂಗಾತಿ' ಪದಗಳನ್ನು ಬಳಸುತ್ತದೆ. ವೈವಾಹಿಕ ಸ್ಥಿತಿಯ ಬದಲಾವಣೆಯ ಸಂದರ್ಭದಲ್ಲಿ ಗರ್ಭಪಾತಕ್ಕೆ ಅನುಮತಿಸುವ ನಿಯಮ 3B ಯ ಷರತ್ತು (ಸಿ) ಜೊತೆಗೆ ನ್ಯಾಯಾಲಯವು ಇದನ್ನು ಓದಿದ್ದು ಷರತ್ತು ಬ್ರಾಕೆಟ್‌ಗಳಲ್ಲಿ 'ವಿಧವೆ' ಮತ್ತು 'ವಿಚ್ಛೇದನ' ಪದಗಳನ್ನು ಹೊಂದಿದೆ ಎಂದಿದೆ.
"ಸಂಸದೀಯ ಉದ್ದೇಶ ಕಾಯಿದೆಯ ಪ್ರಯೋಜನಕಾರಿ ನಿಬಂಧನೆಯನ್ನು ಕೇವಲ ವೈವಾಹಿಕ ಸಂಬಂಧಕ್ಕೆ ಸೀಮಿತಗೊಳಿಸುವುದಾಗಿಲ್ಲ. ವಾಸ್ತವವಾಗಿ ಯಾವುದೇ ಮಹಿಳೆ ಅಥವಾ ಅವಳ ಸಂಗಾತಿ ಎನ್ನುವುದು ಸಂವಿಧಾನದ 21ನೇ ವಿಧಿಗೆ ಪೂರಕವಾಗಿ ಮಹಿಳೆಯ ವಿಶಾಲ ದೈಹಿಕ ಸ್ವಾಯತ್ತತೆಯನ್ನು ಸಂಸತ್ತು ವಿಶಾಲಾರ್ಥದಲ್ಲಿ ಗಮನದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತದೆ” ಎಂದು ಹೇಳಿದೆ.
ಆದ್ದರಿಂದ ಅರ್ಜಿದಾರೆಯ ಅನಪೇಕ್ಷಿತ ಗರ್ಭಧಾರಣೆಗೆ ಅವಕಾಶ ನೀಡುವುದು ಸಂಸದೀಯ ಉದ್ದೇಶಕ್ಕೆ ವಿರುದ್ಧವಾಗಿದ್ದು ಆಕೆ ಅವಿವಾಹಿತಳೆಂಬ ಏಕೈಕ ಆಧಾರದ ಮೇಲೆ ಆಕೆಗೆ ಗರ್ಭಪಾತ ನಿರಾಕರಿಸಲಾಗದು. ಇದಕ್ಕೂ ಸಂಸತ್ತು ಸಾಧಿಸಲು ಬಯಸಿದ ಗುರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅದು ಹೇಳಿದೆ.
ಹೀಗಾಗಿ, ನಾಳೆಯೊಳಗೆ ಎಂಟಿಪಿ ಕಾಯಿದೆಯ ಸೆಕ್ಷನ್ 3 ರ ಪ್ರಕಾರ ವೈದ್ಯಕೀಯ ಸಮಿತಿಯನ್ನು ರಚಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್- ಏಮ್ಸ್) ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಸಮಿತಿಯು ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲದೆ ಮಹಿಳೆಗೆ ವೈದ್ಯಕೀಯ ಗರ್ಭಪಾತ ಮಾಡಬಹುದು ಎಂದು ತೀರ್ಮಾನಿಸಿದರೆ ಆಗ ಏಮ್ಸ್ ಗರ್ಭಪಾತವನ್ನು ನೆರವೇರಿಸಲಿದೆ.
ದೆಹಲಿಯಲ್ಲಿರುವ ಮಣಿಪುರ ಮೂಲದ ನಿವಾಸಿ ಅರ್ಜಿದಾರೆ ತಾನು ಗರ್ಭವತಿ ಎಂಬುದನ್ನು ತಿಳಿದ ನಂತರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಮ್ಮತಿಯ ಲೈಂಗಿಕ ಸಂಬಂಧದಿಂದ ಗರ್ಭಿಣಿಯಾಗುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತ ನಿಯಮಗಳ ಪ್ರಕಾರ 20 ವಾರ ಮೀರಿದ ಗರ್ಭವನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಸಂದರ್ಭದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಎಂಟಿಪಿ ಕಾಯಿದೆ ಮತ್ತು ನಿಯಮಗಳನ್ನು ಅರ್ಥೈಸುವಲ್ಲಿ ಹೈಕೋರ್ಟ್‌ನದ್ದು ಅನಗತ್ಯ ನಿರ್ಬಂಧಿತ ದೃಷ್ಟಿಕೋನ ಎಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ಪುರಸ್ಕರಿಸುವ ವೇಳೆ ತಿಳಿಸಿದೆ.