
ಬೆಂಕಿ ಹೊತ್ತಿಕೊಂಡು ಹಾನಿಗೊಂಡಿರುವ ಹ್ಯೂಂಡೈ ಕಾರಿಗೆ ₹3 ಲಕ್ಷ ವಿಮೆ ಪಡೆದು, ಅದನ್ನು ₹88 ಸಾವಿರಕ್ಕೆ ಮಾರಾಟ ಮಾಡಿದ ನಂತರವೂ ವಾರೆಂಟಿ ವಿಸ್ತರಣೆ ಯೋಜನೆಯಡಿ ಕಾರು ರಿಪೇರಿ ಅಥವಾ ಬದಲಿಸಿಕೊಡಲು ಆದೇಶಿಸುವಂತೆ ಕೋರಿದ್ದ ಗ್ರಾಹಕರೊಬ್ಬರಿಗೆ ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಈಚೆಗೆ ₹40 ಸಾವಿರ ದಂಡ ವಿಧಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಮೋಹನ್ ಹೆಗ್ಡೆ ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಹಂಗಾಮಿ ಅಧ್ಯಕ್ಷೆ ಕೆ ಅನಿತಾ ಶಿವಕುಮಾರ್ ಮತ್ತು ಸದಸ್ಯೆ ಸುಮಾ ಅನಿಲ್‌ಕುಮಾರ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
“ಮೋಹನ್ ಹೆಗ್ಡೆ ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಸೂಕ್ತವಾಗಿಲ್ಲ. ಹೀಗಾಗಿ, ₹40 ಸಾವಿರ ದಂಡ ವಿಧಿಸಲಾಗಿದ್ದು, ಅದನ್ನು ಒಂದು ತಿಂಗಳಲ್ಲಿ ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.10ರಂತೆ ಬಡ್ಡಿ ಪಾವತಿಸಬೇಕು” ಎಂದು ಆಯೋಗ ಆದೇಶಿಸಿದೆ.
“ಆಕ್ಷೇಪಾರ್ಹವಾದ ಕಾರಿಗೆ ₹3 ಲಕ್ಷ ವಿಮೆ ಹಣ ಪಡೆಯಲಾಗಿದೆ. ಇದರ ಜೊತೆಗೆ ದೂರುದಾರ ಮೋಹನ್ ಅವರು 06/01/2025ರಂದು ಟ್ರೈಜೆಂಟ್ ಕಾರ್ಪೊರೇಟ್‌ನವರಿಗೆ ₹88 ಸಾವಿರಕ್ಕೆ ಕಾರು ಮಾರಾಟ ಮಾಡಿರುವ ಮಾರಾಟ ಪತ್ರ ಸಲ್ಲಿಸಿದ್ದಾರೆ. ಒಮ್ಮೆ ಚರ ಅಥವಾ ಸ್ಥಿರಾಸ್ತಿ ಮಾರಾಟ ಮಾಡಿದ ಮೇಲೆ ಖರೀದಿಸಿದವರಿಗೆ ಅದರ ಮೇಲೆ ಅಧಿಕಾರ ಇರುತ್ತದೆ. ಇಲ್ಲಿ ಮೋಹನ್ ಅವರಿಗೆ ಯಾವುದೇ ಅಧಿಕಾರ ಇಲ್ಲ” ಎಂದು ಆಯೋಗ ಹೇಳಿದೆ.
ಬೆಂಕಿಗಾಹುತಿಯಾಗಿರುವ ಕಾರಿಗೆ ಪರಿಹಾರ ಕೊಡಿಸುವಂತೆ ಮೋಹನ್ ಅವರು ವಕೀಲರನ್ನು ಸಂಪರ್ಕಿಸಿದಾಗ ಅವರು ಮಾರಾಟ ಮಾಡಿದ ಮೇಲೆ ಅದರ ಮೇಲೆ ಹಕ್ಕು ಉಳಿಯುವುದಿಲ್ಲ ಎಂದು ಮೋಹನ್‌ಗೆ ತಿಳಿಸಬೇಕಿತ್ತು. ಆದರೆ, ವಿಮೆ ಪಡೆದಿರುವುದು ಮತ್ತು ಕಾರು ಮಾರಾಟ ಮಾಡಿರುವ ಮಾಹಿತಿಯನ್ನು ಬಚ್ಚಿಟ್ಟಿರುವ ಮೋಹನ್ ಅವರು ನ್ಯಾಯಾಲಯದ ಮುಂದೆ ಶುದ್ಧ ಹಸ್ತದಿಂದ ಬಂದಿಲ್ಲ. ದುರುದ್ದೇಶದಿಂದ ನ್ಯಾಯಾಲಯದ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡಲು ನ್ಯಾಯಾಲಯದ ಮುಂದೆ ಬಂದಿರುವುದರಿಂದ ಅರ್ಜಿ ತಿರಸ್ಕರಿಸಲು ಸೂಕ್ತ ಪ್ರಕರಣ” ಎಂದಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಮೋಹನ್ ಹೆಗ್ಡೆ ಅವರು 20/05/2019ರಂದು ₹5,22,595ಕ್ಕೆ ಹ್ಯೂಂಡೈ ಕಾರು ಖರೀದಿಸಿದ್ದರು. ನೋಂದಾಯಿತ ಸರ್ವೀಸ್ ಕೇಂದ್ರದಲ್ಲಿ ನಿಯಮಿತವಾಗಿ ಸರ್ವೀಸ್ ಸಹ ಮಾಡಿಸುತ್ತಿದ್ದರು. 11/04/2024ರಂದು ಮೋಹನ್ ಅವರು ಎಚ್ಚರಿಕೆಯಿಂದ ಕಾರಿಗೆ ₹14,866 ಪಾವತಿಸಿ ವಾರಂಟಿ ವಿಸ್ತರಣೆ ಮಾಡಿಸಿದ್ದರು. 25/10/2024ರಂದು ಕಾರು ಚಲಾಯಿಸುವಾಗ ಬ್ರೇಕ್ ನಿಯಂತ್ರಣ ತಪ್ಪಿರುವುದು ಮೋಹನ್ ಗಮನಕ್ಕೆ ಬಂದಿದ್ದು, ನಿಲ್ಲಿಸಿದ್ದರು. ಬಾನೆಟ್‌ನಿಂದ ಬೆಂಕಿ ಬರುತ್ತಿರುವುದನ್ನು ಅವರು ಗಮನಿಸಿದ್ದರು. ಇದನ್ನು ನಂದಿಸುವ ನಿಟ್ಟಿನಲ್ಲಿ ಎಂಜಿನ್ ಆಫ್ ಮಾಡಿ, ಹ್ಯಾಂಡ್ ಬ್ರೇಕ್ ಹಾಕಿದ್ದರು. ಹೀಗೆ ಮಾಡುತ್ತಿದ್ದಂತೆ ಬೆಂಕಿ ಶರವೇಗದಲ್ಲಿ ಹಬ್ಬಿತ್ತು. ಇದಾದ ಬೆನ್ನಿಗೇ ಮೋಹನ್ ಅವರು ಅದನ್ನು ಹ್ಯೂಂಡೈ ಸರ್ವೀಸ್ ಸ್ಟೇಷನ್‌ಗೆ ತಂದಿದ್ದರು. ಹಾನಿ ಪರಿಶೀಲಿಸಿದ್ದ ಕುನ್ ಹ್ಯೂಂಡೈನವರು ರಿಪೇರಿಗೆ ₹6.7 ಲಕ್ಷವಾಗಲಿದೆ ಎಂದು ಅಂದಾಜಿಸಿದ್ದರು.
ಈ ನಡುವೆ ಮೆಸರ್ಸ್ ಜೂರಿಚ್ ಕೋಟಕ್ ವಿಮಾ ಕಂಪೆನಿಯು ಮೆಕ್ಯಾನಿಕಲ್ ವಿಫಲತೆಯಿಂದ ಘಟನೆ ಸಂಭವಿಸಿದ್ದು, ವಾಹನದ ಮೂಲದಲ್ಲಿಯೇ ಸಮಸ್ಯೆ ಇರುವುದರಿಂದ ಅದು ವಾರಂಟಿ ಕವರೇಜ್ ವ್ಯಾಪ್ತಿಗೆ ಬರಲಿದೆ ಎಂದು ಹೇಳಿತ್ತು. ಈ ಹಿಂದೆ ಗೇರ್ ಬಾಕ್ಸ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದು ಬ್ಲೂ ಹ್ಯೂಂಡೈ ಸರಿಪಡಿಸಿಕೊಟ್ಟಿತ್ತು. ಇದಾದ ನಂತರ ಮೋಹನ್ ಅವರು ಹಲವು ಬಾರಿ ಹಾನಿಗೊಂಡಿರುವ ಕಾರ್ ಅನ್ನು ಬದಲಿಸಿಕೊಡಬೇಕು ಇಲ್ಲವೇ ವಾರೆಂಟಿ ವಿಸ್ತರಿಸಿರುವ ಯೋಜನೆಯಡಿ ಉಚಿತವಾಗಿ ಕಾರನ್ನು ರಿಪೇರಿ ಮಾಡಿಕೊಡಬೇಕು. ಅಲ್ಲದೇ, ಮಾನಸಿಕ ನೋವಿಗಾಗಿ ₹5 ಲಕ್ಷ ಪರಿಹಾರ ಪಾವತಿಸಬೇಕು ಎಂದು ಹ್ಯೂಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್, ಕುನ್ ಹ್ಯೂಂಡೈಗೆ ಕೋರಿದ್ದರು. ಹ್ಯೂಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್, ಕುನ್ ಹ್ಯೂಂಡೈ ಅನ್ನು ಸಂಪರ್ಕಿಸುವ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮೋಹನ್ ಅವರು ಆಯೋಗವನ್ನು ಸಂಪರ್ಕಿಸಿದ್ದರು.