ಬಿಎಂಟಿಸಿ 'ಚಿಲ್ಲರೆ' ಪ್ರಕರಣ: ₹2,000 ಪರಿಹಾರ ಪಾವತಿಸಲು ಗ್ರಾಹಕರ ಆಯೋಗದ ನಿರ್ದೇಶನ

ದೂರುದಾರರು 2019ರಲ್ಲಿ ಪ್ರಯಾಣಿಸುವ ವೇಳೆ ₹29 ಬಸ್‌ ದರಕ್ಕೆ ಬದಲಾಗಿ ₹30 ನೀಡಿದ್ದು, ನಿರ್ವಾಹಕ ₹1 ಚಿಲ್ಲರೆ ವಾಪಸ್‌ ಮಾಡಿರಲಿಲ್ಲ.
 BMTC bus
BMTC bus

ವ್ಯಕ್ತಿಯೊಬ್ಬರಿಗೆ ₹1 ಚಿಲ್ಲರೆ ಪಾವತಿಸಲು ನಿರಾಕರಿಸಿದ್ದಕ್ಕಾಗಿ ಅವರಿಗೆ ₹2,000 ಪರಿಹಾರ ಪಾವತಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ನಿರ್ದೇಶಿಸಿದೆ.

ರಮೇಶ್‌ ನಾಯಕ್‌ ಎಂಬವರು 2019ರಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದ ವೇಳೆ ₹29 ಟಿಕೆಟ್‌ ದರಕ್ಕೆ ₹30 ಪಾವತಿಸಿದ್ದರು. ಆದರೆ, ನಿರ್ವಾಹಕರು ₹1 ಚಿಲ್ಲರೆ ವಾಪಸ್‌ ಮಾಡಿರಲಿಲ್ಲ. ಇದಕ್ಕಾಗಿ ನಾಯಕ್‌ ಅವರು ₹15,000 ಪರಿಹಾರ ಕೋರಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಾಸ್ತವಿಕ ವಿಚಾರಗಳನ್ನು ಪರಿಗಣಿಸಿದ ಆಯೋಗವು ನಾಯಕ್‌ ಅವರಿಗೆ ಭಾಗಶಃ ₹2,000 ಪರಿಹಾರ ಪಾವತಿಸಲು ಆದೇಶಿಸಿದ್ದು, ಜೊತೆಗೆ ₹1,000 ನ್ಯಾಯಾಲಯದ ವೆಚ್ಚ ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಿದೆ. 45 ದಿನಗಳ ಒಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ವಾರ್ಷಿಕ ₹6,000 ಬಡ್ಡಿ ಅನ್ವಯವಾಗಲಿದೆ ಎಂದು ಹೇಳಿದೆ.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಬಿಎಂಟಿಸಿಯು ಇದೊಂದು ಕ್ಷುಲ್ಲಕ ಪ್ರಕರಣ ಎಂದಿತ್ತು. ಸೇವಾ ಕೊರತೆಯಾಗಿದೆ ಎಂಬುದನ್ನು ನಿರಾಕರಿಸಿದ್ದ ಸಾರಿಗೆ ಇಲಾಖೆಯು ದೂರನ್ನು ವಜಾ ಮಾಡುವಂತೆ ಕೋರಿತ್ತು.

“ವ್ಯಾಜ್ಯವು ಕ್ಷುಲ್ಲಕ ಎಂದೆನಿಸಿದರೂ ದೂರುದಾರರು ವಿಚಾರವನ್ನು ಹಕ್ಕು ಎಂದು ಪರಿಗಣಿಸಿ, ಅದನ್ನು ಆಯೋಗದ ಮುಂದೆ ಇಟ್ಟಿದ್ದಾರೆ. ಇದನ್ನು ಗ್ರಾಹಕರ ಹಕ್ಕಿನ ವಿಚಾರವಾಗಿದ್ದು ಅದನ್ನು ಗುರುತಿಸಬೇಕಿದೆ ಮತ್ತು ಅರ್ಜಿದಾರರ ಪ್ರಯತ್ನವನ್ನು ಮೆಚ್ಚಬೇಕಿದೆ. ಹೀಗಾಗಿ, ದೂರುದಾರರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ” ಎಂದು ಆಯೋಗವು ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com