

“ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಅವರ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಿ ನವೆಂಬರ್ 12ಕ್ಕೆ ಕೋರ್ಟ್‌ಗೆ ವರದಿ ಸಲ್ಲಿಸಬೇಕು” ಎಂದು ಸತ್ರ ನ್ಯಾಯಾಲಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗೆ ನಿರ್ದೇಶಿಸಿದೆ.
ಬೆನ್ನುಮೂಳೆ ಸಂಬಂಧಿತ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲು ನಿರ್ದೇಶಿಸಬೇಕು ಎಂದು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ಮೇಲಿನ ಆದೇಶವನ್ನು, ಸಿಟಿ ಸಿವಿಲ್ ಕೋರ್ಟ್‌ನ 58ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುಜಾತ ಎಂ.ಸಾಂಬ್ರಾಣಿ ಶನಿವಾರ ಪ್ರಕಟಿಸಿದ್ದಾರೆ.
ದರ್ಶನ್ ಅವರ ವೈದ್ಯಕೀಯ ದಾಖಲೆಗಳು, ಚಿಕಿತ್ಸೆಯ ಇತಿಹಾಸ ಮತ್ತು ಅವರು ಸದ್ಯ ಆರೋಪಿಸಿರುವ ಅಂಶಗಳ ಆಧಾರದಲ್ಲಿ ಅವರಿಗೆ ಅಗತ್ಯ ಔಷಧಿ, ಭೌತಚಿಕಿತ್ಸೆ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆಯೇ ಹೇಗೆ ಎಂಬುದನ್ನು ಮುಖ್ಯ ವೈದ್ಯಾಧಿಕಾರಿ ಖಚಿತಪಡಿಸಿಕೊಳ್ಳಬೇಕು. ಕೇಂದ್ರ ಕಾರಾಗೃಹದೊಳಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ದರ್ಶನ್‌ಗೆ ಅಗತ್ಯವಾದ ಚಿಕಿತ್ಸೆ ಒದಗಿಸಲು ಸಾಲದು ಎಂದು ಕಂಡುಬಂದರೆ, ಜೈಲು ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಸಾರವಾಗಿ ಅವರನ್ನು ಸೂಕ್ತ ಸರ್ಕಾರಿ ಆಸ್ಪತ್ರೆ ಅಥವಾ ಇತರ ಸಮರ್ಥ ವಿಶೇಷ ವೈದ್ಯಕೀಯ ಸಂಸ್ಥೆಗೆ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಉಲ್ಲೇಖಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ವೈದ್ಯಾಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.
ದರ್ಶನ್‌ಗೆ ನಿರಂತರ ಭೌತಚಿಕಿತ್ಸೆ, ಹೆಚ್ಚಿನ ರೋಗ ನಿರ್ಣಯ ತನಿಖೆ ಅಥವಾ ಯಾವುದೇ ವಿಶೇಷ ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿದೆಯೇ ಎಂಬುದನ್ನು ನಿರ್ದಿಷ್ಟವಾಗಿ ನಿರ್ಣಯಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ವರದಿಯನ್ನು ಸ್ವೀಕರಿಸಿದ ನಂತರ, ಅಗತ್ಯವಿದ್ದರೆ, ಈ ನ್ಯಾಯಾಲಯ ಬಾಹ್ಯ ವೈದ್ಯಕೀಯ ಮಂಡಳಿಯಿಂದ ಸ್ವತಂತ್ರ ಅಭಿಪ್ರಾಯ ಪಡೆಯುವ ಅಗತ್ಯವನ್ನು ಪರಿಗಣಿಸುತ್ತದೆ ಎಂದೂ ಪೀಠ ಹೇಳಿದೆ.