ಮಾನಹಾನಿ ದಾವೆ: ದಲಿವರ್‌ಡಾಕ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡುವಂತೆ ಎಕ್ಸ್‌ ಕಾರ್ಪ್‌ಗೆ ನ್ಯಾಯಾಲಯದ ಆದೇಶ

ಕಂಪೆನಿ ಮಂಡಿಸಿರುವ ವಾಸ್ತವಿಕ ಅಂಶಗಳು ಮತ್ತು ಹಲವು ನ್ಯಾಯಾಲಯಗಳು ನೀಡಿರುವ ತೀರ್ಪಿನ ಪ್ರಕಾರ ಫಿಲಿಪ್ಸ್‌ ಅವರಿಗೆ ನೋಟಿಸ್‌ ಜಾರಿ ಮಾಡುವುದಕ್ಕೂ ಮುನ್ನ ಮಧ್ಯಂತರ ಆದೇಶದ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
Himalaya Wellness, Dr Cyriac Abby Philips
Himalaya Wellness, Dr Cyriac Abby Philips

ಫಾರ್ಮಾ ಕಂಪೆನಿ ಹಿಮಾಲಯ ವೆಲ್‌ನೆಸ್‌ ಹೂಡಿರುವ ಮಾನಹಾನಿ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ದಲಿವರ್‌ಡಾಕ್‌ (TheLiverDoc) ಎಂದೇ ಪ್ರಸಿದ್ಧಿಯಾಗಿರುವ ಡಾ. ಸಿರಿಯಾಕ್‌ ಅಬ್ಬಿ ಫಿಲಿಪ್ಸ್‌ ಅವರ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಎಕ್ಸ್‌ ಕಾರ್ಪ್‌ಗೆ (ಟ್ವಿಟರ್‌) ಈಚೆಗೆ ಆದೇಶಿಸಿದೆ [ಹಿಮಾಲಯ ವೆಲ್‌ನೆಸ್‌ ಕಂಪೆನಿ ವರ್ಸಸ್‌ ಡಾ. ಸಿರಿಯಾಕ್‌ ಅಬ್ಬಿ ಫಿಲಿಪ್ಸ್‌ ಮತ್ತು ಇತರರು].

ಡಾ. ಫಿಲಿಪ್ಸ್‌ ಅವರು ಯಕೃತ್‌ ವೈದ್ಯ (ಹೆಪಟೋಲೋಜಿಸ್ಟ್‌) ಮತ್ತು ಕ್ಲಿನಿಷಿಯನ್‌ ವಿಜ್ಞಾನಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ್ಯಾಯ ಔಷಧಗಳ ಕಟು ಟೀಕಾಕಾರರಾಗಿದ್ದಾರೆ. ಕಂಪೆನಿ ಮಂಡಿಸಿರುವ ವಾಸ್ತವಿಕ ಅಂಶಗಳು ಮತ್ತು ಹಲವು ನ್ಯಾಯಾಲಯಗಳು ನೀಡಿರುವ ತೀರ್ಪಿನ ಪ್ರಕಾರ ಫಿಲಿಪ್ಸ್‌ ಅವರಿಗೆ ನೋಟಿಸ್‌ ಜಾರಿ ಮಾಡುವುದಕ್ಕೂ ಮುನ್ನ ಅವರ ವಿರುದ್ಧ ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಅವರು ಸೆಪ್ಟೆಂಬರ್‌ 23ರಂದು ಆದೇಶಿಸಿದ್ದಾರೆ.

ಕಂಪೆನಿಯ ವಿರುದ್ದ ಮಾನಹಾನಿ ಹೇಳಿಕೆ ನೀಡದಂತೆ ಫಿಲಿಪ್ಸ್‌ ಅವರನ್ನು ನಿರ್ಬಂಧಿಸಬೇಕು ಮತ್ತು ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಎಕ್ಸ್‌ ಕಾರ್ಪ್‌ಗೆ ಆದೇಶಿಸಬೇಕು ಎಂದು ಕಂಪೆನಿ ಕೋರಿತ್ತು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

ಹಿಮಾಲಯ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಫಿಲಿಪ್ಸ್‌ ಅವರ ಸಾಮಾಜಿಕ ಜಾಲತಾಣದಲ್ಲಿ ಕಂಪೆನಿಯ ವಿರುದ್ಧ ಆಕ್ಷೇಪಾರ್ಹವಾದ ಹೇಳಿಕೆ ಮತ್ತು ದಾಖಲೆ ಹಂಚಿಕೊಂಡಿರುವುದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಹಿಮಾಲಯ ವಿರುದ್ಧ ಆಕ್ಷೇಪಾರ್ಹವಾದ ಮಾಹಿತಿ ಹಂಚಿಕೊಳ್ಳುವ ಮೂಲಕ ಫಿಲಿಪ್ಸ್‌ ಅವರು ಸಿಪ್ಲಾ ಮತ್ತು ಅಲ್ಚೆಮ್‌ ಉತ್ಪನ್ನಗಳಿಗೆ ಬೆಂಬಲ ನೀಡುತ್ತಿದ್ದಾರೆ” ಎಂದು ವಾದಿಸಿದ್ದರು.

ಫಿಲಿಪ್ಸ್‌ ಅವರ ಎಕ್ಸ್‌ ಕಾರ್ಪ್‌ ಖಾತೆಯನ್ನು ಮುಂದಿನ ವಿಚಾರಣೆಯವರೆಗೆ ಅಂದರೆ 2024ರ ಜನವರಿ 1ರವರೆಗೆ ನಿರ್ಬಂಧಿಸಿ ನ್ಯಾಯಾಲಯ ಆದೇಶಿಸಿದೆ.

Kannada Bar & Bench
kannada.barandbench.com