ಅಕ್ರಮ ಹಣ ವರ್ಗಾವಣೆ ಪ್ರಕರಣ: ಗೇಮ್ಸ್‌ಕ್ರಾಫ್ಟ್‌ನ ಮೂವರು ನಿರ್ದೇಶಕರ ಇ ಡಿ ಕಸ್ಟಡಿ ಮೇ 19ರವರೆಗೆ ವಿಸ್ತರಣೆ

ವಿಕಾಸ್‌ ತನೇಜಾ, ಪೃಥ್ವಿರಾಜ್ ಸಿಂಗ್‌ ಮತ್ತು ದೀಪಕ್‌ ಸಿಂಗ್‌ ಅವರನ್ನು ಮತ್ತೆ ಏಳು ದಿನ ಇ ಡಿ ಕಸ್ಟಡಿಗೆ ನೀಡಿರುವುದರಿಂದ ನ್ಯಾಯಾಲಯವು ಅವರ ಜಾಮೀನು ಅರ್ಜಿಗಳನ್ನು ಅಮಾನತಿನಲ್ಲಿರಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಗೇಮ್ಸ್‌ಕ್ರಾಫ್ಟ್‌ನ ಮೂವರು ನಿರ್ದೇಶಕರ ಇ ಡಿ ಕಸ್ಟಡಿ ಮೇ 19ರವರೆಗೆ ವಿಸ್ತರಣೆ
Published on

ಆನ್‌ಲೈನ್ ನೈಜ ಹಣ ಗೇಮಿಂಗ್ ವೇದಿಕೆಗಳನ್ನು ತಿರುಚಿದ ಆರೋಪದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮ್ಸ್‌ಕ್ರಾಫ್ಟ್ ಕಂಪನಿಯ ಮೂವರು ನಿರ್ದೇಶಕರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಮತ್ತೆ ಏಳು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೋಡಿದೆ.

ವಿಕಾಸ್‌ ತನೇಜಾ, ಪೃಥ್ವಿರಾಜ್‌ ಸಿಂಗ್‌ ಮತ್ತು ದೀಪಕ್‌ ಸಿಂಗ್‌ ಅಹ್ಲಾವತ್‌ ಅವರ ಕಸ್ಟಡಿ ಅವಧಿ ವಿಸ್ತರಿಸುವಂತೆ ಕೋರಿ ಇ ಡಿ ಸಲ್ಲಿಸಿದ್ದ ರಿಮ್ಯಾಂಡ್‌ ಅರ್ಜಿಯನ್ನು ಪರಿಗಣಿಸಿ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ಆರೋಪಿಗಳನ್ನು ಮೇ 19ರವರೆಗೆ ಇ ಡಿ ಕಸ್ಟಡಿಗೆ ನೀಡಿದರು.

ಮೂವರು ಆರೋಪಿಗಳನ್ನು ಮೇ 7ರಂದು ಬಂಧಿಸಿದ್ದ ಇ ಡಿ, ಮೊದಲಿಗೆ ವಿಕಾಸ್‌ ತನೇಜಾ ಅವರನ್ನು ಮೇ 8ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಐದು ದಿನ ಕಸ್ಟಡಿಗೆ ಪಡೆದಿತ್ತು. ಮಾರನೇಯ ದಿನ ದೀಪಕ್‌ ಮತ್ತು ಪೃಥ್ವಿರಾಜ್‌ ಅವರನ್ನು ಹಾಜರುಪಡಿಸಿ ಅವರನ್ನೂ ಐದು ದಿನ ಕಸ್ಟಡಿಗೆ ಪಡೆದಿತ್ತು. ಇಂದು ಎಲ್ಲರ ಐದು ದಿನಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನ್ಯಾಯಾಲಯ ಮುಂದೆ ಹಾಜರುಪಡಿಸಿ ಕಸ್ಟಡಿ ವಿಸ್ತರಣೆ ಪಡೆಯುವಲ್ಲಿ ಇ ಡಿ ಯಶಸ್ವಿಯಾಗಿದೆ.

ಆರೋಪಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಿ ವಿ ನಾಗೇಶ್‌, ಸಜನ್‌ ಪೂವಯ್ಯ ಮತ್ತು ಸಂದೇಶ್‌ ಚೌಟ ಅವರು ತೆಲಂಗಾಣದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿರುವ ಇ ಡಿ ಅಧಿಕಾರಿಗಳಿಗೆ ವ್ಯಾಪ್ತಿ ಇಲ್ಲ. ಹೀಗಾಗಿ, ಇದು ಅಕ್ರಮ ಎಂದು ವಾದಿಸಿದರು. ಈ ವಾದವನ್ನು ಅಲ್ಲಗಳೆದ ಇ ಡಿ ವಿಶೇಷ ಸರ್ಕಾರಿ ಅಭಿಯೋಜರಾದ ಮಧು ಎನ್‌. ರಾವ್‌ ಮತ್ತು ಡಿ ಎಂ ಮಹೇಶ್ವರಿ ಅವರು ಗೇಮ್ಸ್‌ಕ್ರಾಫ್ಟ್‌ ಕಂಪನಿಯು ಬೆಂಗಳೂರಿನಲ್ಲಿರುವುದರಿಂದ ತನಿಖೆ ನಡೆಸುವ ವ್ಯಾಪ್ತಿ ಇ ಡಿಗೆ ಇದೆ ಎಂದು ಸಮರ್ಥಿಸಿದರು.

ಈ ಮಧ್ಯೆ, ಆರೋಪಿಗಳ ಪರವಾಗಿ ಜಾಮೀನು ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ತನೇಜಾ, ಪೃಥ್ವಿರಾಜ್‌ ಮತ್ತು ದೀಪಕ್‌ ಅವರನ್ನು ಇ ಡಿ ಕಸ್ಟಡಿಗೆ ನೀಡಿರುವುದರಿಂದ ನ್ಯಾಯಾಲಯವು ಜಾಮೀನು ಅರ್ಜಿಗಳನ್ನು ಅಮಾನತಿನಲ್ಲಿರಿಸಿದೆ.

ಈ ಮಧ್ಯೆ, ತನೇಜಾ, ಪೃಥ್ವಿರಾಜ್‌ ಮತ್ತು ದೀಪಕ್‌ ಅವರು ಬಂಧನ ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿರುವ ಅರ್ಜಿಗಳನ್ನು ಹೈಕೋರ್ಟ್‌ ನಾಳೆ ವಿಚಾರಣೆ ನಡೆಸಲಿದೆ.

ಗೇಮ್ಸ್‌ಕ್ರಾಫ್ಟ್‌ನ ಇತರೆ ಸಂಸ್ಥಾಪಕರು ಮತ್ತು ನಿರ್ದೇಶಕರ ಜೊತೆಗೂಡಿ ದೀಪಕ್‌ ಸಿಂಗ್‌ ಅವರು ಮಾಜಿ ಪ್ರಧಾನ ವಿತ್ತ ಅಧಿಕಾರಿ ರಮೇಶ್‌ ಪ್ರಭು ಜೊತೆ ಸೇರಿ ₹250 ಕೋಟಿ ಹಣವನ್ನು ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ ಹಾಗೂ ಮುಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಇ ಡಿ ಆರೋಪಿಸಿದೆ.

ನೈಜ ಹಣ ಗೇಮಿಂಗ್‌ ವೇದಿಕೆಗಳ ಮೂಲಕ ಗೇಮ್ಸ್‌ಕ್ರಾಫ್ಟ್‌ ಸಂಸ್ಥೆಯು ನೈಜ ಆಟಗಾರರಿಗೆ ವಂಚಿಸಿದೆ. ಸೇವಾ ಷರತ್ತುಗಳನ್ನು ಉಲ್ಲಂಘಿಸಿ ಆರೋಪಿಗಳು ಅಕ್ರಮವಾಗಿ ನೈಜ ಆಟಗಾರರ ಖಾತೆಗಳು ಮತ್ತು ವಾಲೆಟ್‌ಗಳನ್ನು ನಿರ್ಬಂಧಿಸಿ ಅವರಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಐದು ದಿನ ಇ ಡಿ ಕಸ್ಟಡಿಗೆ ಗೇಮ್ಸ್‌ಕ್ರಾಫ್ಟ್‌ನ ಪೃಥ್ವಿರಾಜ್‌ ಸಿಂಗ್‌, ದೀಪಕ್‌ ಸಿಂಗ್‌

ಉದ್ಯಮದ ವೆಚ್ಚ ಎಂದು ನಕಲಿ ಮತ್ತು ಷೆಲ್‌ ಕಂಪನಿಗಳಿಗೆ ಹಣ ಕಳುಹಿಸಿ, ಅದನ್ನು ಆನಂತರ ಅಕ್ರಮ ಚಟುವಟಿಕೆ ಮತ್ತು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇ ಡಿ ಆರೋಪಿಸಿದೆ.

2026ರಲ್ಲಿ ತೆಲಂಗಾಣದಲ್ಲಿ ಮೂರು ಎಫ್‌ಐಆರ್‌ ದಾಖಲಾಗಿದ್ದು, ಕಂಪನಿಯು ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ನಿರ್ವಹಿಸುತ್ತಿದೆ. ಆಟವನ್ನು ತಿರುಚಿ, ಬಳಕೆದಾರರಿಗೆ ವಂಚಿಸಲಾಗಿದೆ. ಆನಂತರ ನಕಲಿ ವೆಚ್ಚ ತೋರಿಸಿ, ಅದನ್ನು ನಗದಿನ ರೂಪದಲ್ಲಿ ವಾಪಸ್‌ ಪಡೆಯಲಾಗಿದೆ ಎಂದು ಇ ಡಿ ಆರೋಪಿಸಿದೆ.

Kannada Bar & Bench
kannada.barandbench.com