ಮಾಜಿ ಸಿಎಂ ಸಿದ್ದರಾಮಯ್ಯ ಹನಿಟ್ರ್ಯಾಪ್‌ ವಿವಾದ: ಎರಡು ವಿಡಿಯೊ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ಬಂಧ

ವಿಡಿಯೊಗಳ ತುಣುಕುಗಳು, ಆಯ್ದ ಭಾಗಗಳು, ಸ್ಕ್ರೀನ್‌ಶಾಟ್‌ಗಳು, ಲಿಪ್ಯಂತರಗಳು ಹಾಗೂ ಸಂಪಾದಿತ ಆವೃತ್ತಿಗಳನ್ನು ಪ್ರಕಟಿಸದಂತೆಯೂ ಪ್ರತಿವಾದಿ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
CM Siddaramaiah
CM Siddaramaiah
Published on: 

ಹನಿಟ್ರ್ಯಾಪ್ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಳುಕು ಹಾಕಿ ಪ್ರಸಾರ ಮಾಡಲಾಗಿರುವ ಎರಡು ಆಕ್ಷೇಪಾರ್ಹವಾದ ವಿಡಿಯೊಗಳನ್ನು ಪ್ರಕಟಿಸದಂತೆ 42 ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ವೇದಿಕೆಗಳು ಹಾಗೂ ಇತರ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿ ಬೆಂಗಳೂರಿನ ನ್ಯಾಯಾಲಯವು ಮಂಗಳವಾರ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಬಿ ಪುಷ್ಪಾಂಜಲಿ ಅವರು ಸಿದ್ದರಾಮಯ್ಯ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಈ ಆದೇಶ ಹೊರಡಿಸಿದ್ದಾರೆ.

Judge B Pushpanjali
Judge B Pushpanjali

ಸೆಪ್ಟೆಂಬರ್ 27 ಮತ್ತು ಅಕ್ಟೋಬರ್ 2ರಂದು ಪ್ರಕಟಿಸಲಾದ ಎರಡು ವಿಡಿಯೊಗಳನ್ನು ಪ್ರಸಾರ ಮಾಡುವುದು, ಮರುಪ್ರಸಾರ ಮಾಡುವುದು ಅಥವಾ ಇತರ ಯಾವುದೇ ರೀತಿಯಲ್ಲಿ ಪ್ರಸಾರ ಮಾಡುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ. ಅಲ್ಲದೆ, ಆ ವಿಡಿಯೊಗಳ ತುಣುಕುಗಳು, ಆಯ್ದ ಭಾಗಗಳು, ಸ್ಕ್ರೀನ್‌ಶಾಟ್‌ಗಳು, ಲಿಪ್ಯಂತರಗಳು ಹಾಗೂ ಸಂಪಾದಿತ ಆವೃತ್ತಿಗಳನ್ನು ಪ್ರಕಟಿಸದಂತೆಯೂ ಪ್ರತಿವಾದಿ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಸಂಬಂಧಿತ ಡಿಜಿಟಲ್ ವೇದಿಕೆಗಳಲ್ಲಿ ಈ ವಿಷಯವನ್ನು ತೆಗೆದುಹಾಕುವುದು ಮತ್ತು ಅದಕ್ಕೆ ಪ್ರವೇಶವನ್ನು ನಿರ್ಬಂಧಿಸುವಂತೆ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಜೊತೆಗೆ, ವಿವಾದಿತ ವಿಡಿಯೊಗಳು ಮತ್ತು ಸಂಬಂಧಿತ ವಿಷಯವನ್ನು ಭವಿಷ್ಯದಲ್ಲಿ ಪ್ರಕಟಿಸುವುದಕ್ಕೆ ಶಾಶ್ವತ ತಡೆ ನೀಡುವಂತೆಯೂ ಮನವಿ ಮಾಡಿದ್ದಾರೆ.

ಫ್ರೀಡಂ ಟಿವಿ ಕನ್ನಡ, ‘ಕರ್ನಾಟಕ ಹನಿಟ್ರ್ಯಾಪ್’ ಎಂಬ ಯೂಟ್ಯೂಬ್ ಚಾನೆಲ್, ಹಲವು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು, ಟಿವಿ ಸುದ್ದಿ ವಾಹಿನಿಗಳು ಸೇರಿದಂತೆ ಒಟ್ಟು 42 ಪ್ರತಿವಾದಿಗಳನ್ನು ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ವಾಟ್ಸ್‌ಆ್ಯಪ್, ಯೂಟ್ಯೂಬ್ ಎಲ್‌ಎಲ್‌ಸಿ, ಗೂಗಲ್ ಇಂಡಿಯಾ, ಯಾಹೂ ಇಂಡಿಯಾ ಮತ್ತು ಫೇಸ್‌ಬುಕ್ ಇಂಡಿಯಾವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಸೆಪ್ಟೆಂಬರ್ 27ರಂದು “ಕರ್ನಾಟಕ ಹನಿ ಟ್ರ್ಯಾಪ್‌ ನೆಕ್ಸಸ್‌ ಪಾರ್ಟ್‌ 1” ಎಂಬ ಶೀರ್ಷಿಕೆಯಡಿ ‘ಕರ್ನಾಟಕ ಹನಿಟ್ರ್ಯಾಪ್’ ಯೂಟ್ಯೂಬ್ ಚಾನೆಲ್‌ನಲ್ಲಿ ಮೊದಲ ವಿಡಿಯೊ ಪ್ರಕಟಿಸಲಾಗಿತ್ತು ಎಂದು ಸಿದ್ದರಾಮಯ್ಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಡಿಯೊ ಮತ್ತು ಅದರೊಂದಿಗೆ ಪ್ರಕಟಿಸಲಾದ ಬರಹವು ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವುದಾಗಿದೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯ ರಾಜಕೀಯ ಬೆಳವಣಿಗೆಗಳಿಗೂ ಈ ವಿಚಾರಕ್ಕೂ ಸಂಬಂಧವಿದೆ ಎಂಬ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿತ್ತೇ ಮತ್ತು ಈ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಆಕ್ಷೇಪಾರ್ಹ ವಿಷಯಗಳು ಕಾರಣವಾಗಿದ್ದವೇ ಎಂಬ ಪ್ರಶ್ನೆಗಳನ್ನು ವಿಡಿಯೊದ ವಿವರಣೆಯಲ್ಲಿ ಎತ್ತಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಈ ಆರೋಪಗಳು ಮತ್ತು ಸೂಚ್ಯಾರ್ಥಗಳನ್ನು ಸಿದ್ದರಾಮಯ್ಯ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅವು ಸುಳ್ಳು ಮತ್ತು ಆಧಾರರಹಿತವಾಗಿದ್ದು, ತಮ್ಮ ವ್ಯಕ್ತಿತ್ವ, ಪ್ರತಿಷ್ಠೆ ಹಾಗೂ ರಾಜಕೀಯ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿವೆ ಎಂದು ಆಕ್ಷೇಪಿಸಿದ್ದಾರೆ.

ಅಕ್ಟೋಬರ್ 2, 2026ರಂದು ಫ್ರೀಡಂ ಟಿವಿ ಕನ್ನಡದಲ್ಲಿ “ಲೈವ್:‌ ಬಿಗ್ಗೆಸ್ಟ್‌ ಸಿಡಿ ಬ್ಲಾಸ್ಟ್‌ ಇನ್‌ ಕರ್ನಾಟಕ ಪಾಲಿಟಿಕ್ಸ್‌?” ಎಂಬ ಶೀರ್ಷಿಕೆಯಡಿ ಸುಮಾರು ಒಂದು ಗಂಟೆಯ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು ಅಥವಾ ಅಪ್‌ಲೋಡ್ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆ ಕಾರ್ಯಕ್ರಮದಲ್ಲಿ ವಿವಾದವನ್ನು ಸಂಚಲನಕಾರಿಯಾಗಿ ಬಿಂಬಿಸಲಾಗಿತ್ತು. ಆಕ್ಷೇಪಾರ್ಹ ಸಿಡಿ ಇದೆ ಎಂದು ಪದೇಪದೇ ಉಲ್ಲೇಖಿಸುವುದರ ಜೊತೆಗೆ, ಆರೋಪಗಳಿಗೆ ಪೂರಕವಾದ ಸ್ವತಂತ್ರವಾಗಿ ಪರಿಶೀಲಿಸಬಹುದಾದ ಸಾಕ್ಷ್ಯವನ್ನು ಪ್ರದರ್ಶಿಸದೆ ಪ್ರಮುಖ ರಾಜಕೀಯ ನಾಯಕನೊಬ್ಬರ ಭಾಗಿಯಾಗಿರುವ ಬಗ್ಗೆ ಸೂಚನೆ ನೀಡಲಾಗಿತ್ತು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಪ್ರಾಪ್ತ ವಯಸ್ಸಿನಲ್ಲಿದ್ದಾಗ, ಅಂದರೆ 2011ರ ಆಸುಪಾಸಿನಲ್ಲಿ ತಮ್ಮ ಮೇಲೆ ಲೈಂಗಿಕ ಶೋಷಣೆ ನಡೆದಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ ಎನ್ನಲಾದ ಧ್ವನಿಮುದ್ರಣವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮಹಿಳೆ ಆರೋಪಿತ ವ್ಯಕ್ತಿಯಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.

ಆದರೆ, ಈ ಧ್ವನಿಮುದ್ರಣವು ಸಾರ್ವಜನಿಕವಾಗಿ ಬೆಳಕಿಗೆ ಬಂದಿರುವುದು ಸೆಪ್ಟೆಂಬರ್ 2026ರಲ್ಲಿ ಮಾತ್ರ; ಅಂದರೆ ಆರೋಪಿತ ಘಟನೆ ನಡೆದ ಸುಮಾರು 15 ವರ್ಷಗಳ ಬಳಿಕ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಆರೋಪಗಳನ್ನು ಸಮರ್ಥಿಸುವ ಸಮಕಾಲೀನ ದೂರು, ಸ್ವತಂತ್ರ ಸಾಕ್ಷಿಗಳ ಹೇಳಿಕೆ ಅಥವಾ ಪರಿಶೀಲಿಸಬಹುದಾದ ಇತರ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ದಾಖಲಿಸಿದ ಹಾಗೂ ಪ್ರಸ್ತುತಪಡಿಸಿದ ರೀತಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ನಿರ್ದಿಷ್ಟವಾದ ನಿರೂಪಣೆಯನ್ನು ಹೊರತರಲು ಅನುಕೂಲವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಡಿಯೊಗಳನ್ನು ಪ್ರಕಟಿಸಿದ ಸಮಯ ಮತ್ತು ಅವುಗಳೊಂದಿಗೆ ನೀಡಲಾದ ರಾಜಕೀಯ ವ್ಯಾಖ್ಯಾನಗಳು ಸಾರ್ವಜನಿಕ ವಲಯದಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶ ಹೊಂದಿವೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Vikram Huilgol
Vikram Huilgol

ವಿಡಿಯೊಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ಅವುಗಳ ತುಣುಕುಗಳು, ಎಡಿಟೆಡ್‌ ಆವೃತ್ತಿಗಳು, ಸ್ಕ್ರೀನ್‌ಶಾಟ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೂಲಕ ಮತ್ತಷ್ಟು ವ್ಯಾಪಕವಾಗಿ ಹರಡುವ ಅಪಾಯವಿದೆ. ಇದರಿಂದ ತಮ್ಮ ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿಯಾಗಲಿದೆ ಎಂದು ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಸಿದ್ದರಾಮಯ್ಯ ಪರವಾಗಿ ತಾತ್ಕಾಲಿಕ ಪ್ರತಿಬಂಧಕಾದೇಶದ ಮೂಲಕ ಮಾಧ್ಯಮಗಳನ್ನು ನಿರ್ಬಂಧಿಸಿರುವ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.

ಸಿದ್ದರಾಮಯ್ಯ ಪರ ಹಿರಿಯ ವಕೀಲ ವಿಕ್ರಮ್ ಹುಯಿಗೋಳ ವಾದ ಮಂಡಿಸಿದ್ದರು. ವಕೀಲರಾದ ಶತಭಿಷ್ ಶಿವಣ್ಣ ಮತ್ತು ಪ್ರವೀಣ್ ಕಾಮತ್ ಅರ್ಜಿ ಸಲ್ಲಿಸಿದ್ದರು.

Attachment
PDF
Siddaramaiah Vs Freedom TV and others
Preview
Kannada Bar & Bench
kannada.barandbench.com