

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹನಿಟ್ರ್ಯಾಪ್ಗೆ ಸಿಲುಕಿಸುವ ಸಂಬಂಧಿತ ನಕಲಿ ಸ್ಟಿಂಗ್ ವಿಡಿಯೊ ಪ್ರಸಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಜೊತೆ ಗುರುತಿಸಿಕೊಂಡಿರುವ ಮೂವರಿಗೆ ಬೆಂಗಳೂರಿನ ನ್ಯಾಯಾಲಯ ಗುರುವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿರುವ ನವದೆಹಲಿಯ ಮಾಧ್ಯಮ ಸಲಹೆಗಾರ ಪ್ರಜ್ವಲ್ ಪ್ರಸಾದ್ ಹಾಗೂ ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಕರ್ತರಾದ ಚಂದನ್ ಎಚ್ ಎಸ್ ಮತ್ತು ಮೋಹನ್ ಗೌಡ ಕೆ. ಅವರಿಗೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲಕಣಿ ಅವರು ಪ್ರತ್ಯೇಕ ಆದೇಶಗಳ ಮೂಲಕ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 94ರ ಅಡಿ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ತಮ್ಮ ಹೆಸರು ಎಫ್ಐಆರ್ನಲ್ಲಿ ಉಲ್ಲೇಖವಾಗಿಲ್ಲ. ಆದರೂ ತನಿಖೆಯ ವೇಳೆ ತಮ್ಮನ್ನು ಸುಳ್ಳಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರು ವಾದಿಸಿದ್ದರು. ಅಲ್ಲದೆ, 'ಕರ್ನಾಟಕ ಹನಿಟ್ರ್ಯಾಪ್' ಹೆಸರಿನ ಯೂಟ್ಯೂಬ್ ಚಾನೆಲ್ನ ಮಾಲೀಕರು, ಸೃಷ್ಟಿಕರ್ತರು ಅಥವಾ ನಿರ್ವಾಹಕರು ತಾವಲ್ಲ. ಬದಲಿಗೆ ಬೇರೊಬ್ಬರು ಆ ಚಾನೆಲ್ ಸೃಷ್ಟಿಸಿ ನಿರ್ವಹಿಸುತ್ತಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದೇ ರೀತಿಯ ಆರೋಪ ಎದುರಿಸುತ್ತಿರುವ ಸಹ ಆರೋಪಿಯೊಬ್ಬರು ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿರುವುದನ್ನು ನ್ಯಾಯಾಲಯ ಪರಿಗಣಿಸಿದೆ. ಕಠಿಣ ಷರತ್ತುಗಳನ್ನು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವುದರಿಂದ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಇಲ್ಲದಿದ್ದರೆ ಸಂವಿಧಾನದ 21ನೇ ವಿಧಿಯಡಿ ಅರ್ಜಿದಾರರಿಗೆ ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯವು ನಿರರ್ಥಕವಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರನ್ನು ಬಂಧಿಸಿದಲ್ಲಿ ತಲಾ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ಒದಗಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಅಲ್ಲದೆ, ತನಿಖಾಧಿಕಾರಿಯೊಂದಿಗೆ ಸಹಕರಿಸಬೇಕು, ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಅಥವಾ ಸಾಕ್ಷ್ಯ ತಿರುಚಬಾರದು ಹಾಗೂ ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿಗಳು ವಜಾಗೊಂಡಲ್ಲಿ ತನಿಖಾಧಿಕಾರಿಯ ಮುಂದೆ ಶರಣಾಗಬೇಕು ಎಂದು ಷರತ್ತು ವಿಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಅಕ್ಟೋಬರ್ 23ರಂದು ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರಿಗೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ದೆಹಲಿ ಮೂಲದ ರಿತೇಶ್ ಪಾಂಡೆ ಅವರನ್ನು ಪ್ರಕರಣದಲ್ಲಿ ಬಂಧಿಸಲಾಗಿದ್ದು, ಬಳಿಕ ಅವರಿಗೆ ಜಾಮೀನು ದೊರೆತಿತ್ತು.
ಸೆಪ್ಟೆಂಬರ್ 27ರಂದು 'ಕರ್ನಾಟಕ ಹನಿಟ್ರ್ಯಾಪ್' ಹೆಸರಿನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟವಾಗಿ, ಬಳಿಕ ಕೆಲವು ಕನ್ನಡ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದ್ದ ಆಕ್ಷೇಪಾರ್ಹ ಸ್ಟಿಂಗ್ ವಿಡಿಯೊಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಅಕ್ಟೋಬರ್ 6ರಂದು ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೊ ಮೂಲಕ ತಮ್ಮ ವಿರುದ್ಧ ಮಾನಹಾನಿ ಮತ್ತು ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.
ಇದಕ್ಕೂ ಮುನ್ನ ಅಕ್ಟೋಬರ್ 13ರಂದು ಬೆಂಗಳೂರಿನ ನ್ಯಾಯಾಲಯವು ಸಿದ್ದರಾಮಯ್ಯ ಅವರು ಎನ್ನಲಾದ ಹನಿಟ್ರ್ಯಾಪ್ ಸಂಬಂಧಿತ ವಿಡಿಯೊಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ 42 ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ವೇದಿಕೆಗಳು ಹಾಗೂ ಇತರ ಪ್ರತಿವಾದಿಗಳಿಗೆ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ನೀಡಿತ್ತು.
ವಕೀಲ ಸುಯೋಗ್ ಹೇರಳೆ ಅವರು ಚಂದನ್ ಎಚ್ ಎಸ್ ಮತ್ತು ಮೋಹನ್ ಗೌಡ ಕೆ ಪರ ವಾದಿಸಿದರೆ ಪ್ರಜ್ವಲ್ ಪ್ರಸಾದ್ ಪರ ವಕೀಲ ಮಾಧವ್ ಬಿ. ಕಶ್ಯಪ್ ವಾದ ಮಂಡಿಸಿದ್ದರು.