

ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ ಪಿ ಯೋಗೇಶ್ವರ್ ಅವರ ಕುಟುಂಬಕ್ಕೆ ಸೇರಿದ 223 ಸ್ಥಿರಾಸ್ತಿಗಳನ್ನು ಮೂರನೇ ವ್ಯಕ್ತಿಗೆ ಮಾರಾಟ ಅಥವಾ ಪರಭಾರೆ ಮಾಡದಂತೆ ವಿಧಿಸಿದ್ದ ತಾತ್ಕಾಲಿಕ ಪ್ರತಿಬಂಧಕಾದೇಶ ಸಡಿಲಿಸಿದ್ದು, ಇವುಗಳಲ್ಲಿ 217 ಆಸ್ತಿಗಳ ಮೇಲಿನ ಪ್ರತಿಬಂಧಕಾದೇಶವನ್ನು ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ತೆರವುಗೊಳಿಸಿದೆ.
ಶಾಸಕ ಸಿ ಪಿ ಯೋಗೇಶ್ವರ್ ಅವರ ಮೊದಲನೆ ಪತ್ನಿ ಮಾಳವಿಕಾ ಸೋಲಂಕಿ ಮತ್ತು ಅವರ ಪುತ್ರಿ ನಿಶಾ ಯೋಗೇಶ್ವರ್ ಸಲ್ಲಿಸಿದ್ದ ಮೂಲ ದಾವೆ ವಿಚಾರಣೆ ನಡೆಸಿದ 43ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಚಿನ್ನಣ್ಣವರ ರಾಜೇಶ ಸದಾಶಿವ ಅವರು, ‘ದಾವೆದಾರರಾದ ಮಾಳವಿಕಾ ಅವರು ಯೋಗೇಶ್ವರ ಅವರ 223 ಸ್ಥಿರಾಸ್ತಿಗಳಲ್ಲಿ ಆರು ಆಸ್ತಿಗಳಿಗೆ ಮಾತ್ರವೇ ತಕರಾರು ಮುಂದುವರಿಸಬಹುದು’ ಎಂದು ಆದೇಶಿಸಿದೆ.
“ದಾವೆಯಲ್ಲಿ ಉಲ್ಲೇಖಿಸಿರುವ ಬೆಂಗಳೂರು ಮತ್ತು ಇತರೆಡೆಯ ಆರು ಸ್ಥಿರಾಸ್ತಿಗಳನ್ನು ಮೂರನೇ ವ್ಯಕ್ತಿಗೆ ಮಾರಾಟ ಅಥವಾ ಪರಭಾರೆ ಮಾಡಬಾರದು” ಎಂದು ತಾತ್ಕಾಲಿಕ ನಿರ್ಬಂಧ ವಿಧಿಸಿರುವ ನ್ಯಾಯಾಲಯವು ಈ ಸಂಬಂಧ ದಾವೆಯ ಪ್ರತಿವಾದಿಗಳಾದ ಸಿ ಪಿ ಯೋಗೇಶ್ವರ್ ತಾಯಿ ನಾಗರತ್ನಮ್ಮ, ಅವರ ಎರಡನೇ ಪತ್ನಿ ಪಿ ವಿ ಸುಶೀಲಾ, ಪುತ್ರ ಧ್ಯಾನ್, ಸಹೋದರರಾದ ಸಿ ಪಿ ಗಂಗಾಧರ, ಸಿ ಪಿ ರಾಜೇಶ್, ಸಹೋದರಿಯರಾದ ಸಿ ಪಿ ಪುಷ್ಪಾ ಹಾಗೂ ಸಿ ಪಿ ಭಾಗ್ಯಲಕ್ಷ್ಮಿ ಅವರಿಗೆ ನಿರ್ದೇಶಿಸಿದೆ.
ಸಿ ಪಿ ಯೋಗೇಶ್ವರ್ ತೆಂಗಿನ ಕಾಯಿ ವ್ಯಾಪಾರಕ್ಕಾಗಿ ಆಗಾಗ್ಗೆ ಬೆಂಗಳೂರಿಗೆ ಬರುತ್ತಿದ್ದರು. ಆಗ ನಾನು ಪರಿಚಯವಾಗಿದ್ದೆ. ನಂತರ ಇಬ್ಬರೂ ಮದುವೆಯಾಗಿದ್ದೆವು. ಮದುವೆ ನಂತರ ನಾನು ಮೆಗಾಸಿಟಿ ಡೆವಲಪರ್ಸ್ ಅ್ಯಂಡ್ ಬಿಲ್ಡರ್ಸ್ ಪ್ರೈ.ಲಿ ಕಂಪನಿ ಹುಟ್ಟುಹಾಕಿ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದೆ. ಈ ವೇಳೆ ಬೆಂಗಳೂರು ಮತ್ತು ಬೆಂಗಳೂರಿನ ಹೊರವಲಯದಲ್ಲಿ ಅನೇಕ ಸ್ಥಿರಾಸ್ತಿಗಳನ್ನು ಖರೀದಿಸಿ ವಸತಿ ಲೇಔಟ್ ನಿರ್ಮಿಸಲಾಯಿತು ಎಂದು ಮಾಳವಿಕಾ ಸೋಲಂಕಿ ದಾವೆಯಲ್ಲಿ ವಿವರಿಸಿದ್ದಾರೆ.
ಕಾಲಕ್ರಮದಲ್ಲಿ ಸಿ ಪಿ ಯೋಗೇಶ್ವರ್ ಕಂಪನಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಈ ವೇಳೆ ಕಂಪನಿಯಲ್ಲಿದ್ದ ಕೆಲವೊಂದು ಆಸ್ತಿಗಳನ್ನು ಅವರು ತಮ್ಮ ಎರಡನೇ ಪತ್ನಿ ಸುಶೀಲಾ ಮತ್ತು ಪುತ್ರ ಧ್ಯಾನ್ ಹೆಸರಿಗೆ ಮೋಸದಿಂದ ವರ್ಗಾಯಿಸಿದ್ದಾರೆ. ಇವರೆಲ್ಲಾ ಕಂಪನಿ ಮತ್ತು ವ್ಯವಹಾರದ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡಿದವರಲ್ಲ. ಹೀಗಿದ್ದರೂ, ಅವರಿಗೆ ಆಸ್ತಿಯಲ್ಲಿ ಪಾಲು ನೀಡಲಾಗಿದೆ. ಯೋಗೇಶ್ವರ್ ಅವರ ಪಿತ್ರಾರ್ಜಿತ ಮತ್ತು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ನಾನು ಮತ್ತು ನನ್ನ ಮಗಳು ನಿಶಾ, 1/4ನೇ ಭಾಗದಷ್ಟು ಪಾಲು ಹೊಂದುವ ಹಕ್ಕಿದೆ. ಆದ್ದರಿಂದ, ಆ ಆಸ್ತಿಗಳನ್ನು ಬೇರೊಬ್ಬರಿಗೆ ಮಾರಾಟ ಮಾಡದಂತೆ ಸಿ ಪಿ ಯೋಗೇಶ್ವರ್, ಅವರ ಎರಡನೇ ಪತ್ನಿ, ಅವರ ಪುತ್ರ ಮತ್ತು ಸಹೋದರ, ಸಹೋದರಿಯರಿಗೆ ನಿರ್ದೇಶಿಸಬೇಕು ಎಂದು ಮಾಳವಿಕಾ ದಾವೆಯಲ್ಲಿ ಕೋರಿದ್ದರು. ಯೋಗೇಶ್ವರ ಪರ ವಕೀಲ ಶಶಾಂಕ ಶ್ರೀಧರ ವಾದ ಮಂಡಿಸಿದ್ದರು.