ಕೆಜಿಎಫ್-2 ಸಿನಿಮಾದ ಮುದ್ರಿತ ಸಂಗೀತವನ್ನು ಟ್ವಿಟರ್ ಖಾತೆಯಲ್ಲಿ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿ ಎಂಆರ್‌ಟಿ ಮ್ಯೂಸಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಭಾರತ ಐಕ್ಯತಾ ಯಾತ್ರೆಯ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್‌ಗೆ ಸೋಮವಾರ ಆದೇಶಿಸಿದೆ.
ಫಿರ್ಯಾದಿ ಎಂಆರ್‌ಟಿ ಮ್ಯೂಸಿಕ್ ಸಲ್ಲಿಸಿದ್ದ ವಾಣಿಜ್ಯ ಮೂಲ ದಾವೆ ವಿಚಾರಣೆ ನಡೆಸಿದ ಬೆಂಗಳೂರಿನ 85ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶೆ ಎಂ ಲತಾಕುಮಾರಿ ಅವರು ಈ ಆದೇಶ ಮಾಡಿದ್ದಾರೆ.
“ಕೆಜಿಎಫ್ – 2 ಸಿನಿಮಾದ ಮುದ್ರಿತ ಸಂಗೀತವನ್ನು ಕಾನೂನುಬಾಹಿರವಾಗಿ ಬಳಕೆ ಮಾಡಿರುವುದಕ್ಕೆ ಪ್ರೋತ್ಸಾಹ ನೀಡಿದರೆ ಫಿರ್ಯಾದಿಗೆ ಸರಿಪಡಿಸಲಾಗದಷ್ಟು ಹಾನಿಯಾಗಲಿದೆ. ವಿಸ್ತೃತ ನೆಲೆಯಲ್ಲಿ ಇದು ಕೃತಿಚೌರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ” ಎಂದು ನ್ಯಾಯಾಲಯವು ಹೇಳಿದೆ.
“ಕೃತಿಸ್ವಾಮ್ಯ ಹೊಂದಿರುವ ಮೂಲ ರೂಪದ ಹಾಡು ಮತ್ತು ಕಾನೂನುಬಾಹಿರವಾಗಿ ಅಳವಡಿಸಲಾಗಿರುವ ಹಾಡನ್ನು ಫಿರ್ಯಾದಿಯು ಇಂಚಿಂಚು ಸಿಡಿಯಲ್ಲಿ ಹಾಕಿ ಮುಂದಿಟ್ಟಿದ್ದಾರೆ. ಮೇಲ್ನೋಟಕ್ಕೆ ಈ ಹಂತದಲ್ಲಿ ನ್ಯಾಯಾಲಯದ ಮುಂದಿಟ್ಟಿರುವ ದಾಖಲೆಯನ್ನು ನೋಡಿದರೆ ಈ ಬಗೆಯ ಕೃತ್ಯಕ್ಕೆ ಪ್ರೋತ್ಸಾಹ ನೀಡಿದಲ್ಲಿ ಸಿನಿಮಾ, ಹಾಡುಗಳು, ಮ್ಯೂಸಿಕ್ ಆಲ್ಬಮ್ ಇತ್ಯಾದಿ ಉದ್ಯಮದಲ್ಲಿರುವ ಫಿರ್ಯಾದಿಗೆ ಸರಿಪಡಿಸಲಾಗದಷ್ಟು ಹಾನಿಯಾಗಲಿದೆ ಎನ್ನುವುದನ್ನು ನಿರೂಪಿಸುತ್ತವೆ. ವಿಸ್ತೃತ ನೆಲೆಯಲ್ಲಿ ಇದು ಕೃತಿಚೌರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ಪ್ರತಿಬಂಧಕಾದೇಶ ಮಾಡಿರುವ ನ್ಯಾಯಾಲಯವು ಫಿರ್ಯಾದಿಯು ಕೃತಿಸ್ವಾಮ್ಯ ಹೊಂದಿರುವ ಮುದ್ರಿತ ಸಂಗೀತವನ್ನು ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಪ್ರತಿವಾದಿಗಳು ಬಳಕೆ ಮಾಡಬಾರದು ಎಂದು ನಿರ್ಬಂಧಿಸಿದೆ.
ಮೂರು ಲಿಂಕ್‌ಗಳನ್ನು ತನ್ನ ವೇದಿಕೆಯಿಂದ ತೆಗೆಯುವಂತೆ ಟ್ವಿಟರ್‌ಗೆ ನ್ಯಾಯಾಲಯ ಆದೇಶಿಸಿದ್ದು, ಐಎನ್‌ಸಿ ಮತ್ತು ಭಾರತ ಐಕ್ಯತಾ ಯಾತ್ರೆಯ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಹೇಳಿದೆ.
ಎಂಆರ್‌ಟಿ ಮ್ಯೂಸಿಕ್ ಪ್ರತಿನಿಧಿಸಿದ್ದ ವಕೀಲರು “ಪ್ರತಿವಾದಿಗಳು ಕಾನೂನುಬಾಹಿರವಾಗಿ ತಮ್ಮ ಮ್ಯೂಸಿಕ್ ಬಳಕೆ ಮಾಡಿದ್ದು, ತಮ್ಮ ಹಕ್ಕನ್ನು ಕಸಿದಿದ್ದಾರೆ. ಇದಕ್ಕಾಗಿ ಆಯುಕ್ತರನ್ನು ನೇಮಕ ಮಾಡಿ ಪರಿಶೀಲಿಸಬೇಕು. ಅಲ್ಲದೇ, ಎಲೆಕ್ಟ್ರಾನಿಕ್ ಆಡಿಟ್ ಮಾಡಲು ಆದೇಶಿಸಬೇಕು. ಐಎನ್‌ಸಿ ಮತ್ತು ಭಾರತ ಐಕ್ಯತಾ ಯಾತ್ರೆಯ ಟ್ವಿಟರ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಹಾಕಿರುವ ದಾಖಲೆಯನ್ನು ರಕ್ಷಿಸಲು ನಿರ್ದೇಶಿಸಬೇಕು” ಎಂದು ಕೋರಿದ್ದರು.
ಇದಕ್ಕೆ ಒಪ್ಪಿದ ನ್ಯಾಯಾಲಯವು ಆಯುಕ್ತರನ್ನು ನೇಮಕ ಮಾಡದಿದ್ದರೆ ಪ್ರತಿಬಂಧಕಾದೇಶ ಮಾಡುವ ಉದ್ದೇಶವೇ ಸೋಲಲಿದೆ. ಇದಕ್ಕಾಗಿ ಬೆಂಗಳೂರು ವಾಣಿಜ್ಯ ನ್ಯಾಯಾಲಯದ ಕಂಪ್ಯೂಟರ್ ವಿಭಾಗದ ಜಿಲ್ಲಾ ಆಡಳಿತಾಧಿಕಾರಿ ಎಸ್ ಎನ್ ವೆಂಕಟೇಶಮೂರ್ತಿ ಅವರು ಪ್ರತಿವಾದಿಗಳ ಖಾತೆಗಳನ್ನು ಪರಿಶೀಲಿಸಿ, ಎಲೆಕ್ಟ್ರಾನಿಕ್ ಆಡಿಟ್ ನಡೆಸಿ, ಕೃತಿಸ್ವಾಮ್ಯ ಉಲ್ಲಂಘಿಸಲಾಗಿರುವ ದಾಖಲೆಗಳನ್ನು ನ್ಯಾಯಾಲಯದ ಕಂಪ್ಯೂಟರ್‌ನಲ್ಲಿ ಸಂಗ್ರಹಿಸುವುದಲ್ಲದೇ ಪ್ರತ್ಯೇಕ ಸಿ ಡಿ ಮಾಡಬೇಕು” ಎಂದು ಆದೇಶಿಸಿದೆ.