ಬೆಂಗಳೂರಿನ ಪ್ರತಿಷ್ಠಿತ ನೋಂದಾಯಿತ ʼವಿದ್ಯಾರ್ಥಿ ಭವನʼದ ಟ್ರೇಡ್‌ಮಾರ್ಕ್ ಅನ್ನು ಶಿವಮೊಗ್ಗದ ರೆಸ್ಟೊರಂಟ್ ಅತಿಕ್ರಮಿಸಿ ಬಳಸುತ್ತಿರುವುದಕ್ಕೆ ಬೆಂಗಳೂರಿನ ನ್ಯಾಯಾಲಯವು ಈಚೆಗೆ ಶಾಶ್ವತ ಪ್ರತಿಬಂಧಕಾದೇಶ ಮಾಡಿದೆ.
ʼವಿದ್ಯಾರ್ಥಿ ಭವನʼದ ಪಾಲುದಾರರಾದ ಎಸ್ ಅರುಣ್ ಕುಮಾರ್ ಅಡಿಗ ಅವರು ಹೂಡಿದ್ದ ದಾವೆಯನ್ನು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಪದ್ಮ ಪ್ರಸಾದ್ ಅವರು ಭಾಗಶಃ ಮಾನ್ಯ ಮಾಡಿದ್ದಾರೆ.
ಟ್ರೇಡ್‌ಮಾರ್ಕ್ ಕಾಯಿದೆ 1996ರ ಕ್ಲಾಸ್ 42 ಮತ್ತು 43ರ ಅಡಿ ವಿದಾರ್ಥಿ ಭವನ ಎಂಬ ಹೆಸರಿನ ಅಡಿ ನೋಂದಾಯಿಸಿ, 1956ರಿಂದ ಫಿರ್ಯಾದಿಯು ಶಾಖಾಹಾರಿ ರೆಸ್ಟೊರಂಟ್ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಭವನವು ಉತ್ತಮ ಹೆಸರು ಮತ್ತು ಅಪಾರ ಪ್ರಮಾಣದ ವರ್ಚಸ್ಸು ಗಳಿಸಿದೆ.
2018ರಲ್ಲಿ ಕಿರಣ್ ಗೌಡ ಎಂಬವರು ಅನಧಿಕೃತವಾಗಿ ವಿ ಬಿ ವಿಧಾತ್ರಿ ಭವನ ಹೆಸರಿನಲ್ಲಿ ತಮ್ಮ ನೋಂದಾಯಿತ ಟ್ರೇಡ್‌ಮಾರ್ಕ್ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ವಿ ಬಿ ವಿಧಾತ್ರಿ ಭವನ ಹೆಸರನ್ನು ಬಳಸಲು ಪ್ರತಿವಾದಿಗಳಿಗೆ ಯಾವುದೇ ಅಧಿಕಾರವಿಲ್ಲ. ಉಭಯ ಸಂಸ್ಥೆಗಳು ಒಂದೇ ಉದ್ಯಮದಲ್ಲಿದ್ದು, ಅದೇ ಹೆಸರನ್ನು ಬಳಕೆ ಮಾಡುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಆಕ್ಷೇಪಿಸಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪ್ರತಿವಾದಿಗಳು ಮಾಧ್ಯಮ ಗೋಷ್ಠಿ ನಡೆಸಿ ಬೆಂಗಳೂರು ಫುಡ್ ಟ್ರೆಂಡ್ ಇನ್ ಶಿವಮೊಗ್ಗ ಪಂಚ್‌ಲೈನ್‌ನೊಂದಿಗೆ ವಿ ಬಿ ವಿಧಾತ್ರಿ ಭವನ ಅನ್ನು ಪ್ರಚಾರ ಮಾಡಿದ್ದಾರೆ. ಅಲ್ಲದೇ, ಈ ಸಂಬಂಧ ಹೋರ್ಡಿಂಗ್ ಮತ್ತು ಬ್ಯಾನರ್ ಅನ್ನು ಶಿವಮೊಗ್ಗ ಪೂರ್ತಿ ಕಟ್ಟಿದ್ದು, ಸ್ಥಳೀಯ ಪತ್ರಿಕೆಗಳಲ್ಲೂ ಪ್ರಚಾರ ನಡೆಸಿದ್ದಾರೆ ಎಂದು ವಾದಿಸಲಾಗಿತ್ತು.
“ಪ್ರತಿವಾದಿಗಳು ʼವಿದ್ಯಾರ್ಥಿ ಭವನʼ ಹೆಸರು ಬಳಕೆ ಮಾಡಿದ್ದು, ಅದನ್ನು ಅಲ್ಪ ಬದಲಾವಣೆ ಮಾಡಿದ್ದರೂ ಹಿಂದಿನ ಹೆಸರಿಗೆ ಹತ್ತಿರವಾಗಿದೆ. ಅಕ್ಷರದಲ್ಲಿ ಬದಲಾವಣೆ ಮಾಡಿ, ವಿ ಬಿ ವಿಧಾತ್ರಿ ಭವನ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ವಿಧಾತ್ರಿ ಮತ್ತು ವಿದ್ಯಾರ್ಥಿ ಒಂದೇ ರೀತಿ ಕಾಣುತ್ತಿದ್ದು, ಅದರಲ್ಲಿ ಭಿನ್ನತೆ ಕಾಣುತ್ತಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಪ್ರತಿವಾದಿಗಳು ಫಿರ್ಯಾದಿಯ ಟ್ರೇಡ್‌ಮಾರ್ಕ್ ಹೆಸರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಪ್ರಸ್ತುತಪಡಿಸಿಲ್ಲ. ಹೀಗಾಗಿ, ಫಿರ್ಯಾದಿಯ ನೋಂದಾಯಿತ ಟ್ರೇಡ್‌ಮಾರ್ಕ್ ʼವಿದ್ಯಾರ್ಥಿ ಭವನʼ ಹೆಸರು ಬಳಕೆ ಮಾಡದಂತೆ ಪ್ರತಿವಾದಿಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.