ಧರ್ಮಸ್ಥಳದ ದೇವಸ್ಥಾನ, ಕಾರ್ಯದರ್ಶಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನ್ಯಾಯಾಲಯದ ನಿರ್ಬಂಧ

ಹರ್ಷೇಂದ್ರ ಕುಮಾರ್ ಅವರು ಹೂಡಿರುವ ಮಾನಹಾನಿ ದಾವೆಯಲ್ಲಿ 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು ಮುಂತಾದವನ್ನುಉಲ್ಲೇಖಿಸಲಾಗಿದೆ.
Gavel
Gavel
Published on

ಕೊಲೆಯಾದ ಹಲವಾರು ಶವಗಳನ್ನು ಧರ್ಮಸ್ಥಳದಲ್ಲಿ ಹೂಳಲಾಗಿದೆ ಎಂದು ಆರೋಪಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿಕರ ವಿಷಯವನ್ನು ಪ್ರಕಟಿಸುವುದನ್ನು ಮತ್ತು ಪ್ರಸಾರ ಮಾಡುವುದನ್ನು ನಿರ್ಬಂಧಿಸಿ ಬೆಂಗಳೂರಿನ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಆದೇಶಿಸಿದೆ.

ಧರ್ಮಸ್ಥಳದಲ್ಲಿ ಕೊಲೆಯಾಗಿರುವ ಹಲವಾರು ಶವಗಳನ್ನು ತಮಗೆ ಬೆದರಿಕೆಯೊಡ್ಡುವ ಮೂಲಕ ಹೂಳಿಸಲಾಗಿದೆ ಎಂದು ಸ್ವಚ್ಛತಾ ಕಾರ್ಮಿಕರೊಬ್ಬರು ಆಪಾದಿಸಿದ್ದರು. ಈ ಸಂಬಂಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯ ಹಾಗೂ ಸಂಸ್ಥೆಗಳ ಕಾರ್ಯದರ್ಶಿ ಸಲ್ಲಿಸಿದ ಮಾನಹಾನಿ ಮೊಕದ್ದಮೆಯ ವಿಚಾರಣೆಯನ್ನು ಹತ್ತನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ನಡೆಸಿದರು.

ಅರ್ಜಿದಾರರಿಗೆ ಸರಿಪಡಿಸಲಾಗದ ಧಕ್ಕೆ ಮತ್ತು ಖ್ಯಾತಿಗೆ ಹಾನಿಯಾಗುವ ಸಾಧ್ಯತೆಯನ್ನು ಉಲ್ಲೇಖಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡುವುದನ್ನು ಅಥವಾ ಹಂಚಿಕೊಳ್ಳುವುದನ್ನು ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳು ಮಾಡದಂತೆ ನಿರ್ಬಂಧಿಸಿದರು.

ಮುಂದುವರೆದು, "ಪ್ರತಿಯೊಬ್ಬ ನಾಗರಿಕರ ಖ್ಯಾತಿಯು ಬಹಳ ಮುಖ್ಯವಾದದ್ದಾಗಿದೆ. ಸಂಸ್ಥೆ ಮತ್ತು ದೇವಾಲಯಗಳ ವಿರುದ್ಧ ಆರೋಪ ಬಂದಾಗ, ಅದು ವಿವಿಧ ಕಾಲೇಜುಗಳು ಮತ್ತು ಶಾಲೆಗಳಲ್ಲಿ ಓದುತ್ತಿರುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನ್ಯಾಯಾಲಯವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ, ಒಂದೇ ಒಂದು ಸುಳ್ಳು ಮತ್ತು ಮಾನಹಾನಿಕರ ಪ್ರಕಟಣೆಯು ಸಹ ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ.

ಇದೇ ವೇಳೆ, ಈಗಾಗಲೇ ಪ್ರಕಟವಾಗಿರುವ ಮಾನಹಾನಿಕರ ವಿಷಯಗಳನ್ನು ಕಡ್ಡಾಯವಾಗಿ ತೆಗೆದು ಹಾಕಲು ಸೂಚಿಸಿದ ನ್ಯಾಯಾಲಯವು ಮರು ಇಂಡೆಕ್ಸ್‌ ಮಾಡುವ ಮೂಲಕ ಇದೇ ಸುದ್ದಿಗಳನ್ನು ಪ್ರಕಟಿಸುವುದನ್ನು ಸಹ ನಿರ್ಬಂಧಿಸಿತು.

ಹರ್ಷೇಂದ್ರ ಕುಮಾರ್ ಅವರು ಹೂಡಿರುವ ಮಾನಹಾನಿ ದಾವೆಯಲ್ಲಿ 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡಿಟ್‌ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳನ್ನು ಒಳಗೊಂಡಂತೆ 8,842 ಲಿಂಕ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ನ್ಯಾಯಾಲಯದ ಮುಂದೆ, ಕುಮಾರ್ ಅವರು ತಮ್ಮ ಹಾಗೂ ತಮ್ಮ ಕುಟುಂಬ, ದೇವಾಲಯ ಮತ್ತು ಅದರ ಸಂಸ್ಥೆಗಳ ವಿರುದ್ಧ ಆನ್‌ಲೈನ್ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಮತ್ತು ಮಾನಹಾನಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಸಕ್ತ ಪ್ರಥಮ ವರ್ತಮಾನ ವರದಿಯಲ್ಲಿ (ಎಫ್‌ಐಆರ್‌) ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದಿದ್ದಾರೆ. ಈ ಹಿಂದೆ 2012ರಲಿ ದಾಖಲಾಗಿದ್ದ ಎಫ್‌ಐಆರ್‌ ಒಂದರಲ್ಲಿ ಖುಲಾಸೆಯಾಗಿರುವುದಾಗಿ ತಿಳಿಸಿದ್ದಾರೆ.

Kannada Bar & Bench
kannada.barandbench.com