ಸರ್ಕಾರಿ ಜಾಗ, ಕೆರೆ ಒತ್ತುವರಿ ಆರೋಪ: ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಆದೇಶ

ಎಕ್ಸ್‌ ಕಾರ್ಪ್‌, ಗೂಗಲ್‌ ಇಂಡಿಯಾ, ಮೆಟಾ ಇಂಕ್‌ ಮತ್ತು ಅವರ ಪರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಗಳು, ಏಜೆಂಟರು ಪವನ್‌ ಕಲ್ಯಾಣ್ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟ, ಪ್ರಸಾರ, ಹಂಚಿಕೆಗೆ ಆಸ್ಪದ ನೀಡಬಾರದು ಎಂದು ಆದೇಶಿಸಿರುವ ನ್ಯಾಯಾಲಯ.
Pawan Kalyan
Pawan Kalyan
Published on

ಸರ್ಕಾರಿ ಜಾಗ, ಕೆರೆ ಒತ್ತುವರಿ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ವಿರುದ್ಧ ಯಾವುದೇ ಮಾನಹಾನಿಕರ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ ಸತ್ರ ನ್ಯಾಯಾಲಯ ಈಚೆಗೆ ತಡೆ ನೀಡಿದೆ.

ಪವನ್ ಕಲ್ಯಾಣ್ ಪರವಾಗಿ ರಾಮ್ ಪ್ರಸಾದ್ ತಲ್ಲೂರಿ (ಜಿಪಿಎ ಹೋಲ್ಡರ್) ಎಂಬುವರು ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ಬೆಂಗಳೂರಿನ 16ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್‌ ಮೊಯಿನುದ್ದೀನ್‌ ಅವರು ನಡೆಸಿದರು.

ಎಕ್ಸ್‌ ಕಾರ್ಪ್‌, ಗೂಗಲ್‌ ಇಂಡಿಯಾ, ಮೆಟಾ ಇಂಕ್‌ ಮತ್ತು ಅವರ ಪರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಗಳು, ಏಜೆಂಟರು ಪವನ್‌ ಕಲ್ಯಾಣ್ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಪ್ರಕಟಣೆಗಳು, ಆರೋಪಗಳು, ಹೇಳಿಕೆಗಳು, ವಿಡಿಯೊ ತುಣುಕುಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು, ಅಪ್ಲೋಡ್ ಮಾಡುವುದಕ್ಕೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಜೂನ್‌ ೧೧ರಂದು ಆದೇಶಿಸಿದೆ.

ಪವನ್‌ ಕಲ್ಯಾಣ್ ಅವರು ಸರ್ಕಾರಿ ಜಮೀನು, ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಆರೋಪ ಕುರಿತಾದ ಸುದ್ದಿ ಲಿಂಕ್‌ಗಳನ್ನು ನಿರ್ಬಂಧಿಸಬೇಕು. ಎಕ್ಸ್‌ ಕಾರ್ಪ್‌, ಮೆಟಾ ಮತ್ತು ಗೂಗಲ್‌ ಸಂಸ್ಥೆಗಳು ಪವನ್‌ ಕಲ್ಯಾಣ್‌ ವಿರುದ್ಧ ಇರುವ ಮಾನಹಾನಿ ಸುದ್ದಿಗಳನ್ನು ತಮ್ಮ ವೇದಿಕೆಯಲ್ಲಿ ನಿರ್ಬಂಧಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಮೇ 29 ರಿಂದ ಜೂನ್ 1ರ ವರೆಗೆ ಯೂಟ್ಯೂಬ್, ಎಕ್ಸ್ ಕಾರ್ಪ್ ಸೇರಿದಂತೆ ಪವನ್‌ ಕಲ್ಯಾಣ್‌ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರ ನಡೆಸಲಾಗಿದೆ. ಈ ವೇದಿಕೆಗಳಲ್ಲಿ ತಮ್ಮ ವಿರುದ್ಧ ಲಂಚಗಾರಿಕೆ, ಅಪರಾಧ ಸಂಚು, ವಂಚನೆ ಮತ್ತು ನೈತಿಕ ಅಧಃಪತನದಂತಹ ಗಂಭೀರ ಹಾಗೂ ಸುಳ್ಳು ಆರೋಪಗಳನ್ನು ಹೊರಿಸಿ ವಿಡಿಯೊ ಮತ್ತು ಸುದ್ದಿಗಳನ್ನು ಪ್ರಕಟಿಸಲಾಗಿದೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ತೆಗೆದುಹಾಕಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪವನ್ ಕಲ್ಯಾಣ್ ಕೇವಲ ಮೂರು ದಶಕಗಳಿಂದ ಖ್ಯಾತ ಚಲನಚಿತ್ರ ನಟರಷ್ಟೇ ಅಲ್ಲದೆ, ಪ್ರಸ್ತುತ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಪರಿಸರ ಹಾಗೂ ಅರಣ್ಯ ಖಾತೆಗಳ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ, ಸಾಮಾಜಿಕ ಜಾಲಾತಾಣದಲ್ಲಿ ಇವರಿಗೆ ಕೋಟ್ಯಂತರ ಮಂದಿ ಬೆಂಬಲಿಗರಿದ್ದು, ಅವರ ವಿರುದ್ಧ ಸುಳ್ಳು ಸುದ್ದಿಗಳು ಕೆಲವೇ ನಿಮಿಷಗಳಲ್ಲಿ ವ್ಯಾಪಕವಾಗಿ ಹರಡಿ ಅವರ ಗೌರವ ಮತ್ತು ವ್ಯಕ್ತಿತ್ವಕ್ಕೆ ಭಾರಿ ಧಕ್ಕೆ ಉಂಟುಮಾಡುತ್ತಿವೆ. ಆದ್ದರಿಂದ ಪ್ರತಿಬಂಧಕಾದೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com