ಸುಪ್ರೀಂ ನ್ಯಾಯಮೂರ್ತಿಗಳ ತಿರುಚಲಾದ ಚಿತ್ರ: ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲು ಬೆಂಗಳೂರು ನ್ಯಾಯಾಲಯದ ನಿರ್ದೇಶನ

ದೀಪಾಲಿ ಸಿಕಂದ್‌ ಅವರ ಮೈಂಡ್‌ಎಸ್ಕೇಪ್‌ ಕ್ಲಬ್‌ನಲ್ಲಿ ಕ್ಲಿಕ್ಕಿಸಿದ ಅತಿಥಿಗಳೊಂದಿಗಿನ ಚಿತ್ರವನ್ನು ಬಳಸಿ ಫೇಸ್‌ಬುಕ್‌, ಲಿಂಕ್ಡ್‌ಇನ್, ಟ್ವಿಟರ್‌ ಮತ್ತು ವಾಟ್ಸಾಪ್‌ಗಳಲ್ಲಿ ಪಸರಿಸಿರುವ ಮಾನಹಾನಿಕರ ವಿಚಾರಗಳ ತೆಗೆದುಹಾಕಲು ನ್ಯಾಯಾಲಯದ ಸೂಚನೆ
ಸುಪ್ರೀಂ ನ್ಯಾಯಮೂರ್ತಿಗಳ ತಿರುಚಲಾದ ಚಿತ್ರ: ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲು ಬೆಂಗಳೂರು ನ್ಯಾಯಾಲಯದ ನಿರ್ದೇಶನ

ನಕ್ಸಲರು ಮತ್ತು ಕಮ್ಯುನಿಸ್ಟರ ಜೊತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ಅವರು ಭೋಜನ ಸವಿದಿದ್ದಾರೆ ಎಂದು ಬಿಂಬಿಸುವ ತಿರುಚಿದ ಚಿತ್ರವನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ಜಾಲತಾಣಗಳಿಂದ ತೆಗೆಯುವಂತೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ಜಾನ್‌ ಡೊ ಅಥವಾ ಅಶೋಕ್‌ ಕುಮಾರ್‌ ಆದೇಶ (ಗುರುತಿಸಲಾಗದ ವ್ಯಕ್ತಿ ಅಥವಾ ಸಮೂಹಗಳನ್ನು ಉದ್ದೇಶಿಸಿ ಮಾಡಲಾಗುವ) ಮಾಡಿದೆ.

ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ ಮಾಲೀಕರಾದ ದೀಪಾಲಿ ಸಿಕಂದ್‌ ಅವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಕೆ ಎನ್‌ ಗಂಗಾಧರ್‌ ಅವರು ಈ ಆದೇಶ ಮಾಡಿದ್ದಾರೆ.

ದೀಪಾಲಿ ಸಿಕಂದ್‌ ಅವರು ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ನಲ್ಲಿ ಕೆಲವು ಅತಿಥಿಗಳ ಜೊತೆ ಕ್ಲಿಕ್ಕಿಸಲಾದ ಚಿತ್ರವನ್ನು ಬಳಸಿ ಹಾಕಿರುವ ಮಾನಹಾನಿಕರ ವಿಚಾರಗಳನ್ನು ತೆಗೆದು ಹಾಕುವಂತೆ ಫೇಸ್‌ಬುಕ್‌, ಲಿಂಕ್ಡ್‌ಇನ್‌, ಟ್ವಿಟರ್‌ ಮತ್ತು ವಾಟ್ಸಾಪ್‌ ಸಂಸ್ಥೆಗಳಿಗೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಫಿರ್ಯಾದುದಾರರ ವಿರುದ್ಧ ಮಾನಹಾನಿಕಾರಕ ಸಂಗತಿಗಳನ್ನು ಪ್ರಕಟಿಸದಂತೆ ಪ್ರತಿವಾದಿಗಳಿಗೆ ನ್ಯಾಯಾಲಯವು ನಿರ್ಬಂಧ ವಿಧಿಸಿದೆ.

ಜುಲೈ 1ರಂದು ಹಿರಿಯ ಪತ್ರಕರ್ತ ಹಾಗೂ ಹಿಂದೂ ಸಮೂಹ ಸಂಸ್ಥೆಯ ಎನ್‌ ರಾಮ್‌ ಮತ್ತು ಅವರ ಪತ್ನಿ ಮರಿಯಮ್‌ ಅವರು ತಮಿಳುನಾಡಿನಲ್ಲಿರುವ ಸಿಕಂದ್‌ ಒಡೆತನದ ಮೈಂಡ್‌ ಎಸ್ಕೇಪ್ಸ್‌ ಕ್ಲಬ್‌ನಲ್ಲಿ ಭೋಜನ ಕೂಟ ಆಯೋಜಿಸಿದ್ದರು. ಇದರಲ್ಲಿ ತಮಿಳುನಾಡಿನ ಹಣಕಾಸು ಸಚಿವ ಡಾ. ಪಳನಿವೇಲ್‌ ತಿಯಾಗರಾಜನ್‌, ಸಿಪಿಐ (ಎಂ) ನಾಯಕರಾದ ಪ್ರಕಾಶ್‌ ಮತ್ತು ಬೃಂದಾ ಕಾರಟ್‌, ಎನ್‌ಡಿಟಿವಿ ಸಂಸ್ಥಾಪಕರಾದ ರಾಧಿಕಾ ಮತ್ತು ಪ್ರಣಯ್‌ ರಾಯ್‌ ಭಾಗವಹಿಸಿದ್ದರು. ಈ ವೇಳೆ ಕ್ಲಿಕ್ಕಿಸಿದ್ದ ಚಿತ್ರವನ್ನು ಸಿಕಂದ್‌ ಅವರು ತಮ್ಮ ಫೇಸ್‌ಬುಕ್‌ ಮತ್ತು ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಪ್ರವಾದಿ ಮೊಹಮ್ಮದ್‌ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರಬಿಂದುವಾಗಿರುವ ಬಿಜೆಪಿ ಅಮಾನತುಗೊಂಡಿರುವ ವಕ್ತಾರೆ ನೂಪುರ್‌ ಶರ್ಮಾ ಅವರು ತಮ್ಮ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಒಂದೇ ಕಡೆ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾಗ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ಶರ್ಮಾ ವಿರುದ್ಧ ಮೌಖಿಕವಾಗಿ ಕಟು ಟೀಕೆ ಮಾಡಿತ್ತು. ಇದರ ಬೆನ್ನಿಗೇ, ಕೆಲವರು ಸಿಕಂದ್‌ ಕ್ಲಿಕ್ಕಿಸಿದ ಚಿತ್ರವನ್ನು ತಿರುಚಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಪರ್ದಿವಾಲಾ ಅವರು ನಕ್ಸಲ್‌ ಗುಂಪು ಮತ್ತು ಕಮ್ಯುನಿಸ್ಟರ ಜೊತೆ ಭೋಜನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನು ಪ್ರಶ್ನಿಸಿ ಸಿಕಂದ್‌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ರೀತಿ ತಿರುಚಿದ, ತಪ್ಪು ಮತ್ತು ಮಾನಹಾನಿಕಾರಕ ವಿಚಾರಗಳನ್ನು ವ್ಯಕ್ತಪಡಿಸುವ ಮೂಲಕ ತನ್ನ ಮತ್ತು ತನ್ನ ಅತಿಥಿಗಳ ಹಕ್ಕನ್ನು ಉಲ್ಲಂಘಿಸಲಾಗಿದೆ. ಇದರಿಂದ ತಮ್ಮ ಅತಿಥಿಗಳಿಗೆ ಘನತೆಗೆ ಭಾರಿ ಹಾನಿ ಮಾಡಿದಂತೆ ಎಂದು ಮನವಿಯಲ್ಲಿ ವಿವರಿಸಿದ್ದರು.

“ನೂಪುರ್‌ ಶರ್ಮಾ ಪ್ರಕರಣವನ್ನು ಆಲಿಸಿದ್ದ ಇಬ್ಬರು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಪರ್ದಿವಾಲಾ ಅವರು ಅತಿಥಿಗಳ ಪೈಕಿ ಇರುವ ಇಬ್ಬರು ಎಂದು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ ಪೋಸ್ಟ್‌ಗಳನ್ನು ಹಂಚಿಕೊಂಡಿರುವುದು ಆಘಾತಕಾರಿ. ಇಂಥದ್ದೇ ಪೋಸ್ಟ್‌ಗಳನ್ನು ರಚಿಸಿ, ವಾಟ್ಸಾಪ್‌ ಗುಂಪುಗಳ ಮೂಲಕ ಹಲವರಿಗೆ ಹಂಚಿಕೆ ಮಾಡಲಾಗಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಚಿತ್ರದಲ್ಲಿರುವ ಇಬ್ಬರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಲ್ಲ ಎಂದು ಕೆಲವು ಜವಾಬ್ದಾರಿಯುತ ವೆಬ್‌ಸೈಟ್‌ಗಳು ಸ್ಪಷ್ಟನೆ ಒಳಗೊಂಡ ಸುದ್ದಿಗಳನ್ನು ಪ್ರಕಟಿಸಿವೆ. ಆದರೆ, ಅದಾಗಲೇ ಸುಳ್ಳು ಸುದ್ದಿಯು ಕಾಳ್ಗಿಚ್ಚಿನಂತೆ ಹಬ್ಬಿದೆ. ಸದರಿ ಚಿತ್ರವನ್ನು ಹಂಚಿಕೊಂಡಿದ್ದ ಜಗದೀಶ್‌ ಲಕ್ಷ್ಮಣ್‌ ಸಿಂಗ್‌, ಸಿದ್ಧಾರ್ಥ್‌ ಡೇ ಮತ್ತು ಸೋನಾಲಿಕಾ ಕುಮಾರ್‌ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com