ಜೆಡಿಎಸ್ ಚಿಹ್ನೆ ಬಳಸದಂತೆ, ಪದಾಧಿಕಾರಿಗಳ ನೇಮಕ ಮಾಡದಂತೆ ಸಿ ಎಂ ಇಬ್ರಾಹಿಂಗೆ ಬೆಂಗಳೂರು ನ್ಯಾಯಾಲಯ ಆದೇಶ

ಇಬ್ರಾಹಿಂ ಅವರು ಜೆಡಿಎಸ್ನಿಂದ ಉಚ್ಚಾಟನೆಗೊಂಡಿದ್ದರೂ ಪಕ್ಷದ ಚಿಹ್ನೆ ಹೆಸರು ಬಳಸುತ್ತಿರುವುದನ್ನು ಪ್ರಶ್ನಿಸಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎ ಪಿ ರಂಗನಾಥ ಅವರು ಅರ್ಜಿ ಸಲ್ಲಿಸಿದ್ದರು.
ಎಚ್ ಡಿ ದೇವೇಗೌಡ, ಸಿ ಎಂ ಇಬ್ರಾಹಿಂ ಹಾಗೂ ಎಚ್ ಡಿ ಕುಮಾರಸ್ವಾಮಿ, ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ
ಎಚ್ ಡಿ ದೇವೇಗೌಡ, ಸಿ ಎಂ ಇಬ್ರಾಹಿಂ ಹಾಗೂ ಎಚ್ ಡಿ ಕುಮಾರಸ್ವಾಮಿ, ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ
Published on

ಜೆಡಿಎಸ್‌ ಉಚ್ಚಾಟಿತ ಅಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಪಕ್ಷದ ಚಿಹ್ನೆ, ಲೆಟರ್‌ ಹೆಡ್‌ ಬಳಸುವಂತಿಲ್ಲ ಸುದ್ದಿಗೋಷ್ಠಿ ಹಮ್ಮಿಕೊಳ್ಳುವಂತಿಲ್ಲ ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತಿಲ್ಲ ಎಂದು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯ ಶನಿವಾರ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿದೆ.

ಇಬ್ರಾಹಿಂ ಅವರು ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದರೂ ಪಕ್ಷದ ಚಿಹ್ನೆ ಹೆಸರು ಬಳಸುತ್ತಿರುವುದನ್ನು ಪ್ರಶ್ನಿಸಿ ಜೆಡಿಎಸ್‌‌ ಪ್ರಧಾನ ಕಾರ್ಯದರ್ಶಿ ಎ ಪಿ ರಂಗನಾಥ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ 9ನೇ ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿದ್ದು ಪ್ರಕರಣವನ್ನು 12 ಫೆಬ್ರವರಿ 2024ಕ್ಕೆ ಮುಂದೂಡಲಾಗಿದೆ.

ನೋಟಿಸ್‌ ನೀಡುವ ಸಂಬಂಧ ಸೂಕ್ತ ಆದೇಶ ರವಾನಿಸದಿದ್ದರೆ ನೋಟಿಸ್‌ ನೀಡುವಲ್ಲಿ ವಿಳಂಬ ಉಂಟಾಗಿ ಅರ್ಜಿದಾರರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳಲ್ಲಿ ಅರ್ಜಿದಾರ ತೊಂದರೆ ಮತ್ತು ಅನ್ಯಾಯಕ್ಕೆ ತುತ್ತಾಗುತ್ತಾನೆ. ವಿಳಂಬದಿಂದಾಗಿ ನಿರ್ಬಂಧಕಾಜ್ಞೆ ನೀಡುವ ಉದ್ದೇಶಕ್ಕೆ ಸೋಲುಂಟಾಗುತ್ತದೆ. ಪ್ರಕರಣದ ಸಂದರ್ಭ ಮತ್ತು ಸನ್ನಿವೇಶ ಗಮನಿಸಿ ಮುಂದಿನ ವಿಚಾರಣೆಯವರೆಗೆ ಅರ್ಜಿದಾರರು ಮನವಿ ಮಾಡಿದಂತೆ ಮಧ್ಯಂತರ ನಿರ್ಬಂಧಕಾಜ್ಞೆ ನೀಡುತ್ತಿರುವುದಾಗಿ ನ್ಯಾಯಾಲಯದ ಆದೇಶ ತಿಳಿಸಿದೆ.

ಅವರನ್ನು ಅಧ್ಯಕ್ಷ ಹುದ್ದೆಯಿಂದ ಉಚ್ಚಾಟಿಸಿರುವುದರಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಅವರು ಕೈಗೊಂಡ ಕ್ರಮಗಳು , ನಿರ್ಣಯಗಳು ಹಾಗೂ ನೀಡಿದ ಆದೇಶಗಳನ್ನು ಅಕ್ರಮ, ನಿರಂಕುಶ, ಅಧಿಕಾರರಹಿತ, ಅನೂರ್ಜಿತ ಹಾಗೂ ನಿರರ್ಥಕ ಎಂದು ಘೋಷಿಸಬೇಕು ಎಂದು ಎ ಪಿ ರಂಗನಾಥ ಕೋರಿದ್ದರು.

ಇಬ್ರಾಹಿಂ ಅವರು ಈ ವರ್ಷದ ಜನವರಿ 9 ರಿಂದ19ರವರೆಗೆ ಪಕ್ಷಕ್ಕೆ 2ರಿಂದ 8ನೇ ಪ್ರತಿವಾದಿಗಳ ನೇಮಕಾತಿ ಮಾಡಿದ್ದು ಅದನ್ನು ರದ್ದುಗೊಳಿಸಬೇಕು. ಅಲ್ಲದೆ ಇಬ್ರಾಹಿಂಣ ಅವರು ಪಕ್ಷದ ಹೆಸರು, ಚಿಹ್ನೆ, ಲೆಟರ್‌ ಹೆಡ್‌ ಹಾಗೂ ಪತ್ರ ವ್ಯವಹಾರ ನಡೆಸದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂಬುದಾಗಿ ರಂಗನಾಥ ವಿನಂತಿಸಿದ್ದರು.

ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದಕ್ಕೆ ಹಾಗೂ ಅವರು ಜೆಡಿಎಸ್‌ ಜೊತೆ ಗುರುತಿಸಿಕೊಳ್ಳುವುದಕ್ಕೆ ಶಾಶ್ವತ ನಿರ್ಬಂಧ ಹೇರಬೇಕು. ಜೊತೆಗೆ 2ರಿಂದ 8ನೇ ಪ್ರತಿವಾದಿಗಳು ಪದಾಧಿಕಾರಿಗಳಾಗಿ ಮುಂದುವರೆಯದಂತೆ ತಡೆ ಬೀಡಬೇಕು ಎಂದು ಅವರು ಮನವಿ ಮಾಡಿದ್ದರು.

ಇಬ್ರಾಹಿಂ ಅವರಲ್ಲದೆ ಇಮ್ರಾನ್‌ ಪಾಷಾ, ಉಮಾದೇವಿ, ಲಕ್ಷ್ಮೀ ಬಿ, ಹೆನ್ರಿಟಾ ಮಾರಿಯಾ, ಥೆರೇಸಾ ಬೋಸ್‌, ಎಸ್‌ ವಹೀದಾ ಬಾನು ಹಾಗೂ ನಜೀಮ್‌ ಅವರನ್ನು ಪ್ರಕರಣದ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

Kannada Bar & Bench
kannada.barandbench.com