ಯಶ್‌ ನಟನೆಯ ಟಾಕ್ಸಿಕ್‌ ಚಿತ್ರದ ಕುರಿತು ಮಾನಹಾನಿ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾದೇಶ ಮಾಡಿದ ಬೆಂಗಳೂರು ನ್ಯಾಯಾಲಯ

ಸಿನಿಮಾ ಬಿಡುಗಡೆ ಪೂರ್ವ ಮತ್ತು ಬಿಡುಗಡೆ ನಂತರದಲ್ಲಿ ಟಾಕ್ಸಿಕ್‌ ಚಿತ್ರದ ಬಗ್ಗೆ ಯಾವುದೇ ಮಾಧ್ಯಮದ ಮೂಲಕವೂ ಯಾರೂ ಸಹ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಮತ್ತು ಅವಹೇಳನಕಾರಿ ಸುದ್ದಿ ಪ್ರಕಟಿಸಿ ಪ್ರಸಾರ ಮಾಡಬಾರದು ಎಂದಿರುವ ನ್ಯಾಯಾಲಯ.
ಯಶ್‌ ನಟನೆಯ ಟಾಕ್ಸಿಕ್‌ ಚಿತ್ರದ ಕುರಿತು ಮಾನಹಾನಿ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾದೇಶ ಮಾಡಿದ ಬೆಂಗಳೂರು ನ್ಯಾಯಾಲಯ
Published on

ಕನ್ನಡದ ನಟ ಯಶ್‌ ನಟನೆಯ ಟಾಕ್ಸಿಕ್‌ ಚಿತ್ರದ ಬಗ್ಗೆ ಯಾವುದೇ ರೀತಿಯ ಸುಳ್ಳು ಹಾಗೂ ಮಾನಹಾನಿಕರ ಸುದ್ದಿ ಪ್ರಕಟಿಸಬಾರದು ಮತ್ತು ಪ್ರಸಾರ ಮಾಡಬಾರದು ಎಂದು  ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ಮಧ್ಯಂತರ ಪ್ರತಿಬಂಧಕಾದೇಶ ಹೊರಡಿಸಿದೆ.

ಟಾಕ್ಸಿಕ್‌ ಚಿತ್ರದ ಬಗ್ಗೆ ಯಾರೊಬ್ಬರು ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಮತ್ತು  ಅವಹೇಳನಕಾರಿ ಸುದ್ದಿಯನ್ನು ಪ್ರಕಟಿಸಿ ಪ್ರಸಾರ ಮಾಡಬಾರದು ಹಾಗೂ ಪೋಸ್ಟ್‌ ಹಾಕಬಾರದು ಮತ್ತು ಹಂಚಿಕೆ ಮಾಡಬಾರದು ಎಂಬುದಾಗಿ ಪ್ರತಿಬಂಧಕಾದೇಶ ಹೊರಡಿಸಬೇಕು ಎಂದು ಕೋರಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್ಸ್‌ ದಾವೆ ಸಲ್ಲಿಸಿತ್ತು. ಈ ದಾವೆಯ ವಿಚಾರಣೆ ನಡೆಸಿದ ನಗರದ 36ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೀವನರಾವ್‌ ಕುಲಕರ್ಣಿ ಅವರು ಸಿನಿಮಾ ಬಿಡುಗಡೆ ಪೂರ್ವ ಮತ್ತು ಬಿಡುಗಡೆ ನಂತರದಲ್ಲಿ ಟಾಕ್ಸಿಕ್‌ ಚಿತ್ರದ ಬಗ್ಗೆ ಯಾವುದೇ ಮಾಧ್ಯಮದ ಮೂಲಕವೂ ಯಾರೂ ಸಹ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಮತ್ತು ಅವಹೇಳನಕಾರಿ ಸುದ್ದಿ ಪ್ರಕಟಿಸಿ ಪ್ರಸಾರ ಮಾಡಬಾರದು. ಪೋಸ್ಟ್‌ ಹಾಕಬಾರದು ಹಾಗೂ ಹಂಚಿಕೆ ಮಾಡಬಾರದು. ಈ ಆದೇಶವು ಸೆಪ್ಟೆಂಬರ್‌ 28ರವರೆಗೆ ಜಾರಿಯಲ್ಲಿರುತ್ತದೆ ಎಂದು ಮಧ್ಯಂತರ ಆದೇಶ ಮಾಡಿದೆ.

ಮಂಜೂರು ಮಾಡಿರುವ ಉದ್ದೇಶವಲ್ಲದೆ ಮತ್ಯಾವುದೇ ಉದ್ದೇಶಕ್ಕೆ ಈ ಆದೇಶವನ್ನು ದಾವೆದಾರರು (ಕೆವಿಎನ್‌ ಪ್ರೊಡಕ್ಷನ್ಸ್‌) ಬಳಸಬಾರದು. ಒಂದು ವೇಳೆ ಈ ಷರತ್ತು ಉಲ್ಲಂಘಿಸಿದರೆ, ಮಧ್ಯಂತರ ಆದೇಶವು ಸ್ವಯಂಚಾಲಿತವಾಗಿ ತೆರವಾಗಲಿದೆ ಎಂದು ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ.

Kannada Bar & Bench
kannada.barandbench.com