

ಬ್ಯಾನರ್ ಅಳವಡಿಕೆ ವಿಚಾರವಾಗಿ ಬಳ್ಳಾರಿಯಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಭೆ ಪ್ರಕರಣದಲ್ಲಿ ಬಂಧಿಸಲಾಗಿರುವ 26 ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಬಳ್ಳಾರಿ ಬ್ರೂಸ್‌ಪೇಟೆ ಠಾಣೆ ಪೊಲೀಸರು ಬಂಧಿಸಿರುವ 26 ಮಂದಿ ಆರೋಪಿಗಳನ್ನು ಸೋಮವಾರ ಬೆಳಿಗ್ಗೆ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಕುರಿತು ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಗಳನ್ನು ಜನವರಿ 19ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು. ಬಳಿಕ ಪೊಲೀಸರು ಭಾರೀ ಭದ್ರತೆಯಲ್ಲಿ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.
ಇದಕ್ಕೂ ಮುನ್ನ, ನ್ಯಾಯಾಧೀಶರು ಆರೋಪಿಗಳನ್ನು ಕುರಿತು “ನಿಮ್ಮ ಬಂಧನದ ಬಗ್ಗೆ ನಿಮ್ಮ ಕುಟುಂಬಕ್ಕೆ ಮಾಹಿತಿ ಇದೆಯೇ” ಎಂದು ಕೇಳಿದರು. ಇದಕ್ಕೆ ಎಲ್ಲ ಆರೋಪಿಗಳು “ಗೊತ್ತಿದೆ” ಎಂದು ಉತ್ತರಿಸಿದರು. ಬಳಿಕ “ಎಲ್ಲಾ ಆರೋಪಿಗಳಿಗೂ ಒಂದೇ ಬಂಧನದ ಮೆಮೊ ನೀಡಿರುವುದು ಏಕೆ? ಪ್ರತ್ಯೇಕ ಮೆಮೊ ಏಕೆ ಕೊಟ್ಟಿಲ್ಲ” ಎಂದು ತನಿಖಾಧಿಕಾರಿ ವಿರುದ್ಧ ಗರಂ ಆದರು. ಇದೇ ವೇಳೆ ಪೊಲೀಸರು ಆರೋಪಿಗಳಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದರು.
ಪ್ರಕರಣದ ಪ್ರಮುಖ ಆರೋಪಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಕುರಿತು “ಯಾವಾಗ ಪೊಲೀಸರು ಬಂಧಿಸಿದರು” ಎಂದು ನ್ಯಾಯಾಧೀಶರು ಕೇಳಿದರು. ಇದಕ್ಕೆ ಹಿಂದಿಯಲ್ಲಿ ನಿನ್ನೆ ಎಂದು ಆತ ಹೇಳಿದ. ನಿಮ್ಮ ಪರ ವಕಾಲತ್ತು ವಹಿಸಲು ವಕೀಲರು ಇದ್ದಾರೆಯೇ ಎಂದು ಕೇಳಿದರು. ಇದಕ್ಕೆ ಯಾರೂ ಇಲ್ಲ ಎಂದು ಗುರಚರಣ್ ಸಿಂಗ್ ಹೇಳಿದರು. ನಿಮ್ಮದು ಯಾವ ಯಾರು ಎಂದು ನ್ಯಾಯಾಧೀಶರು ಕೇಳಿದಾಗ, ಪಂಜಾಬ್ ಎಂದು ಉತ್ತರಿಸಿದರು.
ಈ ವೇಳೆ ಮತ್ತೆ ಬ್ರೂಸ್ ಪೇಟೆ ಪೊಲೀಸರ ವಿರುದ್ಧ ಗರಂ ಆದ ನ್ಯಾಯಾಧೀಶರು, “ನಿಮಗೆ ಕಾಮನ್ ಸೆನ್ಸ್ ಇಲ್ವಾ? ಆರೋಪಿಗೆ ಬಂಧನ ವಾರೆಂಟ್ ಬಗ್ಗೆ ತಿಳಿಸಬೇಕಲ್ಲವೇ? ಬಳ್ಳಾರಿಯಿಂದ ಕರೆದುಕೊಂಡು ಬರುವುದಲ್ಲಾ. ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಲು ಬರುವುದಿಲ್ಲವೇ” ಎಂದು ತರಾಟೆಗೆ ತೆಗೆದುಕೊಂಡರು.
ಕಾರ್ತಿಕ್, ಮುಕ್ಕಣ್ಣ, ಇನಾಯತುಲ್ಲಾ, ರಾಜು, ಮುಸ್ತಫಾ, ಶ್ರೀಕಾಂತ್, ಮೊಹಮಮ್ದ್ ರಸೂಲ್, ಬಾಬು, ವೆಂಕಟೇಶ್, ಮಾಬಾಷ, ಗುರುಪ್ರಸಾದ್, ವಸುಂಧರ, ಶಿವಕುಮಾರ್, ಸಚಿನ್, ಅಬ್ದುಲ್ ರಜಾಕ್, ಬಜ್ಜಯ್ಯ, ಎಂ ತಿಮ್ಮಪ್ಪ, ಗುಂಡಾಲಿ ಶ್ರೀನಿವಾಸ್, ಕೆ ಬಿ ಲಕ್ಷ್ಮಣ, ಪಿ ಶ್ರೀನಿವಾಸ್ ರೆಡ್ಡಿ, ಪೋತಪ್ಪ, ಷಡಕ್ಷರಿ, ರವಿಬಾಬು, ರವಿಕುಮಾರ್, ರಂಗಸ್ವಾಮಿ ಇತರೆ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ಸಿರುಗುಪ್ಪ ರಸ್ತೆಯ ಅವ್ವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರು ಮಹರ್ಷಿ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಗಲಭೆ ನಡೆದು ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದರು. ಈ ಸಂಬಂಧ ಆರು ಎಫ್‌ಐಆರ್ ದಾಖಲಾಗಿವೆ.
ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣದಲ್ಲಿ ಬಿಜೆಪಿಯ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಬಿ ಶ್ರೀರಾಮುಲು ಮತ್ತಿತರರನ್ನು ಆರೋಪಿಗಳನ್ನಾಗಿಸಲಾಗಿದೆ ಎನ್ನಲಾಗಿದೆ.