

ಉದ್ಯಮಿ ಕೆ ರಘುನಾಥ್ ಆತ್ಮಹತ್ಯೆ, ಅವರ ಆಸ್ತಿಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಪ್ರಕರಣದಲ್ಲಿ ಮಾಜಿ ಸಂಸದ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ಮಾಜಿ ಅಧ್ಯಕ್ಷ ಡಿ ಕೆ ಆದಿಕೇಶವಲು ನಾಯ್ಡು ಅವರ ಪುತ್ರಿ ಹಾಗೂ ವೈದೇಹಿ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಡಿ ಎ ಕಲ್ಪಜಾ ಹಾಗೂ ಪೊಲೀಸ್ ಅಧಿಕಾರಿ ಎಸ್ ವೈ ಮೋಹನ್ ಅವರಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಕಲ್ಪಜಾ ಮತ್ತು ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು 17ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಭವಾನಿ ಎಂ ಜೆ ಅವರು ಮಂಗಳವಾರ ಪುರಸ್ಕರಿಸಿದ್ದಾರೆ.
ಅರ್ಜಿದಾರರು ತಲಾ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಉದ್ಯಮಿ ಕೆ ರಘುನಾಥ್ ಆತ್ಮಹತ್ಯೆ, ಅವರ ಆಸ್ತಿಗಳಿಗೆ ಸಂಬಂಧ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಕೇಶವಲು ಪುತ್ರ ಡಿ ಎ ಶ್ರೀನಿವಾಸ್ ಅವರ ವಿರುದ್ಧ ಸಿಬಿಐ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದೆ. ಈ ಪೈಕಿ ಹಾಲಿ ಪ್ರಕರಣವೂ ಸೇರಿ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ, ಕ್ರಿಮಿನಲ್ ಪಿತೂರಿ, ನಕಲಿ ದಾಖಲೆ ಸೃಷ್ಟಿ, ಸ್ಟ್ಯಾಂಪ್ ಪೇಪರ್ ಮತ್ತು ಸರ್ಕಾರದ ಸೀಲ್‌ಗಳ ದುರ್ಬಳಕೆ ಪ್ರಕರಣದಲ್ಲಿ ((ಐಪಿಸಿ ಸೆಕ್ಷನ್‌ಗಳಾದ 255, 256, 257, 258, 259, 260 ಮತ್ತು 420) 2026ರ ಜನವರಿ 12ರಂದು ಬೆಂಗಳೂರಿನ ಸತ್ರ ನ್ಯಾಯಾಲಯವು ಜಾಮೀನು ನಿರಾಕರಿಸಿರುವುದರಿಂದ ಅವರ ಜೈಲು ವಾಸ ಮುಂದುವರಿದಿದೆ.