ಬೆಂಗಳೂರಿನ ನಿವಾಸಿಯಿಂದ ಆಫ್ರಿಕನ್ ಗ್ರೇ ಗಿಳಿ ವಶ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ

ವಶಪಡಿಸಿಕೊಂಡಿರುವ ಸಾಕು ‘ಆಫ್ರಿಕನ್ ಗ್ರೇ’ ಗಿಳಿಯನ್ನು ಮರಳಿಸಲು ಸರ್ಕಾರ ಮತ್ತು ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ನಿರ್ದೇಶಿಸುವಂತೆ ಕೋರಿ ರಾಜಾಜಿನಗರದ ನಿವಾಸಿ ಆರ್ ಮಹೇಶ್‌ ಕುಮಾರ್ ಕೋರಿದ್ದಾರೆ.
African grey parrot
African grey parrot
Published on: 

ಅಪರಾಧ ತನಿಖಾ ದಳ (ಸಿಐಡಿ) ಅರಣ್ಯ ಸಂಚಾರಿ ದಳವು ಬೆಂಗಳೂರಿನ ನಿವಾಸಿಯಿಂದ ವಶಪಡಿಸಿಕೊಂಡಿರುವ ‘ಆಫ್ರಿಕನ್ ಗ್ರೇ ಗಿಳಿ’ಯನ್ನು ಮರಳಿಸುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ವಶಪಡಿಸಿಕೊಂಡಿರುವ ಸಾಕು ‘ಆಫ್ರಿಕನ್ ಗ್ರೇ’ ಗಿಳಿಯನ್ನು ಮರಳಿಸಲು ಸರ್ಕಾರ ಮತ್ತು ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ನಿರ್ದೇಶಿಸುವಂತೆ ಕೋರಿ ರಾಜಾಜಿನಗರದ ನಿವಾಸಿ ಆರ್ ಮಹೇಶ್‌ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice CM Poonacha
Justice CM Poonacha

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ನೋಟಿಸ್‌ ಜಾರಿ ಮಾಡಿತು. ಅಲ್ಲದೆ, ಅರ್ಜಿ ಕುರಿತು ಪ್ರತಿವಾದಿಗಳಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್‌ 3ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ನಾನು ಹಕ್ಕಿ ಪ್ರೇಮಿಯಾಗಿದ್ದೇನೆ. ನನಗೆ 2018ರಲ್ಲಿ ಸ್ನೇಹಿತರೊಬ್ಬರು ಅಂಗವೈಕಲ್ಯದ ‘ಆಫ್ರೀಕನ್‌ ಗ್ರೇ ಗಿಳಿ’ (ಸಿಟಾಕಸ್‌ ಎರಿಥಕಸ್‌) ಅನ್ನು ನೀಡಿದ್ದರು. ಒಂದು ರೆಕ್ಕೆಯಲ್ಲಿ ಚಲನೆಯಿಲ್ಲದಕ್ಕೆ ಆ ಗಿಳಿಗೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಪ್ರೀತಿ ಹಾಗೂ ಮಾನವೀಯತೆಯಿಂದ ಆ ಗಿಳಿಗೆ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಮೂಲಕ ಆರೈಕೆ ಮಾಡಿದೆ. ಆದರೆ, ಸಿಐಡಿ ಅರಣ್ಯ ಸಂಚಾರಿ ದಳ ಅಧಿಕಾರಿಯು 2026ರ ಜುಲೈ 27ರಂದು ಆ ಗಿಳಿಯನ್ನು ತಮ್ಮ ವಶಕ್ಕೆ ಪಡೆದರು. ನಂತರ ಗಿಳಿಯನ್ನು ಸುಪರ್ದಿಯಲ್ಲಿಟ್ಟುಕೊಂಡಿರುವ ಬಗ್ಗೆ ವಿವರಣೆ ನೀಡುವಂತೆ ನನಗೆ ನೋಟಿಸ್‌ ನೀಡಿದರು ಎಂದು ಅರ್ಜಿದಾರ ವಿವರಿಸಿದ್ದಾರೆ.

ಅಲ್ಲದೆ, 2026ರ ಜುಲೈ 31ರಂದು ನನ್ನ ವಿರುದ್ಧ ಸೂಚನಾ ಪತ್ರ ಹೊರಡಿಸಿ, ಪ್ರಕರಣದ ತನಿಖೆಗೆ ಸಹಕರಿಸಬೇಕು. ಅಗತ್ಯ ದಾಖಲೆ ಹಾಜರುಪಡಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನಾಶ ಮಾಡಬಾರದು. ಈ ನಿರ್ದೇಶಗಳನ್ನು ಉಲ್ಲಂಘಿಸಿದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್‌ 35(3) ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿದ್ದಾರೆ. ವಾಸ್ತವವಾಗಿ ನಾನು ಆ ಗಿಳಿಯನ್ನು ಖರೀದಿಸಿಲ್ಲ ಹಾಗೂ ಮಾರಾಟಕ್ಕೆ ಯತ್ನಿಸಿಲ್ಲ. ಅಂಗೈಕಲ್ಯದ ಆ ಗಿಳಿಯನ್ನು ಆರೈಕೆ ಮಾಡುತ್ತಿದ್ದೇನೆ. ಆದ್ದರಿಂದ ಷೋಕಾಸ್‌ ನೋಟಿಸ್‌ ರದ್ದುಪಡಿಸಿ, ನನ್ನ ಸುಪರ್ದಿಗೆ ಗಿಳಿಯನ್ನು ಮರಳಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರ ಕೋರಿದ್ದಾರೆ.

Kannada Bar & Bench
kannada.barandbench.com