ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಬಹುದೊಡ್ಡ ಹಗರಣ, ರೈತರ ಭೂಮಿ ದರೋಡೆ: ಕರ್ನಾಟಕ ಹೈಕೋರ್ಟ್‌

ನೈಸ್‌ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಡಿ ಕೆ ಸಿಂಗ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠವು ವಜಾಗೊಳಿಸಿದೆ.
ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಬಹುದೊಡ್ಡ ಹಗರಣ, ರೈತರ ಭೂಮಿ ದರೋಡೆ: ಕರ್ನಾಟಕ ಹೈಕೋರ್ಟ್‌
Published on

ನಂದಿ ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಕೈಗೊಂಡಿರುವ ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿಪಿ) ರಾಜ್ಯದ ಬಹುದೊಡ್ಡ ಹಗರಣ ಎಂದು ಬುಧವಾರ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ಹೊರಡಿಸಿದೆ.

ನೈಸ್‌ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಡಿ ಕೆ ಸಿಂಗ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠವು ವಜಾಗೊಳಿಸಿ, ಮೇಲಿನಂತೆ ಹೇಳಿದೆ.

Justices D K Singh & T M Nadaf
Justices D K Singh & T M Nadaf

ಎರಡು ದಶಕಗಳಾದರೂ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನಿಗದಿಪಡಿಸದಿರುವುದನ್ನು ಪರಿಗಣಿಸಿ ಏಕಸದಸ್ಯ ಪೀಠವು ಸಾವಿರಾರು ಎಕರೆ ಭೂಸ್ವಾಧೀನವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ನೈಸ್‌ ಮತ್ತು ಕೆಐಎಡಿಬಿ ಮೇಲ್ಮನವಿ ಸಲ್ಲಿಸಿದ್ದವು.

“ಕರ್ನಾಟಕದಲ್ಲಿ ಬಿಎಂಐಸಿಪಿಯು ಒಂದು ಬಹುದೊಡ್ಡ ಹಗರಣದಂತೆ ಭಾಸವಾಗುತ್ತಿದೆ. ಜನರ ಪರವಾಗಿ ನೈಸರ್ಗಿಕ ಸಂಪನ್ಮೂಲ ರಕ್ಷಿಸಬೇಕಾದ ಸರ್ಕಾರವು ಸಾಂವಿಧಾನಿಕ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಖಾಸಗಿ ಹಿತಾಸಕ್ತಿಗಳು ಮೇಳೈಸುವಂತೆ ಮಾಡಿರುವುದು ಸ್ಪಷ್ಟ ಉದಾಹರಣೆಯಂತಿದೆ” ಎಂದು ನ್ಯಾಯಾಲಯ ಹೇಳಿದೆ.

“ರೈತರನ್ನು ದರೋಡೆ ಮಾಡಿ ಅವರ ಭೂಮಿ ಮತ್ತು ಜೀವನೋಪಾಯ ಕಿತ್ತುಕೊಂಡು ಅವರಿಗೆ ಪರಿಹಾರ ನೀಡದಿರುವುದನ್ನು ನೋಡಿದರೆ ನೈಸ್‌ ಯೋಜನೆಯಲ್ಲಿ ಏನೂ ಒಳ್ಳೆಯದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

"ನೈಸ್ ಯೋಜನೆಯು ಭೂಮಾಲೀಕರಿಗೆ ನಷ್ಟ ಉಂಟು ಮಾಡಿ, ಸಾರ್ವಜನಿಕ ಹಿತಾಸಕ್ತಿಯನ್ನು ಬಲಿಕೊಟ್ಟು ಅದರ ಪ್ರತಿಪಾದಕರಿಗೆ ಅಪಾರ ಲಾಭ ತಂದುಕೊಟ್ಟಿದೆ" ಎಂದು ಹೈಕೋರ್ಟ್‌ ವ್ಯಾಖ್ಯಾನಿಸಿದೆ.

1997ರ ಏಪ್ರಿಲ್‌ನಲ್ಲಿ ಕರ್ನಾಟಕ ಸರ್ಕಾರ ಮತ್ತು ನೈಸ್‌ ನಡುವೆ ಜಾರಿಗೆ ಬಂದ ಒಪ್ಪಂದದಡಿ ಬಿಎಂಐಸಿಪಿಯನ್ನು ಸಮಗ್ರ ಮೂಲಸೌಕರ್ಯ ಯೋಜನೆಯಾಗಿ ಅಭಿವೃದ್ಧಿಗೊಳಿಸಲು ಒಪ್ಪಂದವಾಗಿತ್ತು. ಇದು 111-ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ, 41-ಕಿಲೋಮೀಟರ್ ಪೆರಿಫೆರಲ್ ರಸ್ತೆ, 9.8-ಕಿಲೋಮೀಟರ್ ಲಿಂಕ್ ರಸ್ತೆ ಮತ್ತು ಐದು ಸ್ವಾವಲಂಬಿ ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಭಾಗವಾಗಿತ್ತು. ಇದಕ್ಕಾಗಿ 1998 ಮತ್ತು 2009 ರ ನಡುವೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯಿದೆ, 1966 ರ ಅಡಿಯಲ್ಲಿ ಸುಮಾರು 20,193 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. 2003 ಮತ್ತು 2009ರ ನಡುವೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದಾಗ್ಯೂ, 23 ವರ್ಷಗಳ ನಂತರವೂ ಭೂಮಾಲೀಕರಿಗೆ ಸಂಬಂಧಿಸಿದಂತೆ ಪರಿಹಾರವನ್ನು ನಿರ್ಧರಿಸುವ ಯಾವುದೇ ನಿರ್ಧಾರವಾಗಿರಲಿಲ್ಲ.

ಕಳೆದ ವರ್ಷ ಏಕಸದಸ್ಯ ಪೀಠವು ಅರ್ಜಿದಾರರ ಭೂಮಿಗೆ ಸಂಬಂಧಿಸಿದಂತೆ ಮಾತ್ರ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಎರಡು ದಶಕಗಳನ್ನು ಮೀರಿದ ವಿಳಂಬದ ಹೊರತಾಗಿಯೂ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲವಾದ್ದರಿಂದ ವಿಚಾರಣೆಯು ಅನಿರ್ದಿಷ್ಟವಾಗಿ ಬಾಕಿ ಉಳಿಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.

ಭೂಮಾಲೀಕರು ಬಿಎಂಐಸಿಪಿಯ ಸಿಂಧುತ್ವ ಅಥವಾ ಸುಪ್ರೀಂ ಕೋರ್ಟ್ ಈ ಹಿಂದೆ ಎತ್ತಿಹಿಡಿದ ಸ್ವಾಧೀನ ಅಧಿಸೂಚನೆಗಳನ್ನು ವಿಚಾರಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಧಿಕಾರಿಗಳು ಪರಿಹಾರ ನಿರ್ಧರಿಸಲು ವಿಫಲರಾದ ಕಾರಣ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕೆಐಎಡಿ ಕಾಯಿದೆಯ ಸೆಕ್ಷನ್ 28 ರ ಅಡಿಯಲ್ಲಿ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡ ನಂತರ ಆ ಸ್ವಾಧೀನವನ್ನು ರದ್ದುಗೊಳಿಸಲಾಗದು ಎಂಬ ವಾದವನ್ನು ವಿಭಾಗೀಯ ಪೀಠ ತಿರಸ್ಕರಿಸಿದೆ. ಶಾಸನಬದ್ಧವಾಗಿ ಭೂಮಿ ವಶಪಡಿಸಿಕೊಂಡಿರುವ ಸರ್ಕಾರವು ಸಮಂಜಸವಾದ ಅವಧಿಯೊಳಗೆ ಪರಿಹಾರವನ್ನು ನಿರ್ಧರಿಸುವ ಮತ್ತು ಪಾವತಿಸುವ ಬಾಧ್ಯತೆಯಿಂದ ಮುಕ್ತವಾಗುವುದಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

"ಹಕ್ಕುಸ್ವಾಮ್ಯದ ಪ್ರಶ್ನೆಗೆ ಉತ್ತರವನ್ನು ನೀಡುವುದು, ನಾಗರಿಕರ ಜನರ ಆಸ್ತಿಯನ್ನು ಕಸಿದುಕೊಂಡ ನಂತರ ರಾಜ್ಯವು ಪರಿಹಾರ ಪಾವತಿಯನ್ನು ಅನಿರ್ದಿಷ್ಟವಾಗಿ ಮುಂದೂಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಕೆಐಎಡಿ ಕಾಯಿದೆಯಲ್ಲಿ ಪರಿಹಾರವನ್ನು ನಿರ್ಧರಿಸುವ ಕುರಿತು ಸ್ಪಷ್ಟಪಡಿಸಿಲ್ಲ ಎಂಬುದನ್ನು ಒಪ್ಪಿರುವ ಪೀಠವು ಶಾಸನಬದ್ಧ ಸಮಯದ ಮಿತಿಯ ಅನುಪಸ್ಥಿತಿಯನ್ನು ಪರಿಹಾರ ವಿತರಿಸಲು ಅನಿರ್ದಿಷ್ಟವಾಗಿ ಮುಂದೂಡಲು ಅನಿಯಂತ್ರಿತ ಪರವಾನಗಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕಟುವಾಗು ನುಡಿದಿದೆ.

ಸರ್ಕಾರ ಪರಿಹಾರ ನಿರ್ಧರಿಸುವಲ್ಲಿ ನಿರಂತರ ವಿಫಲವಾಗಿರುವುದು ರೈತರು ತಮ್ಮ ಭೂಮಿಯನ್ನು ಪರಭಾರೆ ಮಾಡುವುದು, ಅಭಿವೃದ್ಧಿಪಡಿಸುವುದು, ಸಾಗುವಳಿ ಮಾಡುವುದು, ಅಡಮಾನ ಇಡುವುದು ಅಥವಾ ಬೇರೆ ರೀತಿಯಲ್ಲಿ ವ್ಯವಹರಿಸುವುದನ್ನು ತಡೆದಿದೆ ಎಂದು ನ್ಯಾಯಾಲಯ ಹೇಳಿದೆ. ಇಂತಹ ಪರಿಸ್ಥಿತಿ ಮುಂದುವರಿಯಲು ಅವಕಾಶ ನೀಡುವುದರಿಂದ 300A ವಿಧಿಯ ಅಡಿಯಲ್ಲಿ ಆಸ್ತಿಯ ಸಾಂವಿಧಾನಿಕ ಹಕ್ಕನ್ನು ಕೇವಲ ಔಪಚಾರಿಕತೆಗೆ ಸೀಮಿತಗೊಳಿಸುತ್ತದೆ ಎಂದು ಅದು ಹೇಳಿದೆ.

ಬಿಎಂಐಸಿಪಿ ಮತ್ತು ಅದರ ಮೂಲ ಸಾರ್ವಜನಿಕ ಉದ್ದೇಶವನ್ನು ಎತ್ತಿಹಿಡಿದಿದ್ದ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳು ಪ್ರಸ್ತುತ ಪ್ರಕ್ರಿಯೆಗಳನ್ನು ತಡೆಯೊಡ್ಡಿವೆ ಎಂಬ ನೈಸ್‌ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು.

ಪರಿಹಾರ ಪಾವತಿಸದಿರುವುದು ಮತ್ತು ಯೋಜನೆ ಜಾರಿಗೊಳಿಸುವುದರಿಂದ ವಿಮುಖವಾಗಿರುವುದರಿಂದ ಹಾಲಿ ಪ್ರಕರಣ ಉದ್ಭವಿಸಿದ್ದು, ಇದನ್ನು ಹಿಂದಿನ ದಾವೆಯಲ್ಲಿ ಪರಿಗಣಿಸಲ್ಪಡದಿರುವುದರಿಂದ ಇದು ಮುನ್ನಲೆಗೆ ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ವರದಿ, ಮಾರಾಟ ಪತ್ರಗಳು, ಜಂಟಿ ಅಭಿವೃದ್ಧಿ ಒಪ್ಪಂದಗಳು ಮತ್ತು ನೈಸ್‌ನ ಹಣಕಾಸು ಹೇಳಿಕೆಗಳನ್ನು ಪೀಠವು ಮತ್ತಷ್ಟು ಪರಿಶೀಲಿಸಿತು. ಜುಲೈ 28ರಂದು ರಾಜ್ಯ ಸರ್ಕಾರ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಕಳೆದ 25 ರಿಂದ 26 ವರ್ಷಗಳಲ್ಲಿ ನೈಸ್‌ ಪ್ರಸ್ತಾವಿತ 111-ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇಯ 5 ಕಿಲೋಮೀಟರ್‌ಗಳನ್ನು ಮಾತ್ರ ನಿರ್ಮಿಸಿದೆ ಎಂದು ನ್ಯಾಯಾಲಯ ಹೇಳಿದೆ.

554 ಎಕರೆ ಹೆಚ್ಚುವರಿ ಭೂಮಿಯನ್ನು ನೈಸ್‌ಗೆ ಹಸ್ತಾಂತರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ರಾಜ್ಯ ಸರ್ಕಾರದ ಅಫಿಡವಿಟ್ ಅನ್ನು ನ್ಯಾಯಾಲಯವು ಉಲ್ಲೇಖಿಸಿದೆ. ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಖಾಸಗಿ ಡೆವಲಪರ್‌ಗಳೊಂದಿಗೆ ವಾಣಿಜ್ಯ ಒಪ್ಪಂದಗಳಿಗೆ ಒಳಪಡಿಸಲಾಗಿದೆ ಎಂದು ನ್ಯಾಯಾಲಯ ಕಂಡುಕೊಂಡಿದೆ.

ಅಭಿವೃದ್ಧಿ ಹೊಂದಿದ ಭೂಮಿಯ ಮಾರಾಟದಿಂದ ಬಂದ ಆದಾಯ, ಜಂಟಿ ಅಭಿವೃದ್ಧಿ ಒಪ್ಪಂದಗಳ ಅಡಿಯಲ್ಲಿ ಪಡೆದ ಮುಂಗಡಗಳು ಮತ್ತು ಪೂರ್ಣಗೊಂಡ ರಸ್ತೆ ಭಾಗಗಳನ್ನು ಕಂಪನಿಯ ಆಸ್ತಿಗಳಾಗಿ ಬಂಡವಾಳೀಕರಿಸುವುದನ್ನು ನೈಸ್‌ನ ವಾರ್ಷಿಕ ವರದಿಗಳು ಬಹಿರಂಗಪಡಿಸಿವೆ. ಈ ಸಂಗತಿಗಳನ್ನು ಪರಿಗಣಿಸಿ, ಸಾರ್ವಜನಿಕ ಮೂಲಸೌಕರ್ಯ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಗಣನೀಯ ವಾಣಿಜ್ಯ ವಹಿವಾಟುಗಳೊಂದಿಗೆ ಹೆಣೆದುಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

"ನಮ್ಮ ಅಭಿಪ್ರಾಯದಲ್ಲಿ, ಇದು ಕಾನೂನು ಮತ್ತು ಸಂವಿಧಾನದ ಮೇಲಿನ ವಂಚನೆಯಾಗಿದೆ. ರಾಜ್ಯದ ಅಧಿಕಾರಿಗಳು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಎಫ್‌ಡಬ್ಲ್ಯುಎ ಯ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದು ಪೀಠ ಹೇಳಿದೆ.

ನೈಸ್‌ನ ಖಾತೆಗಳ ಸ್ವತಂತ್ರ ಮೌಲ್ಯಮಾಪನ, ತನಿಖೆ ಮತ್ತು ವಿಧಿವಿಜ್ಞಾನ ಲೆಕ್ಕಪರಿಶೋಧನೆಗೆ ಇದು ಸೂಕ್ತವಾದ ಪ್ರಕರಣ ಎಂದು ನ್ಯಾಯಾಲಯ ಹೇಳಿದೆ. ಅದಾಗ್ಯೂಮ ರಾಜ್ಯವು ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆಯೇ ಎಂಬ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ, ಅಂತಹ ನಿರ್ದೇಶನವನ್ನು ನೀಡುವುದನ್ನು ನ್ಯಾಯಾಲಯ ತಡೆದಿದೆ. ಅಲ್ಲದೇ, ನೈಸ್‌ ಮತ್ತು ಕೆಐಎಡಿಬಿ ಮೇಲ್ಮನವಿಗಳನ್ನು ವಜಾಗೊಳಿಸಿ, ಭೂಮಾಲೀಕರ ಪರವಾಗಿ ಸ್ವಾಧೀನ ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಕಾಯಂಗೊಳಿಸಿದೆ.

ನೈಸ್‌ ಪರವಾಗಿ ಡಿಎಲ್‌ಎನ್‌ ರಾವ್‌, ಧ್ಯಾನ್‌ ಚಿನ್ನಪ್ಪ, ವಿಕ್ರಮ್‌ ಹುಯಿಲಗೋಳ ಮತ್ತು ಗೋಪಾಲ ಶಂಕರನಾರಾಯಣನ್‌ ವಾದಿಸಿದ್ದರು. ರಾಹ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹ್ಮದ್‌ ವಾದಿಸಿದ್ದರು. ಕೆಐಎಡಿಬಿ ಪರವಾಗಿ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದಿಸಿದ್ದರು.

ಭೂಮಾಲೀಕರ ಪರವಾಗಿ ಹಿರಿಯ ವಕೀಲರಾದ ಎಚ್‌ ಎಚ್‌ ಶಶಿಧರ, ಕೆ ಎನ್‌ ಫಣೀಂದ್ರ ಮತ್ತು ಎಸ್‌ ರಂಗ ವಾದಿಸಿದ್ದರು.

Attachment
PDF
NICE Vs AMR Housing
Preview
Kannada Bar & Bench
kannada.barandbench.com