ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದ ಬೆಂಗಳೂರಿನ ಜೊಮ್ಯಾಟೊ ಡೆಲಿವರಿ ಬಾಯ್ ಹಲ್ಲೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದ್ದ ಜೊಮ್ಯಾಟೊ ಮಾಜಿ ಎಕ್ಸಿಕ್ಯೂಟಿವ್ ಕಾಮರಾಜ್ ಅವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರನ್ನು ದಾಖಲಿಸಿದ್ದು, ಈ ಸಂಬಂಧ ಗ್ರಾಹಕಿ ಹಿತೇಶಾ ಚಂದ್ರಾನಿ ವಿರುದ್ಧ ಮಾರ್ಚ್ 15ರಂದು ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 9ರಂದು ತಾನು ಆಹಾರವನ್ನು ಪೂರೈಸಲು ಚಂದ್ರಾನಿ ಅವರಿದ್ದ ಫ್ಲ್ಯಾಟ್ ಗೆ ತೆರಳಿದ್ದ ವೇಳೆ ತನ್ನನ್ನು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಲ್ಲಿ ಹೊಡೆಯಲಾಗಿದೆ ಎಂದು ತಮ್ಮ ದೂರಿನಲ್ಲಿ ಕಾಮರಾಜ್ ತಿಳಿಸಿದ್ದಾರೆ. ಚಂದ್ರಾನಿ ವಿರುದ್ಧ ಐಪಿಸಿ ಸೆಕ್ಷನ್ 341, 355, 504, 506ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಜೊಮ್ಯಾಟೊ ಡೆಲಿವರಿ ಬಾಯ್ ಆಹಾರವನ್ನು ಪೂರೈಸುವ ವೇಳೆ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಮೂಗಿಗೆ ಗಾಯವಾಗಿ ರಕ್ತ ಸುರಿಸುತ್ತಿದ್ದ ಹಿತೇಶಾ ಚಂದ್ರಾನಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹರಿಯಬಿಟ್ಟಿದ್ದರು. ಡೆಲಿವರಿ ಬಾಯ್ ಮುಖಕ್ಕೆ ಪಂಚ್ ಮಾಡಿದ್ದರಿಂದ ಮೂಗಿಗೆ ಗಾಯವಾಗಿ ರಕ್ತ ಸುರಿಯುತ್ತಿರುವುದಾಗಿ ಅವರು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ಕೂಡ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಈ ವೇಳೆ ಅವರು ಆಹಾರ ಪೂರೈಕೆಯಲ್ಲಿ ತಡವಾಗಿದ್ದಕ್ಕೆ ತಾವು ಕ್ಷಮೆ ಕೇಳಿದ್ದಾಗಿಯೂ, ಆದರೆ, ಚಂದ್ರಾನಿ ತಮ್ಮ ಮೇಲೆ ಹಲ್ಲೆ ಮಾಡಿ ಚಪ್ಪಲಿಯಿಂದ ಹೊಡೆದರೆಂದೂ ಹೇಳಿದ್ದರು.
ಕಾಮರಾಜ್ ನೀಡಿರುವ ದೂರಿನನ್ವಯ ದಾಖಲಿಸಿರುವ ಎಫ್‌ಐಆರ್‌ನಲ್ಲಿ, “ಫಿರ್ಯಾದುದಾರ ಕಾಮರಾಜ್ ಅವರು ಜೊಮ್ಯಾಟೊ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 09.03.2021 ರಂದು ಸಂಜೆ 4.50 ರಲ್ಲಿ ಹಿತೇಶ ಚಂದ್ರಾನಿ ಅವರ ಮನೆಗೆ ಆಹಾರವನ್ನು ತಡವಾಗಿ ತಲುಪಿಸಿದ್ದರಿಂದ ಅವರು ಫಿರ್ಯಾದುದಾರರಿಗೆ ಕೂಗಾಡಿ ಜಗಳ ಮಾಡಿ ಅಡ್ಡಗಟ್ಟಿ, ಚಪ್ಪಲಿಯಿಂದ ಹಲ್ಲೆ ಮಾಡಿ, ಹಿಂದಿ ಭಾಷೆಯಲ್ಲಿ ಮಾಕಿ ** ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ಫಿರ್ಯಾದುದಾರರಿಗೆ ಚಪ್ಪಲಿಯಿಂದ ನಿರಂತರವಾಗಿ ಹೊಡೆದಿರುತ್ತಾರೆ,” ಎಂದು ದಾಖಲಿಸಲಾಗಿದೆ.
ಪ್ರಕರಣದ ಸಂಬಂಧ ಈ ಮೊದಲು ಮಾರ್ಚ್ 10 ರಂದು ಹಿತೇಶಾ ಅವರು ಕಾಮರಾಜ್ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 504 ಮತ್ತು 325ರ ಅಡಿ ಕಾಮರಾಜ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿದ್ದರು.
ಕಾಮರಾಜ್ ಆಹಾರವನ್ನು 59 ನಿಮಿಷ ತಡವಾಗಿ ಪೂರೈಸಿದ್ದರು. ಹಾಗಾಗಿ ತಾನು ಬಿಲ್ ನೀಡುವುದಿಲ್ಲವೆಂದು ಹೇಳಿದ್ದೆ. ಈ ಸಂಬಂಧ ಕಸ್ಟಮರ್ ಕೇರ್ ಜೊತೆಗೆ ಮಾತನಾಡುತ್ತಿದ್ದೆ. ಈ ವೇಳೆ ಕಾಮರಾಜ್ ಅವರು ತಮ್ಮನ್ನು ನಿಂದಿಸಿ, ಮುಷ್ಟಿಯಿಂದ ತಮ್ಮ ಮೂಗಿಗೆ ಗುದ್ದಿದ್ದರು ಎಂದು ಹಿತೇಶಾ ಆರೋಪಿಸಿದ್ದರು.
ಪ್ರಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೊಳಗಾದಂತೆ 'ಸ್ಥಳೀಯರು ಮತ್ತು ಹೊರಗಿನವರು' ಎನ್ನುವ ಸ್ವರೂಪವನ್ನು ಸಹ ಪಡೆದುಕೊಂಡಿತ್ತು.