ಬೆಂಗಳೂರು ಗಲಭೆ: ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಪ್ರಕರಣದಲ್ಲಿ ಇಪ್ಪತ್ತನೇ ಆರೋಪಿಯಾಗಿರುವ ಮೊಹಮ್ಮದ್ ಮುದಾಸಿರ್ ಖಲೀಮ್ ಮತ್ತು ಆರನೇ ಆರೋಪಿ ಜಿಯಾ ಉರ್ ರೆಹ್ಮಾನ್ ಅವರ ಜಾಮೀನು ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ.
Bangalore Riots 2020
Bangalore Riots 2020
Published on

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್‌ಸಿ) ಜಾರಿ ಸೇರಿ ವಿವಿಧ ಕಾರಣಗಳಿಗೆ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಲ್ಲದೆ, ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಬ್ಬರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.

ಜಾಮೀನು ನಿರಾಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಆರೋಪಿಗಳಾದ ಜಿಯಾ ಉರ್ ರೆಹ್ಮಾನ್ ಹಾಗೂ ಮೊಹಮ್ಮದ್ ಮುದಾಸಿರ್ ಖಲೀಮ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಪಿ ಶ್ರೀ ಸುಧಾ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

Justices K S Mudagal & P Sree Sudha
Justices K S Mudagal & P Sree Sudha

ಮೇಲ್ಮನವಿದಾರ ಆರೋಪಿಗಳು ಜಾಮೀನು ಕೋರುವುದು ಇಲ್ಲವೇ, ಪ್ರಕರಣದಿಂದ ಬಿಡುಗಡೆ ಕೋರಿ ಪದೇಪದೆ ಅರ್ಜಿ ಸಲ್ಲಿಸುತ್ತಿಸಿದ್ದಾರೆ ಎಂಬ ಅಂಶ ಪ್ರಕರಣದ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ರೀತಿ ಪದೇಪದೆ ಅರ್ಜಿಗಳನ್ನು ಸಲ್ಲಿಸುವ ಮೂಲಕ ವಿಚಾರಣಾ ನ್ಯಾಯಾಲಯದ ಅಮೂಲ್ಯ ಸಮಯ ವ್ಯಯ ಮಾಡುತ್ತಿರುವುದಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಿ, ಪ್ರಕರಣದ ವಿಚಾರಣೆ ಆರಂಭಿಸಲು ಅಡ್ಡಿ ಪಡಿಸುತ್ತಿದ್ದಾರೆ ಎನ್ನುವುದು ತಿಳಿಯಲಿದೆ. ಬಳಿಕ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ವಿಳಂಬಕ್ಕೆ ಪ್ರಾಸಿಕ್ಯೂಷನ್ ಆಗಲಿ, ವಿಚಾರಣಾ ನ್ಯಾಯಾಲಯವಾಗಲಿ ಕಾರಣವಲ್ಲ. ಆರೋಪಿಗಳೇ ವಿಚಾರಣೆಯ ವಿಳಂಬಕ್ಕೆ ಕಾರಣರಾಗಿದ್ದು, ಅವರ ಈ ಅನುಚಿತ ವರ್ತನೆ ಒಪ್ಪುವಂಥದ್ದಲ್ಲ ಎಂದು ಪೀಠ ಹೇಳಿದೆ.

ಸಾರ್ವಭೌಮತ್ವಕ್ಕೇ ಸವಾಲು: ಮೇಲ್ಮನವಿದಾರರ ವಿರುದ್ಧ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಆರೋಪವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸ್ಥಾಪಿಸಿದ್ದ ಪೊಲೀಸ್ ಠಾಣೆಗಳನ್ನೇ ಧ್ವಂಸ ಮಾಡುವ ಮೂಲಕ ರಾಜ್ಯದ ಸಾರ್ವಭೌಮತ್ವವನ್ನು ಪ್ರಶ್ನಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿ, ಕರ್ತ್ಯವಕ್ಕೆ ಅಡ್ಡಿಪಡಿಸಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಆರೋಪಗಳಿಗೆ ಜೀವಾವಧಿ ಇಲ್ಲವೇ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ. ಇದೇ ಕಾರಣದಿಂದ ಅರ್ಜಿದಾರರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಅಡಿ ದಾಖಲಾಗಿರುವ ಆರೋಪ ಪಟ್ಟಿ ರದ್ದು ಕೋರಿ ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಗಳು ಮತ್ತು ಜಾಮೀನು ಅರ್ಜಿಗಳು ವಜಾಗೊಂಡಿವೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

ಇದೇ ಪ್ರಕರಣದ 14, 16 ಹಾಗೂ 18ನೇ ಆರೋಪಿಗಳು ತಪ್ಪೊಪ್ಪಿಕೊಂಡ ಪರಿಣಾಮ 7 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದರೆ, ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು, ತಮ್ಮ ತಪ್ಪನ್ನು ಒಪ್ಪಿಕೊಂಡಿಲ್ಲ. ಘಟನೆಗೆ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ. ಹಾಗಾಗಿ, ಇತರ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಮೇಲ್ಮನವಿದಾರರಿಗೆ ಅನ್ವಯಿಸಲಾಗದು. ಮೇಲ್ಮನವಿದಾರರಿಗೆ ಜಾಮೀನು ನಿರಾಕರಿಸುವಾಗ ವಿಶೇಷ ನ್ಯಾಯಾಲಯ ವಿವೇಚನೆ ಬಳಸುವಲ್ಲಿ ವಿಫಲವಾಗಿದೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಇಪ್ಪತ್ತನೇ ಆರೋಪಿಯಾಗಿರುವ ಮೊಹಮ್ಮದ್ ಮುದಾಸಿರ್ ಖಲೀಮ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ವಜಾಗೊಂಡಿತ್ತು. ಇದೀಗ ಮತ್ತೆ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆರನೇ ಆರೋಪಿ ಜಿಯಾ ಉರ್ ರೆಹ್ಮಾನ್ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ್ದರಿಂದ, ಆತನೂ ಸಹ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪರವಾಗಿ ವಿಶೇಷ ಅಭಿಯೋಜಕ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಪ್ರಾಸಿಕ್ಯೂಷನ್ ದಾಖಲೆಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ಸಿಎಎ ಮತ್ತು ಎನ್ಆರ್‌ಸಿ ಜಾರಿ ಕುರಿತ ಕೇಂದ್ರ ಸರ್ಕಾರದ ನಿರ್ಣಯ ಹಾಗೂ ಬಾಬರಿ ಮಸೀದಿ, ತ್ರಿವಳಿ ತಲಾಖ್ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪುಗಳಿಂದ ಬೆಂಗಳೂರಿನ ಎಸ್‌ಡಿಪಿಐ ಅಸಮಾಧಾನಗೊಂಡಿತ್ತು. ಇದರಿಂದ, ಮೇಲ್ಮನವಿದಾರರೂ ಸೇರಿ ಇತರ ಎಸ್‌ಡಿ‌ಪಿಐ ಮುಖಂಡರು ಸರ್ಕಾರಗಳ ವಿರುದ್ಧ ಚಳವಳಿಗೆ ನಿರ್ಧರಿಸಿದ್ದರು. ಆ ಮೂಲಕ ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಆಶಾಂತಿ ಉಂಟು ಮಾಡಲು ಮುಂದಾಗಿದ್ದರು. ಇದೇ ಕಾರಣದಿಂದ ಸಂಚು ರೂಪಿಸಿ, ಸಾವಿರಾರು ಹಿಂದೂಗಳು ಫಾಲೋ ಮಾಡುತ್ತಿದ್ದ ಪ್ರಕರಣದ ಮೊದಲನೇ ಆರೋಪಿಯ ಫೇಸ್‌ಬುಕ್ ಖಾತೆಯಲ್ಲಿ ಹಿಂದೂ ದೇವರುಗಳು ಹಾಗೂ ಹಿಂದೂ ಸಮುದಾಯವನ್ನು ಅವಮಾನಿಸುವಂತಹ ಕೆಲ ಅವಹೇಳನಾಕಾರಿ ಅಂಶಗಳುಳ್ಳ ಪೋಸ್ಟ್‌ಗಳನ್ನು ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.

ಈ ನಡುವೆ 2020ರ ಆಗಸ್ಟ್ 11ರಂದು ಶ್ರೀಕೃಷ್ಣಜನ್ಮಾಷ್ಟಮಿಯಂದು, ಪುಲಕೇಶಿ ನಗರದ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅಳಿಯ ನವೀನ್ ಎಂಬುವರ ಫೇಸ್‌ಬುಕ್ ಖಾತೆಗೆ, ಹಿಂದೂ ದೇವತೆಗಳನ್ನು ಅವಮಾನಿಸುವ ರೀತಿಯ ವಿಡಿಯೊ ಒಂದನ್ನು ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ನವೀನ್ ಪ್ರವಾದಿ ಮೊಹಮ್ಮದ್ ಅವರ ಕುರಿತ ಕಾರ್ಟೂನ್ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಇದರಿಂದ, ಕೆರಳಿದ್ದ ಆರೋಪಿಗಳು, ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿ ಹಿಂಸಾತ್ಮಕ ಕೃತ್ಯ ಎಸಗಲು ಸಭೆಗಳನ್ನು ನಡೆಸಿದ್ದರು. ಈ ಸಂಬಂಧ ದೂರು ನೀಡುವುದಕ್ಕಾಗಿ ಕೆಜಿ ಹಳ್ಳಿ ಠಾಣೆಗೆ ನೂರಾರು ಮಂದಿ ಆಗಮಿಸಿ, ನವೀನ್‌ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟಿಸಿದ್ದರು.

ಇದೇ ವೇಳೆಗೆ ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದೇ ಆರೋಪದಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ ಎಂದು ಕೆಜೆ ಹಳ್ಳಿ ಪೊಲೀಸರು ತಿಳಿಸಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮತ್ತು ಠಾಣೆಯ ಮೇಲೆ ದಾಳಿ ನಡೆಸಿದ್ದರು. ಪರಿಸ್ಥಿತಿ ನಿಭಾಯಿಸಲು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸುವಂತಾಗಿತ್ತು.

ಆದರೂ, ಪ್ರತಿಭಟನಾಕಾರರು ಆರೋಪಿ ನವೀನ್‌ನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಲು ಮುಂದಾಗಿದ್ದರು ಎನ್ನಲಾಗಿತ್ತು. ಪೆಟ್ರೋಲ್ ಬಾಟಲ್‌ಗಳನ್ನು ಠಾಣೆಗೆ ಎಸೆದು, ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಮುಂದಾಗಿದ್ದರು ಹಾಗೂ ಸರ್ಕಾರಿ ವಾಹನಗಳು ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂದು ಆರೋಪಿಸಲಾಗಿತ್ತು. ಪೊಲೀಸ್ ಸಿಬ್ಬಂದಿಗೆ ಕರ್ತ್ಯವ ನಿರ್ವಹಣೆಗೆ ಅಡ್ಡಿ ಪಡಿಸಿದ್ದರು ಎನ್ನಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು.

Attachment
PDF
Ziya Ur Rehman & other Vs NIA
Preview
Kannada Bar & Bench
kannada.barandbench.com