ಬೆಂಗಳೂರು ಗಲಭೆ: ತಪ್ಪೊಪ್ಪಿಕೊಂಡ ಮೂವರಿಗೆ ಏಳು ವರ್ಷ ಜೈಲು; ತಲಾ ₹36 ಸಾವಿರ ದಂಡ ವಿಧಿಸಿದ ವಿಶೇಷ ನ್ಯಾಯಾಲಯ

ಸೈಯ್ಯದ್‌ ಇಕ್ರಾಮುದ್ದೀನ್‌ ಅಲಿಯಾಸ್‌ ಅಲಿಯಾಸ್‌ ಸೈಯದ್‌ ನವೀದ್‌, ಸೈಯದ್‌ ಆತೀಫ್‌ ಮತ್ತು ಮೊಹಮ್ಮದ್‌ ಆತೀಫ್‌ ಅವರು ತಪ್ಪೊಪ್ಪಿಕೊಂಡಿದ್ದರಿಂದ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
Bangalore Riots 2020
Bangalore Riots 2020
Published on

ಬೆಂಗಳೂರು ಗಲಭೆ ಎಂದೇ ಕರೆಯಲಾಗುವ 2020ರ ಆಗಸ್ಟ್‌ 11ರಂದು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣೆಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಆರೋಪ ನಿಗದಿ ಮಾಡುವಾಗ ಮೂವರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿರುವುದರಿಂದ ಅವರಿಗೆ ಗರಿಷ್ಠ ಏಳು ವರ್ಷ ಜೈಲು ಮತ್ತು ತಲಾ ₹36 ಸಾವಿರ ದಂಡ ವಿಧಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಈಚೆಗೆ ತೀರ್ಪು ನೀಡಿದೆ.

ಸೈಯ್ಯದ್‌ ಇಕ್ರಾಮುದ್ದೀನ್‌ ಅಲಿಯಾಸ್‌ ಸೈಯದ್‌ ನವೀದ್‌, ಸೈಯದ್‌ ಆತೀಫ್‌ ಮತ್ತು ಮೊಹಮ್ಮದ್‌ ಆತೀಫ್‌ ಅವರು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆಂಪರಾಜು ಶಿಕ್ಷೆ ವಿಧಿಸಿದ್ದಾರೆ.

ಸೈಯ್ಯದ್‌ ಇಕ್ರಾಮುದ್ದೀನ್‌ ಅಲಿಯಾಸ್‌ ಸೈಯದ್‌ ನವೀದ್‌, ಸೈಯದ್‌ ಆತೀಫ್‌ ಮತ್ತು ಮೊಹಮ್ಮದ್‌ ಆತೀಫ್‌ ಅವರು ಕ್ರಮವಾಗಿ 14, 16 ಮತ್ತು 18ನೇ ಆರೋಪಿಗಳಾಗಿದ್ದರು. ಉಳಿದವರ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.

ಐಪಿಸಿ ಸೆಕ್ಷನ್ 120ಬಿ ಆರೋಪಕ್ಕೆ ₹2,000 ದಂಡ 7 ವರ್ಷ ಜೈಲು, ಐಪಿಸಿ ಸೆಕ್ಷನ್‌ 143 ಜೊತೆಗೆ 149 ಅಪರಾಧಕ್ಕೆ ಆರು ತಿಂಗಳ ಜೈಲು ₹2,000 ದಂಡ, 144 ಜೊತೆಗೆ 149 ಅಪರಾಧಕ್ಕೆ 2 ವರ್ಷ ಜೈಲು ₹2,000 ದಂಡ, 145 ಜೊತೆಗೆ 149 ಅಪರಾಧಕ್ಕೆ 2 ವರ್ಷ ಜೈಲು ₹2,000 ದಂಡ, 147 ಜೊತೆಗೆ 149 ಅಪರಾಧಕ್ಕೆ 2 ವರ್ಷ ಜೈಲು ₹2,000 ದಂಡ, 148 ಜೊತೆಗೆ 149 ಅಪರಾಧಕ್ಕೆ 3 ವರ್ಷ ಜೈಲು ₹2,000 ದಂಡ, 188 ಜೊತೆಗೆ 149 ಅಪರಾಧಕ್ಕೆ ಆರು ತಿಂಗಳ ಜೈಲು ₹1,000 ದಂಡ, 353 ಜೊತೆಗೆ 149 ಅಪರಾಧಕ್ಕೆ 2 ವರ್ಷ ಜೈಲು ₹2,000 ದಂಡ, 427 ಜೊತೆಗೆ 149 ಅಪರಾಧಕ್ಕೆ 2 ವರ್ಷ ಜೈಲು ₹2,000 ದಂಡ, 435 ಜೊತೆಗೆ 149 ಅಪರಾಧಕ್ಕೆ 5 ವರ್ಷ ಜೈಲು ₹2,000 ದಂಡ, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ ಸೆಕ್ಷನ್‌ 2ರ ಅಡಿಯ ಅಪರಾಧಕ್ಕೆ 3 ಜೈಲು, ₹2,000 ದಂಡ, ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ ಸೆಕ್ಷನ್‌ 16, 18 ಮತ್ತು 20ರ ಅಡಿ ಅಪರಾಧಕ್ಕೆ ತಲಾ ಏಳು 7 ವರ್ಷ ಜೈಲು ಮತ್ತು ₹5,000 ದಂಡ ವಿಧಿಸಲಾಗಿದೆ. ಅಪರಾಧಿಗಳು ಈಗಾಗಲೇ ಅನುಭವಿಸಿರುವ ಶಿಕ್ಷೆಯನ್ನು ಕಳೆದು ಬಾಕಿ ಶಿಕ್ಷೆಯು ಏಕಕಾಲಕ್ಕೆ ಚಾಲ್ತಿಗೆ ಬರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದಲ್ಲಿ ಒಟ್ಟು 199 ಆರೋಪಿಗಳಿದ್ದು, 187 ಮಂದಿಯನ್ನು ಬಂಧಿಸಲಾಗಿತ್ತು. 4 ಮಂದಿ ತಾವೇ ಶರಣಾಗಿದ್ದು, ಒಬ್ಬರು ಮೃತಪಟ್ಟಿದ್ದರು. 138 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್‌ ಆರೋಪ ಪಟ್ಟಿ ಸಲ್ಲಿಸಿದೆ. ಘಟನೆಯಲ್ಲಿ 12 ವಾಹನಗಳು ಮತ್ತು ಒಂದು ಖಾಸಗಿ ವಾಹನಕ್ಕೆ ಹಾನಿಯಾಗಿದ್ದು, ಈ ಪೈಕಿ ಒಂದು ಇನ್ನೋವಾ ಕಾರು, ಐದು ದ್ವಿಚಕ್ರ ವಾಹನ ಹೊತ್ತಿ ಉರಿದಿದ್ದು, ಉಳಿದ ಆರು ಇತರೆ ವಾಹನಗಳು ಹಾನಿಯಾಗಿತ್ತು.

ಪ್ರಕರಣದ ಹಿನ್ನೆಲೆ: 2020ರ ಆಗಸ್ಟ್‌ 11ರಂದು ರಾತ್ರಿ 9 ಗಂಟೆ ವೇಳೆಗೆ 25-30 ಮಂದಿ ಕೆಜಿ ಹಳ್ಳಿ ಠಾಣೆಯ ಎದುರು ಅಂದಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್‌ ಎಂಬಾತ ಪ್ರವಾದಿ ಮೊಹಮ್ಮದ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದು, ತಕ್ಷಣ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಸೈಯದ್‌ ಇಕ್ರಾಮುದ್ದೀನ್‌ ವಹಿಸಿದ್ದನು. ದೂರುದಾರರಿಂದ ಮಾಹಿತಿ ಎನ್‌ಸಿಆರ್‌ ಮಾಡಿದ್ದರು. ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಹಠ ಹಿಡಿದಿದ್ದರಿಂದ, ಪರಿಸ್ಥಿತಿ ಕೈಮೀರುವುದನ್ನು ಹದ್ದುಬಸ್ತಿಗೆ ತರಲು ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದರಿಂದ ಕುಪಿತವಾದ ಗುಂಪು ಹಲ್ಲೆ ನಡೆಸಿ, ದೊಂಬಿ ಎಬ್ಬಿಸಿತ್ತು.

Kannada Bar & Bench
kannada.barandbench.com