ಇನ್‌ಸ್ಪೆಕ್ಟರ್‌ ಪಾಪಣ್ಣ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿದಂತೆ ಮಾಧ್ಯಮಗಳನ್ನು ನಿರ್ಬಂಧಿಸಿದ ಸತ್ರ ನ್ಯಾಯಾಲಯ

ಪ್ರತಿವಾದಿ ಮಾಧ್ಯಮಗಳು ಪಾಪಣ್ಣ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಅಥವಾ ಸುಳ್ಳು ಸುದ್ದಿಯನ್ನು ವಿದ್ಯುನ್ಮಾನ, ಮುದ್ರಣ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸದಂತೆ ಏಕಪಕ್ಷೀಯ ತಾತ್ಕಾಲಿಕ ಮಧ್ಯಂತರ ಪ್ರತಿಬಂಧಕಾದೇಶ ಮಾಡಲಾಗಿದೆ.
Media
Media
Published on

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಗುರಿಯಾಗಿರುವ ಬೆಂಗಳೂರಿನ ಕೋಣನಕುಂಟೆ ಠಾಣೆಯ ಇನ್‌ಸ್ಪೆಕ್ಟರ್‌ ಎಂ ಪಾಪಣ್ಣ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ಮಾಧ್ಯಮಗಳನ್ನು ನಿರ್ಬಂಧಿಸಿದೆ.

ಪಾಪಣ್ಣ ಅವರು ಅಸಲು ದಾವೆಯ ಭಾಗವಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಮೊಹಮ್ಮದ್‌ ಮೋಯಿನುದ್ದೀನ್‌ ಅವರು ನಡೆಸಿದರು.

“ಮಾಧ್ಯಮ ಸಂಸ್ಥೆಗಳಾದ 1-40 ಪ್ರತಿವಾದಿಗಳು ಪಾಪಣ್ಣ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಅಥವಾ ಸುಳ್ಳು ಸುದ್ದಿಯನ್ನು ವಿದ್ಯುನ್ಮಾನ, ಮುದ್ರಣ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಬಾರದು” ಎಂದು ನ್ಯಾಯಾಲಯವು ಏಕಪಕ್ಷೀಯ ತಾತ್ಕಾಲಿಕ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಕೋಣನಕುಂಟೆ ಠಾಣೆಯ ಇನ್‌ಸ್ಪೆಕ್ಟರ್‌ ಪಾಪಣ್ಣ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೌಡಿಶೀಟರ್‌ ಯಶಸ್ವಿನಿಗೌಡ ಅವರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ದೂರು ನೀಡಿದ್ದರು. ದೂರಿನ ಜೊತೆಗೆ ಆಡಿಯೊ ಸಂಭಾಷಣೆ, ವಾಟ್ಸಾಪ್‌ ಸಂದೇಶಗಳನ್ನು ಸಲ್ಲಿಸಿದ್ದರು. ಇದನ್ನು ಆಧರಿಸಿ ದಕ್ಷಿಣ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರಿಗೆ ಪಾಪಣ್ಣ ವಿರುದ್ಧ ಇಲಾಖಾ ತನಿಖೆ ನಡೆಸಿ, ವರದಿ ನೀಡಲು ಸೀಮಂತ್‌ ಕುಮಾರ್‌ ಸಿಂಗ್‌ ಸೂಚಿಸಿದ್ದರು.

2017ರಲ್ಲಿ ಬಸವನಗುಡಿ ಠಾಣೆಯಲ್ಲಿ ತನ್ನ ವಿರುದ್ಧ ರೌಡಿಶೀಟರ್‌ ತೆರೆಯಲಾಗಿತ್ತು. ಆಗ ಪಾಪಣ್ಣ ಠಾಣಾಧಿಕಾರಿಯಾಗಿದ್ದರು. ಆ ವೇಳೆ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ ಪಾಪಣ್ಣ ಅವರು ನಿತ್ಯ ಸಂದೇಶ ಕಳುಹಿಸುತ್ತಿದ್ದರು. ಬಳಿಕ ಡಿಸಿಪಿಗೂ ದೂರು ನೀಡಿದ್ದೆ. ಆಗ ಪಾಪಣ್ಣ ಬೆದರಿಕೆ ಹಾಕಿದ್ದರು ಎಂದು ಯಶಸ್ವಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

Kannada Bar & Bench
kannada.barandbench.com