
ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ಧಾಬೋಲ್ಕರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 10ನೇ ಆರೋಪಿಯಾಗಿರುವ ಶರದ್ ಬಾಹುಸಾಹೇಬ್ ಕಾಲಸ್ಕರ್‌ಗೆ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿನ ಒಟ್ಟು 18 ಆರೋಪಿಗಳ ಪೈಕಿ ತಲೆಮರೆಸಿಕೊಂಡಿರುವ 15ನೇ ಆರೋಪಿ ವಿಕಾಸ್ ಪಾಟೀಲ್ ಅಲಿಯಾಸ್ ನಿಹಾಲ್ ಹೊರತುಪಡಿಸಿ ಎಲ್ಲರಿಗೂ ಜಾಮೀನು ದೊರೆತಂತಾಗಿದೆ.
ಮಹಾರಾಷ್ಟ್ರದ ಶರದ್ ಬಾಹುಸಾಹೇಬ್ ಕಾಲಸ್ಕರ್ ಸಲ್ಲಿಸಿದ ಅರ್ಜಿಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮುರಳೀಧರ್ ಪೈ ಅವರು ಪುರಸ್ಕರಿಸಿದ್ದಾರೆ.
“ಆರೋಪಿಯು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಸೂಕ್ತ ಕಾರಣಗಳಿಗಾಗಿ ವಿಚಾರಣಾಧೀನ ನ್ಯಾಯಾಲಯ ಅನುಮತಿಸದ ಹೊರತು ವಿಚಾರಣೆಯ ಎಲ್ಲಾ ದಿನ ಆತ ಹಾಜರಾಗಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಾಸಿಕ್ಯೂಷನ್ ಸಾಕ್ಷಿ ತಿರುಚಬಾರದು. ಭವಿಷ್ಯದಲ್ಲಿ ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ಮನೆಯ ನಿವಾಸ, ನೋಂದಾಯಿತ ಮೊಬೈಲ್ ಸಂಖ್ಯೆ, ಈಮೇಲ್ ಐಡಿ ಮತ್ತು ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕು. ಈ ಷರತ್ತುಗಳ ಪೈಕಿ ಯಾವುದೇ ಉಲ್ಲಂಘನೆಯಾದರೂ ಜಾಮೀನು ರದ್ದುಗೊಳಿಸಲು ಮನವಿ ಸಲ್ಲಿಸಲು ಪ್ರಾಸಿಕ್ಯೂಷನ್ ಸ್ವತಂತ್ರವಾಗಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಪ್ರಾಸಿಕ್ಯೂಷನ್ ನೀಡಿರುವ ಪ್ರಕಾರ ಹಾಲಿ ಪ್ರಕರಣದಲ್ಲಿ 164 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಬಾಕಿ ಉಳಿದಿರುವ ಸಾಕ್ಷಿಗಳು ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಇಲಾಖೆಯ ಅಧಿಕಾರಿಗಳಾಗಿದ್ದಾರೆ. ಹೀಗಾಗಿ, ಜಾಮೀನು ನಿರಾಕರಿಸುವಂತೆ ಕೋರಿರುವ ಪ್ರಾಸಿಕ್ಯೂಷನ್ ವಾದದಲ್ಲಿ ಹುರುಳಿಲ್ಲ. ಇನ್ನು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾತ್ರಕ್ಕೆ ಬೇರೆ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಬಾರದು ಎಂದೇನಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲರು “ಶರದ್ 4.9.2018ರಿಂದ ಕಸ್ಟಡಿಯಲ್ಲಿದ್ದು, ಪ್ರಕರಣದಲ್ಲಿ ಇತರೆ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಸುಪ್ರೀಂ ಕೋರ್ಟ್ ಸಹ ಜೀವಿಸುವ ಹಕ್ಕಿನ ವಿಚಾರವನ್ನು ಪರಿಗಣಿಸಬೇಕು ಎಂದು ಹೇಳಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಮುಗಿಸಿ ಮನೆಗೆ ಮರಳಿದ್ದ ವೇಳೆ ಗುಂಡು ಹಾರಿಸಿ ಅವರನ್ನು ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ.
ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.