ಪ್ರದೋಷ್‌ ಮಾಫಿ ಸಾಕ್ಷಿಯನ್ನಾಗಿಸಿ ಹೊಸ ಆದೇಶ ಹೊರಡಿಸಿದ ಬೆಂಗಳೂರಿನ ಸತ್ರ ನ್ಯಾಯಾಲಯ; ದರ್ಶನ್‌ ಮನವಿ ತಿರಸ್ಕಾರ

ಜೈಲಿನಲ್ಲಿ ಪ್ರದೋಷ್‌ ರಹಸ್ಯವಾಗಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಬಗ್ಗೆ ಅನೇಕ ವ್ಯಕ್ತಿಗಳು ದ್ವೇಷ ಹೊಂದಿದ್ದಾರೆ. ವಿರೋಧಿಗಳು ಸೇರಿ ಅನೇಕರು ದರ್ಶನ್‌ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆಕ್ಷೇಪ.
Darshan
Darshan
Published on

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ರಾವ್‌ಗೆ ಕ್ಷಮಾದಾನ ನೀಡಿ, ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಬುಧವಾರ ಮತ್ತೆ ಹೊಸದಾಗಿ ಆದೇಶ ಮಾಡಿದೆ.

ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕು ಹಾಗೂ ನನ್ನನ್ನು ಸಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ 14ನೇ ಆರೋಪಿಯೂ ಆದ ದರ್ಶನ್‌ ಆಪ್ತ ಸ್ನೇಹಿತ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಧೀಶೆ ಸುಜಾತಾ ಸಾಂಬ್ರಾಣಿ ಅವರು ಈ ಷರತ್ತು ಬದ್ಧ ಆದೇಶ ಮಾಡಿದ್ದಾರೆ.

Sujata Madiwalappa Sambrani
Sujata Madiwalappa Sambrani

ಇದೇ ವೇಳೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರದೋಷ್‌ ಕೋರಿರುವ ಅರ್ಜಿಯ ತೀರ್ಪು ಪ್ರಕಟವನ್ನು ತಡೆಹಿಡಿಯಬೇಕು ಎಂದು ಕೋರಿ ದರ್ಶನ್‌ ಸಲ್ಲಿಸಿದ್ದ ಮೊಮೊವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಆದೇಶ ಪ್ರಕಟಿಸಿದ ನಂತರವೂ ಈ ಷರತ್ತುಬದ್ಧ ಕ್ಷಮಾದಾನ ಆದೇಶವನ್ನು ಒಪ್ಪುತ್ತೀರಾ? ಎಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಜೈಲಿನಿಂದ ಹಾಜರಾಗಿದ್ದ ಪ್ರದೋಷ್‌ ಅನ್ನು ನ್ಯಾಯಾಲಯವು ವಿಚಾರಿಸಿತು. ಅದಕ್ಕೆ ಒಪ್ಪುತ್ತೇನೆ ಎಂದು ಪ್ರದೂಷ್‌ ಉತ್ತರಿಸಿದನು. ಆ ಉತ್ತರ ದಾಖಲಿಸಿಕೊಂಡ ಪೀಠವು ಆದೇಶ ಪ್ರತಿಯನ್ನು ಇ-ಮೇಲ್‌ ಮತ್ತು ಅಂಚೆ ಮೂಲಕ ಪ್ರದೋಷ್‌ಗೆ ತಲುಪಿಸುವಂತೆ ರಿಜಿಸ್ಟ್ರಿಗೆ ಹಾಗೂ ಜೈಲು ಅಧಿಕಾರಿಗಳಿಗೆ ಸೂಚಿಸಿತು. ಆ ಮೂಲಕ ಎರಡನೇ ಬಾರಿಗೆ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿದಂತಾಗಿದೆ. ಇದರಿಂದ ದರ್ಶನ್‌ ಮತ್ತೆ ಆಘಾತ ಎದುರಾಗಿದೆ.

ಪ್ರದೋಷ್‌ ಜೈಲಿನಲ್ಲಿ ಬೇರೊಬ್ಬ ಕೈದಿಯ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ ಮೊಬೈಲ್‌ ಸಂಖ್ಯೆ ಬಳಸಿ ಮಾತನಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎನ್‌ಸಿಆರ್‌ (ಗಂಭೀರವಲ್ಲದ ಅಪರಾಧ ಪ್ರಕರಣ) ದಾಖಲಾಗಿದೆ. ಜೈಲಿನಲ್ಲಿ ಆತ ರಹಸ್ಯವಾಗಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಬಗ್ಗೆ ಅನೇಕ ವ್ಯಕ್ತಿಗಳು ಅತಿಯಾದ ಆಕ್ರೋಶ, ದ್ವೇಷ ಹೊಂದಿದ್ದಾರೆ. ಪ್ರತಿಸ್ಪರ್ಧಿಗಳು-ವಿರೋಧಿಗಳು ಸೇರಿ ಅನೇಕರು ದರ್ಶನ್‌ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರಿಂದ ಪ್ರದೋಷ್‌ ಯಾರ ಸಂಪರ್ಕದಲ್ಲಿದ್ದರು ಹಾಗೂ ಆತ ಯಾವ ಪ್ರಭಾವಕ್ಕೆ ಒಳಗಾಗಿದ್ದಾರೆ. ಪತ್ನಿಯ ಜೊತೆ ಮಾತಾಡಿದ್ದರೂ ಪ್ರದೋಷ್‌ ತಿಳಿಸಿದ್ದರೂ, ಆಕೆಗೆ ಯಾರು ಪ್ರಭಾವ ಬೀರಿದ್ದಾರೆ ಎನ್ನುವ ವಿಷಯ ಮುಖ್ಯ. ಆದ್ದರಿಂದ ಎನ್‌ಸಿಆರ್‌ಗೆ ಸಂಬಂಧಿಸಿದ ತನಿಖೆ ಪೂರ್ಣಗೊಳ್ಳುವರೆಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರದೋಷ್‌ ಕೋರಿರುವ ಅರ್ಜಿ ತೀರ್ಪು ಪ್ರಕಟ ತಡೆಹಿಡಿಯಬೇಕು. ಇಲ್ಲದಿದ್ದರೆ ತನಗೆ ಗಂಭೀರ ಅನ್ಯಾಯವಾಗುತ್ತದೆ ಎಂದು ಕೋರಿ ದರ್ಶನ್‌ ಮೊಮೊ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿ ನ್ಯಾಯಾಲಯ ಆದೇಶಿಸಿತು.

ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ 2026ರ ಆಗಸ್ಟ್‌ 25ರಂದು ಇದೇ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ದರ್ಶನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಪ್ರದೋಷನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರೊಬೆಷನ್‌ ಅಧಿಕಾರಿಯಿಂದ ವರದಿ ಪಡೆದ ಸತ್ರ ನ್ಯಾಯಾಲಯ ಕ್ರಮ ಸರಿಯಿಲ್ಲ. ಇದು ಪ್ರಕ್ರಿಯಾತ್ಮಕ ಲೋಪವಾಗಿದೆ. ಇದರಿಂದ ಪ್ರೊಬೆಷನ್‌ ಅಧಿಕಾರಿಯಿಂದ ವರದಿ ಪಡೆದ ಸೀಮಿತವಾಗಿ ಪ್ರದೂಷನ್‌ ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದ ಹೈಕೋರ್ಟ್‌, ಪ್ರಕರಣ ಸಂಬಂಧ ಹೊಸದಾಗಿ ಆದೇಶ ಮಾಡಬೇಕು. ಆದರೆ, ಹೊರತು ಮತ್ತೆ ವಿಚಾರಣೆ ನಡೆಸಬಾರದು ಎಂದು 2026ರ ಸೆಪ್ಟೆಂಬರ್‌ 8ರಂದು ಸತ್ರ ನ್ಯಾಯಾಲಯಕ್ಕೆ ಸೂಚಿಸಿತ್ತು.

ಅದರಂತೆ ಬುಧವಾರ ಹೊಸದಾಗಿ ಆದೇಶ ಮಾಡಿದ ಸತ್ರ ನ್ಯಾಯಾಲಯವು ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದೆ.

ಇದೇ ವೇಳೆ ಪ್ರಕರಣ ಸಂಬಂಧ ಜಾಮೀನು ಕೋರಿ ಮೊದಲನೆ ಆರೋಪಿಯಾದ ದರ್ಶನ್‌ ಗೆಳತಿ ಪವಿತ್ರಾ ಗೌಡ, 6 ಮತ್ತು 7ನೇ  ಆರೋಪಿಗಳಾದ ಜಗದೀಶ್‌ ಮತ್ತು ಅನುಕುಮಾರ್‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದ ಸರ್ಕಾರಿ ಅಭಿಯೋಜಕರು, ಈ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಕೋರಿದರು. ಆ ಮನವಿ ಪರಿಗಣಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 21ಕ್ಕೆ ಮುಂದೂಡಿತು.

ಹಾಗೆಯೇ, ಪ್ರಕರಣದ 234, 235, 236 ಮತ್ತು 246ನೇ ಸಾಕ್ಷಿಗಳಿಗೆ ಸಾಕ್ಷ್ಯ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತು. ಅನಾರೋಗ್ಯ ತುತ್ತಾಗಿರುವ 12ನೇ ಆರೋಪಿ ಲಕ್ಷ್ಮಣ್‌ ಅನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಲಾಗಿದೆ. ಕೆಲವೊಂದು ಪರೀಕ್ಷೆಗಳನ್ನು ನಡೆಸಲಾಗಿದೆ. ಆ ಕುರಿತ ವರದಿ ಬರಬೇಕಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.

Kannada Bar & Bench
kannada.barandbench.com