ಬೆಂಗಳೂರಿನ ಉದಾಹರಣೆ ನೀಡಿ ಅವ್ಯವಸ್ಥಿತ ನಗರೀಕರಣದ ಬಗ್ಗೆ ನೀತಿ ನಿರೂಪಕರನ್ನು ಎಚ್ಚರಿಸಿದ ಸುಪ್ರೀಂ ಕೋರ್ಟ್

ನಗರಾಭಿವೃದ್ಧಿಗೆ ಅನುಮತಿ ನೀಡುವ ಮೊದಲು ನಗರೀಕರಣದ ಪ್ರಭಾವದ ಮೌಲ್ಯಮಾಪನಕ್ಕೆ ಅಗತ್ಯವಾದ ನಿಯಮಾವಳಿ ರೂಪಿಸುವಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನೀತಿ ನಿರೂಪಕರಿಗೆ ಸುಪ್ರೀಂ ಕೋರ್ಟ್ ಒತ್ತಾಯಿಸಿತು.
Justice BR Gavai and Justice BV Nagarathna
Justice BR Gavai and Justice BV Nagarathna

ಬೆಂಗಳೂರು ನಗರದ ಉದಾಹರಣೆ  ನೀಡಿ ಅವ್ಯವಸ್ಥಿತ ನಗರೀಕರಣದಿಂದ ಉಂಟಾಗುವ ಪ್ರತಿಕೂಲ ಪರಿಸರ ಪರಿಣಾಮವನ್ನು ಪರಿಗಣಿಸುವಂತೆ ನೀತಿ ನಿರೂಪಕರನ್ನು ಸುಪ್ರೀಂ ಕೋರ್ಟ್ ಮಂಗಳವಾರ ಒತ್ತಾಯಿಸಿತು [​​ಚಂಡೀಗಢ ನಿವಾಸಿಗಳ ಕಲ್ಯಾಣ ಸಂಘ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶ ನಡುವಣ ಪ್ರಕರಣ].

ಚಂಡೀಗಢದಲ್ಲಿ ಅಪಾರ್ಟ್‌ಮೆಂಟ್‌ಗಳ ವಿಂಗಡಣೆ/ಉಪ-ವಿಂಗಡಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಾಲಯ ಒಂದು ಕಾಲದಲ್ಲಿ ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ಬೆಂಗಳೂರು ಹೇಗೆ ಹಾಳಾಗಿದೆ ಎಂಬ ಕುರಿತಾದ ಲೇಖನವನ್ನು ಉಲ್ಲೇಖಿಸಿತು.

ಬೆಂಗಳೂರು ನಗರದ ಎಚ್ಚರಿಕೆಯ ಕರೆಘಂಟೆ ಬಗ್ಗೆ ಶಾಸಕಾಂಗ, ಕಾರ್ಯಾಂಗ ಮತ್ತು ನೀತಿ ನಿರೂಪಕರು ಸೂಕ್ತ ರೀತಿಯಲ್ಲಿ ಗಮನ ಹರಿಸಬೇಕಿದೆ. ನಗರಾಭಿವೃದ್ಧಿಗೆ ಅನುಮತಿ ನೀಡುವ ಮೊದಲು ಅಂತಹ ಅಭಿವೃದ್ಧಿ ಪರಿಸರದ ಮೇಲೆ ಬೀರುವ ಪರಿಣಾಮದ ಕುರಿತ ಮೌಲ್ಯಮಾಪನ (ಇಐಎ) ಮಾಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಚಂಡೀಗಢ ಎಸ್ಟೇಟ್ ನಿಯಮಾವಳಿ ಪ್ರಕಾರ ಅಪಾರ್ಟ್‌ಮೆಂಟ್‌ ನಿರ್ಮಿಸಲು ಯಾವುದೇ ನಿವೇಶನದ ವಿಂಗಡಣೆಗೆ ಅವಕಾಶವಿಲ್ಲ. ಆದರೆ ಕೆಲವು ಡೆವಲಪರ್‌ಗಳು ಮೂರು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಅವುಗಳನ್ನು ಮೂರು ಬೇರೆ ಬೇರೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಚಂಡೀಗಢ ನಿವಾಸಿಗಳ ಕಲ್ಯಾಣ ಸಂಘ ಪಂಜಾಬ್‌ ಮತ್ತು ಚಂಡೀಗಢ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿತ್ತು. ಆದರೆ ಹೈಕೋರ್ಟ್‌ ಅರ್ಜಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಚಂಡೀಗಢದಲ್ಲಿ ಏಕ ವಾಸಕ್ಕೆ ಅವಕಾಶವಿರುವ ನಿವೇಶನಗಳ ವಿಂಗಡಣೆ ಅಥವಾ ʼಅಪಾರ್ಟ್‌ಮೆಂಟೀಕರಣʼವು ನಗರ ವಿನ್ಯಾಸಕ ಲು ಕಾರ್ಬುಸಿಯೇ ಅವರ ಪರಿಕಲ್ಪನೆಯಂತೆ ಮೂಡಿದ್ದ ಚಂಡೀಗಢದ 'ಶ್ವಾಸಕೋಶ'ಕ್ಕೆ (ಹಸಿರು ಪ್ರದೇಶ) ಘಾಸಿ ಉಂಟು ಮಾಡುತ್ತದೆ.

- ಸುಪ್ರೀಂ ಕೋರ್ಟ್‌

ಆದರೆ ಹೈಕೋರ್ಟ್‌ ಈ ರೀತಿ ಅನುಮತಿ ನೀಡುವುದು ಕಾನೂನುಬಾಹಿರ ಕೃತ್ಯವನ್ನು ಪರೋಕ್ಷವಾಗಿ ಮುಂದುವರಿಸಲು ಅನುಮತಿ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠವು ನಗರದ ಪರಿಸರ ರಕ್ಷಿಸುವ ಮಹತ್ವದ ಬಗ್ಗೆಯೂ ಒತ್ತಿ ಹೇಳಿತು.

ಚಂಡೀಗಢದ ಪಾರಂಪರಿಕ ನಗರ ಸ್ಥಾನಮಾನವನ್ನಾದರೂ ಹೈಕೋರ್ಟ್‌ ಪರಿಗಣಿಸಬೇಕಿತ್ತು ಎಂದು ಅದು ಚಾಟಿ ಬೀಸಿದೆ. ಆದ್ದರಿಂದ, ವಾಸ್ತುಶಿಲ್ಪಿ ಕಾರ್ಬುಸಿಯೇ ಕಲ್ಪನೆಯ  ಚಂಡೀಗಢದ ಪಾರಂಪರಿಕ ಸ್ಥಾನಮಾನವನ್ನು ರಕ್ಷಿಸಲು, ಏಕ- ವಾಸಸ್ಥಾನಗಳ ವಿಘಟನೆ  ತಡೆಯುವ ನಿರ್ದೇಶನಗಳನ್ನು ನ್ಯಾಯಾಲಯ ನೀಡಿತು.

ಯಾರು ಈ ಲು ಕಾರ್ಬುಸಿಯೇ?

ಆಧುನಿಕ ವಾಸ್ತುಶಿಲ್ಪದ ಪ್ರವರ್ತಕ ಎಂದೇ ಖ್ಯಾತರಾದ ಲು ಕಾರ್ಬುಸಿಯೇ ಸ್ವಿಸ್‌ ಮತ್ತು ಫ್ರೆಂಚ್‌ ವಾಸ್ತುಶಿಲ್ಪಿ, ನಗರ ವಿನ್ಯಾಸಕಾರ, ಲೇಖಕ ಹಾಗೂ ವರ್ಣಚಿತ್ರಕಾರ. ದೇಶದ ಮೊದಲ ಯೋಜಿತ ನಗರ ಎಂದೇ ಹೆಸರುವಾಸಿಯಾದ ಚಂಡೀಗಢ ನಗರ ವಿನ್ಯಾಸವನ್ನು ಮಾಡಿದ್ದು ಲು ಕಾರ್ಬುಸಿಯೇ. ಅಪೂರ್ಣವಾಗಿದ್ದ ಚಂಡೀಗಢದ ಮಾಸ್ಟಾರ್‌ ಪ್ಲಾನ್‌ಗೆ ತೇಪೆ ಹಚ್ಚುವ ಬದಲು ಇಡೀ ಯೋಜನೆಯನ್ನೇ ಬದಲಿಸಿ ನಿರ್ಣಾಯಕ ಕಾರ್ಯಾಚರಣೆ ಆರಂಭಿಸಿ ಸುಂದರ ನಗರಿ ರೂಪುಗೊಳ್ಳಲು ಕಾರಣರಾದವರು. ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಕಾರ್ಬುಸಿಯೇ ಆಧುನಿಕ ವಿನ್ಯಾಸದ ದಿಕ್ಸೂಚಿಯಾಗಿದ್ದಾರೆ.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Residents_Welfare_Association_Chandigarh_and_anr_vs_Union_Territory_of_Chandigarh_and_os_pdf.pdf
Preview

Related Stories

No stories found.
Kannada Bar & Bench
kannada.barandbench.com