ಬೆಂಜ್‌ ಕಾರು ಅಪಘಾತ: ಸಿಸಿಟಿವಿ ದೃಶ್ಯಾವಳಿ ಹಾರ್ಡ್‌ಡಿಸ್ಕ್‌ ಸಂಗ್ರಹಿಸಲು ಕೆಂಗೇರಿ ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನ

2024ರ ನ.2ರಂದು ಕೆ ಪಿ ಧನುಷ್‌ ಎಂಬಾತ ಚಲಾಯಿಸುತ್ತಿದ್ದ ಬೆಂಜ್‌ ಕಾರು ಕೆಂಗೇರಿ ಬಸ್‌ ನಿಲ್ದಾಣಕ್ಕೆ ತೆರಳುತ್ತಿದ್ದ ಪಾದಚಾರಿ ಸಂಧ್ಯಾ ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದರು ಎನ್ನಲಾಗಿತ್ತು.
Karnataka HC & Benz car
Karnataka HC & Benz car
Published on

ಪಾನಮತ್ತನಾಗಿ ಐಷಾರಾಮಿ ಬೆಂಜ್‌ ಕಾರು ಚಲಾಯಿಸಿರುವ ಚಾಲಕ ಕೆಂಗೇರಿಯ ಸಮೀಪ 30 ವರ್ಷದ ಸಂಧ್ಯಾ ಅವರ ಸಾವಿಗೆ ಕಾರಣವಾಗಿರುವ ಘಟನಾ ಸ್ಥಳದ ಸಿಸಿಟಿವಿ ತುಣುಕು ಒಳಗೊಂಡ ಹಾರ್ಡ್‌ಡಿಸ್ಟ್‌ ಜಪ್ತಿ ಮಾಡಲು ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಸಂಧ್ಯಾ ಪತಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಎನ್‌ ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“2.11.2024ರಂದು ಸಂಧ್ಯಾ ಮೃತಪಟ್ಟಿರುವ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಒಳಗೊಂಡ ಹಾರ್ಡ್‌ ಡಿಸ್ಕ್‌ ಅನ್ನು ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಜಪ್ತಿ ಮಾಡಬೇಕು. ಬೆಂಗಳೂರು ಪೊಲೋಸ್‌ ಆಯುಕ್ತರು, ಪಶ್ಚಿಮ ವಿಭಾಗದ ಡಿಸಿಪಿ, ಎಸಿಪಿ ಮತ್ತು ಕೆಂಗೇರಿ ಸಂಚಾರಿ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಇಡೀ ಘಟನೆಗೆ ಸಂಬಂಧಿಸಿದ ವಿಡಿಯೊ ಸಮೀಪದಲ್ಲೇ ಇರುವ ಬಿಬಿಎಂಪಿ ಸಾರ್ವಜನಿಕ ಶೌಚಾಲಯದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಸಂಧ್ಯಾ ಅಪಘಾತದಲ್ಲಿ ಮಡಿಯಲು ಧನುಷ್‌ ನಿರ್ಲಕ್ಷ್ಯ ಕಾರಣ ಎಂಬುದಕ್ಕೆ ಸಾಕ್ಷ್ಯ ಒದಗಿಸಲಿದೆ. ಸಿಸಿಟಿವಿ ದೃಶ್ಯಾವಳಿ ಪಡೆಯಲು ಅರ್ಜಿದಾರ ಶಿವಕುಮಾರ್‌ ಸಾಕಷ್ಟು ಪ್ರಯತ್ನ ಮಾಡಿದರೂ ಪೊಲೀಸರು ನೆರವಾಗಿಲ್ಲ. ಸರ್ವರ್‌ ಸಮಸ್ಯೆ, ಹಾರ್ಡ್‌ಡಿಸ್ಕ್‌ನಿಂದ ದೃಶ್ಯಾವಳಿ ಪಡೆಯಲು ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ನೆಪ ಹೇಳುತ್ತಿದ್ದಾರೆ. ಒಂದು ಕ್ಯಾಮೆರಾದಲ್ಲಿ ಎಚ್‌ಡಿಆರ್‌ ಇಲ್ಲ, ಇನ್ನೊಂದು ಕ್ಯಾಮೆರಾದ ಡಿವಿಆರ್‌ ಘಟನೆಯ ವಿಡಿಯೋ ಸೆರೆ ಹಿಡಿದಿಲ್ಲ ಎನ್ನುತ್ತಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಆರೋಪಿ ಧನುಷ್‌ ಪ್ರಭಾವಿಯಾಗಿದ್ದು, ಅವರ ಕುಟುಂಬಸ್ಥರು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ, ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ. ಹೀಗಾಗಿ, ಘಟನೆಯ ಹಾರ್ಡ್‌ ಡಿಸ್ಕ್‌ ಜಪ್ತಿ ಮಾಡಲು ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ವಕೀಲ ಟಿ ಶೇಷಗಿರಿ ರಾವ್‌ ವಕಾಲತ್ತು ಹಾಕಿದ್ದಾರೆ.

Also Read
ಪುಣೆ ಪೋಶ ಕಾರು ಅಪಘಾತ: ಬಾಲ ಆರೋಪಿ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ

ಪ್ರಕರಣದ ಹಿನ್ನೆಲೆ: 2024ರ ನವೆಂಬರ್‌ 2ರಂದು ಮೈಸೂರು ಕಡೆ ತೆರಳುತ್ತಿದ್ದ ಕೆ ಪಿ ಧನುಷ್‌ ಎಂಬಾತ ಚಲಾಯಿಸುತ್ತಿದ್ದ ಬೆಂಜ್‌ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ 30 ವರ್ಷದ ಎ ಎಸ್‌ ಸಂಧ್ಯಾ ಅವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದರು ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಧನುಷ್‌ ಪಾನಮತ್ತನಾಗಿದ್ದು, ಘಟನೆಯಲ್ಲಿ ದ್ವಿಚಕ್ರ ವಾಹನ ಚಾಲಕ ಸಯದ್‌ ಅರ್ಬಾಜ್‌ ಸಹ ಗಾಯಗೊಂಡಿದ್ದಾರೆ ಎಂದು 26 ವರ್ಷದ ಪುನೀತ್‌ ದೂರು ನೀಡಿದ್ದರು.

ಇದನ್ನು ಆಧರಿಸಿ ಕೆಂಗೇರಿ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 281 (ಅಜಾಗರೂಕ ಚಾಲನೆ),125(ಎ) (ಬೇರೊಬ್ಬರ ಪ್ರಾಣಕ್ಕೆ ಎರವಾಗುವುದು),105 (ನರಹಂತಕ-ಕಲ್ಪಬಲ್‌ ಹೊಮಿಸೈಡ್‌ ನಾಟ್‌ ರಿಸಲ್ಟಿಂಗ್‌ ಟು ಮರ್ಡರ್‌) ಅಡಿ ಪ್ರಕರಣ ದಾಖಲಾಗಿದೆ.

Kannada Bar & Bench
kannada.barandbench.com