ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿತನದವರು, ಪಾದಚಾರಿಗಳ ಜೀವ ತೆಗೆಯುತ್ತಾರೆ: ಹೈಕೋರ್ಟ್‌ ಕಿಡಿ

“ನನಗೇನಾದರೂ ಅವಕಾಶ ಸಿಕ್ಕರೆ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ. ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಜನ. ಅವರ ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ನಡೆದುಹೋಗುವ ಪಾದಚಾರಿಗಳ ಜೀವನವನ್ನು ಸುಲಭವಾಗಿ ತೆಗೆಯುತ್ತಾರೆ” ಎಂದ ಪೀಠ.
High Court of Karnataka
High Court of Karnataka
Published on

“ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿತನ ಹೊಂದಿದ್ದು, ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯುತ್ತಾರೆ” ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಹರಿಹಾಯ್ದಿದೆ.

ಹೊಲಕ್ಕೆ ನಡೆದು ಹೋಗುವಾಗ ರಸ್ತೆಬದಿಯ ಕೆಇಬಿ ಕಂಬದ ತಂತಿ ಸ್ಪರ್ಶವಾಗಿ, ವಿದ್ಯುತ್‌ ಪ್ರವಹಿಸಿ ಹುಡುಗನೊಬ್ಬ ತೀವ್ರ ಗಾಯಗೊಂಡ ಪ್ರಕರಣದಲ್ಲಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಸ್ಕಾಂನ ಜಗಳೂರು ವಿಭಾಗದ ಇಬ್ಬರು ಅಧಿಕಾರಿಗಳು ಮತ್ತು ಲೈನ್‌ ಮೆನ್‌ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪೀಠವು ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ಮೌಖಿಕವಾಗಿ ನಿರಾಕರಿಸಿ, ಅರ್ಜಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ? ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು, ಹೌದು.. ಎಂದು ಉತ್ತರಿಸಿ ಪ್ರಕರಣದ ಅಂಶಗಳನ್ನು ವಿವರಿಸಲು ಮುಂದಾದರು. 

ಆಗ ಪೀಠವು “ನನಗೇನಾದರೂ ಅವಕಾಶ ಸಿಕ್ಕರೆ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ. ಕಾರಣ, ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಅಧಿಕಾರಿಗಳು. ತಮ್ಮ ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ನಡೆದುಹೋಗುವ ಪಾದಚಾರಿಗಳ ಜೀವನವನ್ನು ಸುಲಭವಾಗಿ ತೆಗೆಯುತ್ತಾರೆ” ಎಂದು ತರಾಟೆಗೆ ತೆಗೆದುಕೊಂಡರು.

"ವಿದ್ಯುತ್‌ ತಂತಿಯು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಜೀವಕ್ಕೆ ಅಪಾಯವಿರುವ ಆ ತಂತಿಯನ್ನು ತೆರವುಗೊಳಿಸುವುದಿಲ್ಲ. ದೂರಿನ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಅವರಿಗೆ ಏನಾಗಬೇಕು? ಹವಾನಿಯಂತ್ರಿತ ಕಚೇರಿಯಲ್ಲಿಯೇ ಕೂತು ಎಲ್ಲಾ ಕೆಲಸ ಮಾಡುತ್ತಾರೆ. ಒಂದು ಸ್ಥಳವನ್ನು ಸಹ ಪರಿಶೀಲನೆ ಮಾಡುವುದಿಲ್ಲ. ಬೆಸ್ಕಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು. ಪುಣ್ಯ ಎಂದರೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರುವ ಬೆಸ್ಕಾಂ ಅಧಿಕಾರಿಗಳ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ" ಎಂದು ಪೀಠವು ಕಟುವಾಗಿ ನುಡಿಯಿತು.

ಅರ್ಜಿದಾರರ ಪರ ಕಿರಿಯ ವಕೀಲರು, ಅರ್ಜಿ ವಿಚಾರಣೆಯನ್ನು ಮುಂದೂಡಬೇಕು. ಮುಂದಿನ ವಿಚಾರಣೆ ವೇಳೆ ತಮ್ಮ ಹಿರಿಯ ವಕೀಲರು ವಾದ ಮಂಡಿಸುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ಗ್ರಾಮದ ನಿವಾಸಿ ಆರ್‌ ರವಿ 2020ರ ಅಕ್ಟೋಬರ್‌ 27ರಂದು ಪೊಲೀಸರಿಗೆ ದೂರು ನೀಡಿದ್ದರು. ಅಕ್ಟೋಬರ್‌ 26ರಂದು ಬೆಳಗ್ಗೆ 10.30ಕ್ಕೆ ತಮ್ಮ ಪುತ್ರ ಪಾಂಡುರಂಗ (15) ಹೊಲಕ್ಕೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದರು. ಹಸುವೊಂದು ಹೊಲಕ್ಕೆ ಹೋಗುತ್ತಿದ್ದನ್ನು ತಡೆಯಲು ಪಾಂಡುರಂಗ ಮುಂದಾದಾಗಿದ್ದ. ಈ ವೇಳೆ ಆತನ ಕಾಲು ರಸ್ತೆಬದಿ ಕೆಇಬಿ ಕಂಬದ ತಂತಿಗೆ ಸ್ಪರ್ಶವಾಗಿ, ವಿದ್ಯುತ್‌ ಪ್ರವಹಿಸಿದೆ. ಇದರಿಂದ ಪಾಂಡುರಂಗನ ಎರಡು ಕಾಲು ಮತ್ತು ಕೈಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ಬೆಸ್ಕಾಂನ ದಾವಣಗೆರೆ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಜಿ ಎಂ ಪ್ರವೀಣ್‌, ಸೆಕ್ಷನ್‌ ಆಫೀಸರ್‌ ಎಸ್‌ ಸಿ  ಚಂದ್ರಶೇಖರ ತಿಲಕ್‌ ಮತ್ತು ಲೈನ್‌ ಮ್ಯಾನ್‌ ಆಸೀಫ್‌ ಸೋಮಲಪುರ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದ್ದರು.

ದೂರಿನ ಆಧಾರದಲ್ಲಿ ತನಿಖೆ ನಡೆಸಿದ್ದ ಜಗಳೂರು ಠಾಣಾ ಪೊಲೀಸರು ಅರ್ಜಿದಾರರಾಗಿರುವ ಬೆಸ್ಕಾಂನ ಈ ಮೂವರು ಉದ್ಯೋಗಿಗಳ ವಿರುದ್ಧ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಜಗಳೂರು ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ತಮ್ಮ ವಿರುದ್ಧದ ಈ ಪ್ರಕರಣ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com