ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |08-07-2021

>> ಯಡಿಯೂರಪ್ಪ ವಿರುದ್ಧದ ಖಾಸಗಿ ದೂರು ವಜಾ >> ನ್ಯಾ. ನಿಜಗಣ್ಣವರ್‌ ಅವರಿಗೆ ಎಎಬಿ ವತಿಯಿಂದ ಬೀಳ್ಕೊಡುಗೆ >> ಸೆಷೆನ್ಸ್ ನ್ಯಾಯಾಲಯಗಳನ್ನು ವಿಶೇಷ ನ್ಯಾಯಾಲಯ ಎನ್ನಬಹುದೇ? ಬಾಂಬೆ ಹೈಕೋರ್ಟ್ ಪ್ರಶ್ನೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |08-07-2021
Published on

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರು ವಜಾಗೊಳಿಸಿದ ವಿಶೇಷ ನ್ಯಾಯಾಲಯ

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣವೊಂದರ ಸಂಬಂಧ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ವಿಚಾರಣೆಗೆ ಅನುಮತಿಸಲು ರಾಜ್ಯಪಾಲರು ನಿರಾಕರಿಸಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಯಿತು.

B.S. Yediyurappa
B.S. Yediyurappa

ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ದಾಖಲಾಗಿದ್ದ ದೂರು ಹಾಗೂ ಸೆಕ್ಷನ್‌ 156(3)ರ ಅಡಿ ದಾಖಲಾಗಿದ್ದ ಮಧ್ಯಂತರ ಅರ್ಜಿಗಳು ಅಧಿಕೃತ ಅನಮತಿ ದೊರೆಯದ ಕಾರಣಕ್ಕೆ ನಿರ್ವಹಣೆಗೊಳಪಡದೆ ಇರುವುದರಿಂದ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ‌ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಗೃಹ ನಿರ್ಮಾಣ ಯೋಜನೆಯೊಂದನ್ನು ಖಾಸಗಿ ಕಂಪೆನಿಗೆ ನೀಡಲು ರೂ.12.5 ಕೋಟಿ ಲಂಚ ಕೇಳಲಾಗಿತ್ತು ಎಂದು ಆಪಾದಿಸಿ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಸೇರಿದಂತೆ 9 ಮಂದಿಯ ವಿರುದ್ಧ ದೂರು ದಾಖಲಾಗಿತ್ತು.

ಅತ್ಯುತ್ತಮ ತೀರ್ಪುಗಳು ವಕೀಲ ವರ್ಗ ಮಂಡಿಸಿದ ಅತ್ಯುತ್ತಮ ವಾದದ ಫಲಿತಾಂಶಗಳು: ನ್ಯಾ. ನಿಜಗಣ್ಣವರ್‌

ಅತ್ಯುತ್ತಮ ತೀರ್ಪುಗಳು ಎಂದರೆ ನ್ಯಾಯವಾದಿ ವರ್ಗ ಮಂಡಿಸಿದ ಅತ್ಯುತ್ತಮ ವಾದದ ಫಲಿತಾಂಶಗಳಲ್ಲದೆ ಬೇರೇನೂ ಅಲ್ಲ ಎಂದು ನ್ಯಾಯಮೂರ್ತಿ ಅಶೋಕ್‌ ಜಿ ನಿಜಗಣ್ಣವರ್‌ ತಿಳಿಸಿದರು. ಬೆಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ತಮಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋವಿಡ್‌ ಸಂದರ್ಭದಲ್ಲಿ ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದ ಅವರು ನ್ಯಾಯಾಂಗ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು ಎಂದರು.

Justice Ashok G Nijagannavar farewell
Justice Ashok G Nijagannavar farewell

ನಿಜಗಣ್ಣವರ್‌ ಅವರನ್ನು ಸನ್ಮಾನಿಸಿದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಅತಿ ಕಡಿಮೆ ಅವಧಿಯಲ್ಲಿ ನಿಜಗಣ್ಣವರ್‌ 1,772 ಸಿವಿಲ್ ಪ್ರಕರಣಗಳು ಮತ್ತು 1,250 ಕ್ರಿಮಿನಲ್ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಸಂಘದ ಅಧ್ಯಕ್ಷ ಎ ಪಿ ರಂಗನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೆಷೆನ್ಸ್ ನ್ಯಾಯಾಲಯಗಳನ್ನು ವಿಶೇಷ ನ್ಯಾಯಾಲಯ ಎಂದು ಪರಿಗಣಿಸಬಹುದೇ? ಬಾಂಬೆ ಹೈಕೋರ್ಟ್‌ ಪ್ರಶ್ನೆ

ಎನ್‌ಐಎ ಕಾಯಿದೆಯಡಿ ವಿಶೇಷ ನ್ಯಾಯಾಲಯ ಎಂದು ಪರಿಗಣಿಸಿರದ ಸೆಷನ್ಸ್‌ ನ್ಯಾಯಾಧೀಶರು ಕಾಯಿದೆಯಡಿ ಬರುವ ಅಪರಾಧ ಪ್ರಕರಣಗಳನ್ನು ಆಲಿಸಬಹುದೇ ಎಂದು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಮಹಾರಾಷ್ಟ ಸರ್ಕಾರಕ್ಕೆ ಉತ್ತರಿಸಲು ಸೂಚಿಸಿದೆ.

Sudha Bharadwaj, Bombay High Court
Sudha Bharadwaj, Bombay High Court

ಡಿಫಾಲ್ಟ್‌ ಜಾಮೀನು ಕೋರಿ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಯಾಗಿರುವ ಸುಧಾ ಭಾರಧ್ವಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ.ಎಸ್‌ ಎಸ್‌ ಶಿಂಧೆ ಮತ್ತು ನ್ಯಾ.ಎನ್‌ ಜೆ ಜಾಮ್‌ದಾರ್ ಅವರಿದ್ದ ಪೀಠವು ಈ ಪ್ರಶ್ನೆ ಎತ್ತಿದೆ. ಪುಣೆಯ ಸೆಷನ್ಸ್‌ ನ್ಯಾಯಾಧೀಶರಾದ ಕೆ ಡಿ ವಡಾನೆ ಮತ್ತು ಆರ್‌ ಎಂ ಪಾಂಡೆ ಅವರು ನೀಡಿರುವ ಎರಡು ಪ್ರತ್ಯೇಕ ಆದೇಶಗಳು ಅವರ ನ್ಯಾಯಿಕವ್ಯಾಪ್ತಿಗೆ ಹೊರತಾಗಿದೆ ಎಂದು ಸುಧಾ ಭಾರಧ್ವಜ್ ಅವರು ಪ್ರಶ್ನಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆಯು ಜು.15ರಂದು ನಡೆಯಲಿದೆ. ‌

Kannada Bar & Bench
kannada.barandbench.com