Krishna Janmabhoomi - Shahi Idgah Dispute
Krishna Janmabhoomi - Shahi Idgah Dispute

ಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿ ಪ್ರಕರಣವನ್ನು ಹೈಕೋರ್ಟ್‌ ವಿಚಾರಣೆ ನಡೆಸುವುದು ಸೂಕ್ತ: ಸುಪ್ರೀಂ

ಸೂಕ್ಷ್ಮ ಪ್ರಕರಣವನ್ನು ಹೈಕೋರ್ಟ್‌ ವಿಚಾರಣೆ ನಡೆಸುವುದು ಸೂಕ್ತ. ಇದರಿಂದ ಸಂಬಂಧಿತರು ಬಹು ವಿಧದ ದಾವೆಯಲ್ಲಿ ತೊಡಗುವುದು ತಪ್ಪುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.
Published on

ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದವು ಸಮಾಜದಲ್ಲಿ ತಲ್ಲಣ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಇದಕ್ಕೆ ಸಂಬಂಧಿಸಿದ ಸಿವಿಲ್ ದಾವೆಯನ್ನು ಸಂಬಂಧಿತ ಎಲ್ಲರ ಹಿತದೃಷ್ಟಿಯಿಂದ ಅಲಾಹಾಬಾದ್‌ ಹೈಕೋರ್ಟ್‌ ವಿಚಾರಣೆ ನಡೆಸುವುದು ಸೂಕ್ತ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ [ಶಾಹಿ ಈದ್ಗಾ ಮಸೀದಿ ನಿರ್ವಹಣಾ ಸಮಿತಿ ವರ್ಸಸ್‌ ಭಗ್ವಾನ್‌ ಶ್ರೀಕೃಷ್ಣ ವಿರಾಜಮಾನ್‌].

ವಿವಾದಾತ್ಮಕ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ದಾವೆಗಳ ವಿಚಾರಣೆ ನಡೆಸಲು ಹೈಕೋರ್ಟ್‌ಗಳು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ಪ್ರಕರಣವನ್ನು ನೋಡಿದರೆ ಹೈಕೋರ್ಟ್‌ ಮಾತ್ರ ಇದನ್ನು ನಿರ್ಧರಿಸುವುದು ಸೂಕ್ತವಲ್ಲವೇ? ಇಂಥ ಪ್ರಕರಣಗಳು ಬಾಕಿ ಉಳಿಯುವುದರಿಂದ ಒಂದಲ್ಲಾ ಒಂದು ರೀತಿಯಲ್ಲಿ ತಲ್ಲಣ ಸೃಷ್ಟಿಯಾಗುತ್ತದೆ. ಇಂಥ ಸೂಕ್ಷ್ಮ ಪ್ರಕರಣಗಳಲ್ಲಿ ಬಹು ವಿಧದ ವಿಚಾರಣಾ ಪ್ರಕ್ರಿಯೆಗಳು ನಡೆಯುವುದು ತಪ್ಪುವುದು ಸಂಬಂಧಿತ ಎಲ್ಲರಿಗೂ ಉತ್ತಮವಲ್ಲವೇ? ಯಾರಾದರೊಬ್ಬರು ಈ ಬಗ್ಗೆ ಯೋಚಿಸಬೇಕು. ಹೈಕೋರ್ಟ್‌ ತನಗೆ (ಪ್ರಕರಣ) ವರ್ಗಾವಣೆ ಮಾಡಿಕೊಂಡಿರುವುದರಿಂದ ಬೇರೆ ರೀತಿಯ ದಾವೆಗೆ ಅವಕಾಶವಿರುವುದಿಲ್ಲ. ಅಂತಿಮವಾಗಿ ಎಲ್ಲವೂ ಮೂಲಭೂತ ಪ್ರಶ್ನೆಗಳನ್ನು ಆಧರಿಸಿರುತ್ತದೆ. ಎಲ್ಲರ ಹಿತದೃಷ್ಟಿಯಿಂದ ಹೈಕೋರ್ಟ್‌ ಇದನ್ನು ನಿರ್ವಹಿಸುವುದು ಉತ್ತಮ ಎನ್ನುವುದು ನನ್ನ ಅನಿಸಿಕೆ” ಎಂದು ನ್ಯಾ. ಕೌಲ್‌ ಹೇಳಿದರು.

ದಾವೆಯನ್ನು ವಿಚಾರಣಾಧೀನ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಪುರಸ್ಕರಿಸಿತ್ತು. ಇದನ್ನು ಶಾಹಿ ಈದ್ಗಾ ಮಸೀದಿ ನಿರ್ವಹಣಾ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ದಾವೆ ವರ್ಗಾವಣೆ ಅರ್ಜಿ ಸಲ್ಲಿಸದಿದ್ದರೂ ಹೈಕೋರ್ಟ್‌ ಪ್ರಕರಣವನ್ನು ವರ್ಗಾವಣೆ ಮಾಡಿಕೊಂಡಿದೆ. ವಿಚಾರಣಾಧೀನ ನ್ಯಾಯಾಲಯವು ದಾವೆಯ ಕುರಿತು ನಿರ್ಧರಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ ಎಂಬ ವಾದ ಆಧರಿಸಿ ಹೈಕೋರ್ಟ್‌ ಆದೇಶ ಮಾಡಿದೆ ಎಂದು ಶಾಹಿ ಈದ್ಗಾ ಮಸೀದಿ ನಿರ್ವಹಣಾ ಸಮಿತಿಯು ಮೇಲ್ಮನವಿಯಲ್ಲಿ ಹೇಳಿದೆ.

ಅಂತಿಮವಾಗಿ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾವೆಗಳ ವಿವರವನ್ನು ಸಲ್ಲಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.

Kannada Bar & Bench
kannada.barandbench.com