ಬಿಲ್ಡರ್‌ಗಳಿಗಷ್ಟೇ ನೆರವಾಗುತ್ತಿರುವ ರೇರಾ ರದ್ದುಗೊಳಿಸುವುದು ಒಳಿತು: ಸುಪ್ರೀಂ ಕೋರ್ಟ್‌

ರೇರಾ ಕಚೇರಿ ಸ್ಥಳಾಂತರ ವಿಚಾರವಾಗಿ ತನ್ನ ಅಧಿಸೂಚನೆ ಸ್ಥಗಿತಗೊಳಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
Real Estate
Real Estate
Published on

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳ ಕಾರ್ಯವೈಖರಿಯನ್ನು ಗುರುವಾರ ತೀಕ್ಷ್ಣವಾಗಿ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌ ಬಿಲ್ಡರ್‌ಗಳಿಗಷ್ಟೇ ನೆರವಾಗುತ್ತಿರುವ ಅವುಗಳನ್ನು ರದ್ದುಗೊಳಿಸುವುದು ಒಳಿತು ಎಂದು ಹೇಳಿದೆ [ಹಿಮಾಚಲ ಪ್ರದೇಶ ಸರ್ಕಾರ ಮತ್ತು ನರೇಶ್‌ ಶರ್ಮಾ ನಡುವಣ ಪ್ರಕರಣ].

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು (ರೇರಾ) ಜಾರಿಗೆ ತಂದ ಉದ್ದೇಶವೇನು ಎಂಬುದನ್ನು ರಾಜ್ಯ ಸರ್ಕಾರಗಳು ಪುನರ್‌ಮನನ ಮಾಡಿಕೊಳ್ಳಬೇಕು ಎಂದು ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

"ರೇರಾ ಸಂಸ್ಥೆ ರಚಿಸಿದ್ದು ಯಾರಿಗಾಗಿ ಎಂಬುದನ್ನು ಎಲ್ಲಾ ರಾಜ್ಯ ಸರ್ಕಾರಗಳು ಈಗ ಯೋಚಿಸಬೇಕು. ಸುಸ್ತಿದಾರರಾಗುವ ಬಿಲ್ಡರ್‌ಗಳಿಗೆ ಅನುಕೂಲ ಕಲ್ಪಿಸುವುದನ್ನು ಬಿಟ್ಟರೆ ಇದು ಬೇರೇನನ್ನೂ ಮಾಡುತ್ತಿಲ್ಲ. ಈ ಸಂಸ್ಥೆಯನ್ನು ರದ್ದುಗೊಳಿಸುವುದೇ ಉತ್ತಮ,” ಎಂದು ಸಿಜೆಐ ಕಿಡಿಕಾರಿದರು.

ರೇರಾ ಕಚೇರಿಯನ್ನು ಧರ್ಮಶಾಲಾಗೆ ಸ್ಥಳಾಂತರಿಸುವ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರದ ಅಧಿಸೂಚನೆಗೆ ಹಿಮಾಚಲ ಪ್ರದೇಶ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು. ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕಚೇರಿ ಸ್ಥಳವನ್ನು ಗುರುತಿಸದೇ ರೇರಾ ಸ್ಥಳಾಂತರದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿ 13.06.2025ರಂದು ಹಿಮಾಚಲ ಪ್ರದೇಶ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿ ಹೈಕೋರ್ಟ್‌ ಕಳೆದ ವರ್ಷ ಆದೇಶಿಸಿತ್ತು. ಜೊತೆಗೆ ಹೊರಗುತ್ತಿಗೆ ವಿಧಾನದಲ್ಲಿ ನೇಮಕಗೊಂಡಿದ್ದ 18 ಸಿಬ್ಬಂದಿಯನ್ನು ಇತರ ಮಂಡಳಿಗಳು ಮತ್ತು ನಿಗಮಗಳಿಗೆ ವರ್ಗಾಯಿಸುವ ಕ್ರಮ ರೇರಾ ಕಾರ್ಯವೈಖರಿಯನ್ನು ಸ್ಥಗಿತಗೊಳಿಸುತ್ತದೆ ಎಂದಿತ್ತು.

Also Read
ಐ- ಪ್ಯಾಕ್ ಪ್ರಕರಣದಲ್ಲಿ ಮಧ್ಯಪ್ರವೇಶಿಸದೆ ಹೋದರೆ ಅರಾಜಕತೆ ಎಂದ ಸುಪ್ರೀಂ ಕೋರ್ಟ್; ಮಮತಾ ಬ್ಯಾನರ್ಜಿಗೆ ನೋಟಿಸ್

ಆದರೆ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್‌ ರೇರಾ ಕಚೇರಿಯನ್ನು ಶಿಮ್ಲಾದಿಂದ ಧರ್ಮಶಾಲೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತು. ಇದರಿಂದ ಪ್ರಭಾವಿತರಾದವರಿಗೆ ಅನನಕೂಲವಾಗದಂತೆ ನೋಡಿಕೊಳ್ಳಲು ಮೇಲ್ಮನವಿ ನ್ಯಾಯಮಂಡಳಿಯನ್ನೂ ಧರ್ಮಶಾಲೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿತು.

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲೆ ಮಾಧವಿ ದಿವಾನ್‌ ವಾದ ಮಂಡಿಸಿದರು. ಇದೇ ರೀತಿಯ ಮತ್ತೊಂದು ಪ್ರಕರಣದಲ್ಲೂ ಹಿಮಾಚಲ ಪ್ರದೇಶ ಹಿಂದುಳಿದ ವರ್ಗಗಳ ಆಯೋಗದ ಮುಖ್ಯ ಕಚೇರಿ ಸ್ಥಳಾಂತರಕ್ಕೆ ಹೈಕೋರ್ಟ್ ನೀಡಿದ್ದ ತಡೆ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದುದನ್ನು ನ್ಯಾಯಾಲಯ ಉಲ್ಲೇಖಿಸಿತು.

Kannada Bar & Bench
kannada.barandbench.com